ETV Bharat / entertainment

ಬೆಂಗಳೂರು ಭೂಗತ ಲೋಕ ತೆರೆ ಮೇಲೆ.. ಡಾಲಿ ಡಾನ್ ಲುಕ್​ಗೆ ಮೆಚ್ಚುಗೆ

author img

By

Published : Oct 21, 2022, 1:26 PM IST

ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ್ದ ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಹೆಡ್​ ಬುಷ್​ ಸಿನಿಮಾ ಇಂದು ರಾಜ್ಯಾದ್ಯಂತ 350ಕ್ಕೂ ಚಿತ್ರಮಂದಿರಗಳಲ್ಲಿ ತೆರೆ ಕಂಡು ಸಿನಿ ಪ್ರಿಯರಿಂದ ಮೆಚ್ಚುಗೆ ಗಳಿಸುತ್ತಿದೆ.

Actor dolly dhananjay starrer Head bush movie released
ಹೆಡ್​ ಬುಷ್​ ಸಿನಿಮಾ ಬಿಡುಗಡೆ

ಭಾರತೀಯ ಚಿತ್ರರಂಗ ಅಲ್ಲದೇ ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುತ್ತಿದೆ. ಸೂಪರ್ ಹಿಟ್ ಚಿತ್ರಗಳು ನಮ್ಮ ಸ್ಯಾಂಡಲ್​ವುಡ್​ನಲ್ಲಿ ಮೂಡಿ ಬರುತ್ತಿವೆ. ಜೇಮ್ಸ್, ಕೆಜಿಎಫ್ 2, ವಿಕ್ರಾಂತ್ ರೋಣ, 777 ಚಾರ್ಲಿ, ಸದ್ಯ ಎಲ್ಲ ಕಡೆ ಬೇಜಾನ್ ಹವಾ ಸೃಷ್ಟಿಸಿರೋ ಕಾಂತಾರ ಸಿನಿಮಾ ಟ್ರೆಂಡ್ ಸೆಟ್ ಮಾಡಿದೆ. ಬಿಡುಗಡೆ ಅಗಲಿರುವ ಗಂಧದ ಗುಡಿ ಕೂಡ ದೊಡ್ಡ ಭರವಸೆ ಕೊಟ್ಟಿದೆ.

ಈ ಹಾದಿಯಲ್ಲಿ ನಟರಾಕ್ಷಸ ಡಾಲಿ ಅಭಿನಯದ ಹೆಡ್​​ ಬುಷ್​ ಸಿನಿಮಾವಿದೆ. ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ್ದ ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಹೆಡ್​ ಬುಷ್​ ಸಿನಿಮಾ ಇಂದು ರಾಜ್ಯಾದ್ಯಂತ 350ಕ್ಕೂ ಚಿತ್ರಮಂದಿರಗಳಲ್ಲಿ ತೆರೆ ಕಂಡು ಸಿನಿ ಪ್ರಿಯರಿಂದ ಮೆಚ್ಚುಗೆ ಗಳಿಸುತ್ತಿದೆ.

ಬೆಂಗಳೂರು ಭೂಗತ ಲೋಕದ ಡಾನ್ ಎಂ ಪಿ ಜಯರಾಜ್ ಹೇಗೆ ತನ್ನ ಸಾಮ್ರಾಜ್ಯ ಕಟ್ಟಿಕೊಂಡ, ಜಯರಾಜ್ ಆಳ್ವಿಕೆ ಹೇಗೆ ಆರಂಭ ಆಯಿತು, ಜಯರಾಜ್​ ಅವಕಾಶಗಳನ್ನು ಹೇಗೆ ಬಳಸಿಕೊಳ್ತಾನೆ, ಆತ ಹೇಗೆ ಬೆಳೆಯುತ್ತಾನೆ? ರಾಜಕೀಯಕ್ಕೂ-ಭೂಗತ ಲೋಕಕ್ಕೂ ಯಾವ ರೀತಿಯ ನಂಟಿತ್ತು ಎಂಬುದರ ಕಥೆಯನ್ನು 'ಹೆಡ್​ ಬುಷ್'ನ ಮೊದಲ ಭಾಗದಲ್ಲಿ ಬಿಚ್ಚಿಡಲಾಗಿದೆ. ಡಾನ್ ಎಂ ಪಿ ಜಯರಾಜ್ ಪಾತ್ರಕ್ಕೆ ಅದ್ಭುತ ನಟನೆಂದು ಖ್ಯಾತಿ ಪಡೆದಿರುವ ಡಾಲಿ ಧನಂಜಯ್​ ಜೀವ ತುಂಬಿದ್ದಾರೆ.

ಹೆಡ್​ ಬುಷ್​ ಸಿನಿಮಾ ಬಿಡುಗಡೆ

ಈ ಸಿನಿಮಾ ಬಿಡುಗಡೆಗೂ ಮುನ್ನ ನಟ ಹಾಗೂ ನಿರ್ಮಾಪಕ ಡಾಲಿ ಧನಂಜಯ್ ಪೇಯ್ಡ್ ಪ್ರಿಮಿಯರ್ ಶೋ ಅನ್ನು ಆಯೋಜಿಸಿದ್ದರು. ‌ಈ ಶೋಗೂ ಕೂಡ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇದರ ಜೊತೆಗೆ ಹೆಡ್ ಬುಷ್ ಕಥೆಗಾರ ಅಗ್ನಿ ಶ್ರೀಧರ್, ನಟರಾದ ಯೋಗಿ ಫ್ಯಾಮಿಲಿ, ಧನಂಜಯ್ ಸ್ನೇಹಿತರಿಗಾಗಿ ಬೆಂಗಳೂರಿನ ಮಾಲ್ ​ಒಂದರಲ್ಲಿ ಸ್ಪೆಷಲ್ ಶೋ ಹಮ್ಮಿಕೊಳ್ಳಲಾಗಿತ್ತು. ಸಿನಿಮಾ ಪ್ರೇಕ್ಷಕರ ಜೊತೆ ಹೆಡ್ ಬುಷ್ ಚಿತ್ರತಂಡ‌ ಚಿತ್ರವನ್ನು ವೀಕ್ಷಿಸಿದರು. ಅಗ್ನಿ ಶ್ರೀಧರ್, ಧನಂಜಯ್, ಯೋಗಿ ಸಿನಿಮಾ ಗೆಲ್ಲುವ ಖುಷಿಯನ್ನು ಸೆಲೆಬ್ರೇಟ್ ಮಾಡಿದರು.

ಜಯರಾಜ್ ಬಾಲ್ಯದಿಂದಲೂ ಒರಟು ಹುಡುಗ. ತನ್ನ ಏರಿಯಾದಲ್ಲಿ ತಕ್ಕ ಮಟ್ಟಿಗೆ ಹೆಸರು ಮಾಡಿರುತ್ತಾನೆ. ರಾಜಕಾರಣಿ ಎಂ.ಡಿ ನಟರಾಜ್ ಇಂದಿರಾ ಬ್ರಿಗೇಡ್ ಕಟ್ಟಲು ಜಯರಾಜ್ ಅನ್ನು ಬಳಸಿಕೊಳ್ಳುತ್ತಾನೆ. ಜಯರಾಜ್ ಕೂಡ ರಾಜಕಾರಣಿಯ ಬೆಂಬಲದೊಂದಿಗೆ ದೊಡ್ಡ ರೌಡಿಯಾಗುತ್ತಾನೆ. ಆದರೆ, ಈ ನಡುವೆ ಆಗುವ ಸಣ್ಣ ಮನಸ್ಥಾಪ ಆತನ ಆತ್ಮೀಯ ಗೆಳೆಯನೊಟ್ಟಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಆ ನಂತರ ಜಯರಾಜ್ ವಿರುದ್ಧ ರಾಜಕಾರಣಿಗಳು ಹೇಗೆ ಸಂಚು ರೂಪಿಸಿದರು, ಏನೆಲ್ಲಾ ಆಯಿತು ಎಂಬುದು ಹೆಡ್​ ಬುಷ್​ ಕಥೆ.

ಹೆಡ್ ಬುಷ್ ಚಿತ್ರದಲ್ಲಿ ಜಯರಾಜ್ ಪಾತ್ರಕ್ಕೆ‌ ಡಾಲಿ ಧನಂಜಯ್ ಜೀವ ತುಂಬಿದ್ದಾರೆ. ವಾಕಿಂಗ್ ಸ್ಟೈಲ್ ಮತ್ತು ಮೀಸೆ ತಿರುವುದು ಹಾಗು ಎಡಗೈಯಲ್ಲಿ ಸಿಗರೇಟ್ ಹಿಡಿದು ಚಿಟ್ಕೆ ಹೊಡೆಯೋದನ್ನು ನೋಡಿದ್ರೆ ಥೇಟ್ ಜಯರಾಜ್ ತರ ಕಾಣ್ತಾರೆ‌. ಇದರ ಜೊತೆಗೆ ಜಯರಾಜ್ ಆತ್ಮೀಯ ಗೆಳೆಯ ಗಂಗಾ ಪಾತ್ರ ಮಾಡಿರೋ ಲೂಸ್ ಮಾದ ಯೋಗಿ ಈ ಚಿತ್ರದಲ್ಲಿ ಗಮನ ಸೆಳೆಯುತ್ತಾರೆ‌.

ಸ್ಯಾಮ್‌ಸಂಗ್‌ ಪಾತ್ರ ಮಾಡಿರೋ ಬಾಲು ನಾಗೇಂದ್ರ ಅಭಿನಯಕ್ಕೆ ಸ್ಕೋಪ್ ಇದೆ. ನಾಯಕಿ ಪಾಯಲ್ ರಜಪೂತ್, ದೇವರಾಜ್, ರಘು ಮುಖರ್ಜಿ, ಶ್ರುತಿ ಹರಿಹರನ್, ವಸಿಷ್ಠ ಸಿಂಹ, ಶೋಭಾರಾಜ್, ಬಾಲಾಜಿ ಮನೋಹರ್, ಅಶ್ವಿನಿ ಹಾಸನ್‌, ಪ್ರಕಾಶ್ ಬೆಳವಾಡಿ ಕೊಟ್ಟ ಪಾತ್ರಗಲ್ಲಿ ಗಮನ‌ ಸೆಳೆಯುತ್ತಾರೆ‌.

ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ ಚಿತ್ರದ ಟೈಟಲ್​ ಬಿಡುಗಡೆ: ಚಿತ್ರದ ಬಗ್ಗೆ ಕುತೂಹಲ ಇದೆ ಎಂದ ಸಂಜುಬಾಬಾ

70 ಹಾಗು 80ರ ದಶಕವನ್ನು ನಿರ್ದೇಶಕ ಶೂನ್ಯ ತೋರಿಸಿದ್ದಾರೆ. ಈ ಚಿತ್ರದಲ್ಲಿ ರೆಟ್ರೋ ಕಾಲದ ಕ್ಲಬ್ ನೋಡುಗರ ಗಮನ‌ ಸೆಳೆಯುತ್ತದೆ. ಸಂಗೀತ ‌ನಿರ್ದೇಶಕ‌ ಚರಣ್ ಹಿನ್ನಲೆ‌ ಸಂಗೀತ ಸನ್ನಿವೇಶಗಳಿಗೆ ತಕ್ಕಂತೆ ಮೂಡಿ ಬಂದಿದೆ. ಸುನೋಜ್ ಕ್ಯಾಮರಾ ವರ್ಕ್ ಈ ಚಿತ್ರಕ್ಕಿದ್ದು ಡಾಲಿ ಧನಂಜಯ್ ಹಾಗು ಸೋಮಣ್ಣ ಈ‌ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಒಟ್ಟಿನಲ್ಲಿ ಹೆಡ್ ಬುಷ್ ಪಾರ್ಟ್ 1ರಲ್ಲಿ ಜಯರಾಜ್ ಬಗ್ಗೆ ಅರ್ಧ ಕಥೆ ಹೇಳಲಾಗಿದ್ದು, ಹೆಚ್ಚಿನ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹೆಡ್ ಬುಷ್ ಪಾರ್ಟ್ 2 ಇನ್ನು ರೋಚಕದಿಂದ‌‌ ಕೂಡಿರುತ್ತದೆ ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.