ETV Bharat / entertainment

'ದಿ ಕೇರಳ ಸ್ಟೋರಿ' ಸಿನಿಮಾ ನಿಷೇಧಕ್ಕೆ ನಟ ಚೇತನ್​ ಅಹಿಂಸಾ ವಿರೋಧ

author img

By

Published : May 2, 2023, 11:35 AM IST

ನಟ ಚೇತನ್​ ಅಹಿಂಸಾ ಅವರು 'ದಿ ಕೇರಳ ಸ್ಟೋರಿ' ಚಿತ್ರದ ಮೇಲಿನ ನಿಷೇಧವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

The Kerala Story
ದಿ ಕೇರಳ ಸ್ಟೋರಿ

ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೇರಳದಲ್ಲಿ ಸುಮಾರು 32,000 ಮಹಿಳೆಯರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್‌ನ ಸದಸ್ಯರನ್ನಾಗಿ ಮಾಡಲಾಗಿದೆ ಎಂಬ ಕಥಾವಸ್ತುವನ್ನು ಸಿನಿಮಾ ಹೊಂದಿದೆ. ಈಗಾಗಲೇ ಟ್ರೇಲರ್​ ರಿಲೀಸ್​ ಆಗಿದ್ದು, ಸಿನಿಮಾ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ಚಿತ್ರವನ್ನು ಬ್ಯಾನ್​ ಮಾಡುವಂತೆ ಅನೇಕ ರಾಜಕೀಯ ವ್ಯಕ್ತಿಗಳು, ಮುಸ್ಲಿಂ ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ.

ಈ ಮಧ್ಯೆ ಸ್ಯಾಂಡಲ್​ವುಡ್​ ನಟ ಚೇತನ್​ ಅಹಿಂಸಾ ಚಿತ್ರದ ಮೇಲಿನ ನಿಷೇಧವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. "ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ' ಮೇ 5ರಂದು ತೆರೆಗೆ ಬರಲಿದೆ. ನಾನು ಈ ಹಿಂದೆ ಸಮುದಾಯದ/ ಲಿಂಗದ ವಿರುದ್ಧ ದ್ವೇಷ ಮತ್ತು ಅವಹೇಳನ ಮಾಡುವ ಚಲನಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ, ಸೈದ್ಧಾಂತಿಕ ಆಧಾರದ ಮೇಲೆ ಸೆನ್ಸಾರ್​ ಮಂಡಳಿಯಿಂದ ಅನುಮತಿ ಪಡೆದ ಚಲನಚಿತ್ರವನ್ನು ರಾಜ್ಯವು ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಗತ್ಯ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಶಶಿ ತರೂರ್ ಪ್ರತಿಕ್ರಿಯೆ: 'ದಿ ಕೇರಳ ಸ್ಟೋರಿ' ಚಿತ್ರದ ಕುರಿತು ನಡೆಯುತ್ತಿರುವ ವಿವಾದದ ನಡುವೆ, ಕಾಂಗ್ರೆಸ್ ಸಂಸದ ಶಶಿ ತರೂರ್ "ಚಲನಚಿತ್ರವನ್ನು ನಿಷೇಧಿಸಲು ಕರೆ ನೀಡುತ್ತಿಲ್ಲ. ಆದರೆ ಇದು ರಾಜ್ಯದ ನೈಜತೆಯನ್ನು ತಪ್ಪಾಗಿ ನಿರೂಪಿಸುತ್ತದೆ" ಎಂದು ಹೇಳಿದ್ದಾರೆ. ಅವರು ಈ ಹಿಂದೆ ಟ್ವೀಟ್​ ಮಾಡಿ "ಇದು ನಿಮ್ಮ ಕೇರಳದ ಕಥೆಯಾಗಿರಬಹುದು. ಇದು ನಮ್ಮ ಕೇರಳದ ಕಥೆಯಲ್ಲ ಸುದೀಪ್ತೋ ಸೇನ್" ಎಂದು ಹೇಳಿದ್ದರು. ಇದೀಗ ಮತ್ತೆ ಈ ಬಗ್ಗೆ ಮಾತನಾಡಿದ್ದು, "ನಾನು ಸಿನಿಮಾವನ್ನು ಬ್ಯಾನ್​ ಮಾಡಿ ಎಂದು ಹೇಳುತ್ತಿಲ್ಲ. ಆದರೆ ಇದು ವಾಸ್ತವವನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ಯ ದುರುಪಯೋಗವಾಗುತ್ತಿದೆ. ಇದನ್ನು ಪ್ರಶ್ನಿಸುವ ಹಕ್ಕು ಕೇರಳಿಗರಿಗೆ ಇದೇ ಅನ್ನೋದು ನನ್ನ ಭಾವನೆ" ಎಂದು ಹೇಳಿದ್ದಾರೆ.

ಸಲ್ಮಾನ್​ ಹೇಳಿಕೆಗೆ ಚೇತನ್​ ಆಕ್ಷೇಪ: ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಅವರು ಮಹಿಳೆಯರ ದೇಹವು ತುಂಬಾ ಮೌಲ್ಯಯುತವಾಗಿದ್ದು, ಬಟ್ಟೆಯಿಂದ ಮುಚ್ಚಲ್ಪಟ್ಟಷ್ಟೂ ಒಳ್ಳೆಯದು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. "ನನ್ನ ಪ್ರಕಾರ ಹೆಣ್ಣಿನ ದೇಹಕ್ಕೆ ಬೆಲೆ ಇದೆ. ಬಟ್ಟೆಯಿಂದ ರಕ್ಷಣೆ ಕೊಟ್ಟಷ್ಟೂ ಅವರಿಗೆ ಒಳಿತು. ಇದು ಹೆಣ್ಣಿನ ಬಗ್ಗೆ ಹೇಳೋ ಮಾತಲ್ಲ, ನಮ್ಮ ಹಾಗೆ ಹೆಣ್ಣನ್ನು ನಡೆಸಿಕೊಳ್ಳುವ ಕೆಲವರ ಹೇಳಿಕೆ. ಮಹಿಳೆಯರು ಅವಮಾನಕ್ಕೊಳಗಾಗುವುದನ್ನು ನಾನು ಬಯಸುವುದಿಲ್ಲ" ಎಂದು ಹೇಳಿದ್ದಾರೆ. ಇವರ ಈ ಮಾತಿಗೆ ನಟ ಚೇತನ್​ ಅಹಿಂಸಾ ತಿರುಗೇಟು ನೀಡಿದ್ದಾರೆ.

"ಮಹಿಳೆಯರ ದೇಹವು ಅಮೂಲ್ಯ, ದೇಹವನ್ನು ಅವರು ಮುಚ್ಚಿಕೊಂಡಷ್ಟು ಒಳ್ಳೆಯದು ಎಂದು ಫಿಲ್ಮ್​ ಸ್ಟಾರ್​ ಸಲ್ಮಾನ್​ ಖಾನ್​ ಹೇಳಿದ್ದಾರೆ. ಅವರು ಈ ಮಾತು ಅತ್ಯಂತ ವ್ಯಂಗ್ಯವಾಗಿ ಕಾಣುತ್ತಿದೆ. ತನ್ನ ವೈಯಕ್ತಿಕ ದುರ್ವರ್ತನೆಗಳು ಮತ್ತು ಮಹಿಳೆಯರ ದೇಹದೊಂದಿಗೆ ಪ್ರಶ್ನಾರ್ಹ ವಿಧಾನಗಳಿಗೆ ಹೆಸರುವಾಸಿಯಾಗಿರುವ ಸಲ್ಮಾನ್​ ಖಾನ್​ ಈಗ ಮಹಿಳೆಯರು ಹೇಗೆ ಬಟ್ಟೆ ಧರಿಸಬೇಕು ಎಂಬುದರ ಕುರಿತು ನೈತಿಕ ಪೊಲೀಸ್​ಗಿರಿ ಮಾಡುತ್ತಿದ್ದಾರೆ. ಸಲ್ಮಾನ್​ ಖಾನ್​ ಈ ರೀತಿ ಮಾತನಾಡುವುದರಿಂದ ಅವರ ಅಜ್ಞಾನ, ಜೂಜಾಟಿಕೆ ಮತ್ತು ಪುರುಷ ಪ್ರಧಾನ ಮನಸ್ಥಿತಿಯು ಹೆಚ್ಚು ಸ್ಪಷ್ಟವಾಗಿ ಕಾಣುತ್ತಿದೆ" ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: 'ದಿ ಕೇರಳ ಸ್ಟೋರಿ'ಯಲ್ಲಿನ ಆರೋಪ ಸಾಬೀತು ಮಾಡಿದ್ರೆ 1 ಕೋಟಿ ರೂ. ಬಹುಮಾನ: ಎಂವೈಎಲ್ ಮುಖಂಡ ಫಿರೋಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.