ETV Bharat / entertainment

ನರೇಂದ್ರ ಮೋದಿ ಬಯೋಪಿಕ್​​: ಮೋದಿ ಪಾತ್ರದಲ್ಲಿ ಅಮಿತಾಭ್​ ಬಚ್ಚನ್ ಅಭಿನಯ?

author img

By

Published : Jul 21, 2023, 2:27 PM IST

Updated : Jul 21, 2023, 2:35 PM IST

ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರಕ್ಕೆ ಹಿರಿಯ ನಟ ಅಮಿತಾಭ್​ ಬಚ್ಚನ್ ಸೂಕ್ತ ಎಂದು ನಿರ್ಮಾಪಕಿ ಪ್ರೇರಣಾ ಅರೋರಾ ತಿಳಿಸಿದ್ದಾರೆ.

Amitabh Bachchan to PM Narendra Modi biopic?
ಪ್ರಧಾನಿ ಮೋದಿ ಪಾತ್ರಕ್ಕೆ ಅಮಿತಾಭ್​ ಬಚ್ಚನ್

ಅಮಿತಾಭ್​ ಬಚ್ಚನ್​​ ಹಿಂದಿ ಚಿತ್ರರಂಗದ ಹಿರಿಯ, ಪ್ರಸಿದ್ಧ ನಟ. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಇವರು ತಮ್ಮ 80ರ ಹರೆಯದಲ್ಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಅಮಿತಾಭ್​ ಅಭಿನಯಿಸುತ್ತಿರುವ ಪ್ರಾಜೆಕ್ಟ್​ ಕೆ ಅಥವಾ 'ಕಲ್ಕಿ 2898 ಎಡಿ' ಸದ್ಯ ಸಖತ್​ ಸುದ್ದಿಯಲ್ಲಿದೆ. ನಟನ ಮತ್ತೊಂದು ಸಿನಿಮಾ ಕುರಿತು ಆಸಕ್ತಿದಾಯಕ ವಿಚಾರವೊಂದು ಹೊರಬಿದ್ದಿದೆ. ಹೌದು, ಬಾಲಿವುಡ್​ ಬಹುಬೇಡಿಕೆ ನಟ ಅಮಿತಾಭ್​ ಬಚ್ಚನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರಂತೆ.

'ಟಾಯ್ಲೆಟ್: ಏಕ್ ಪ್ರೇಮ್ ಕಥಾ', 'ಪ್ಯಾಡ್ ಮ್ಯಾನ್', 'ಕೇದಾರನಾಥ್' ಮತ್ತು 'ಪರಿ'ಯಂತಹ ಸಿನಿಮಾಗಳಿಗೆ ಹೆಸರುವಾಸಿಗಿರುವ ನಿರ್ಮಾಪಕಿ ಪ್ರೇರಣಾ ಅರೋರಾ (Prerna Arora) ಅವರು ಪ್ರಸ್ತುತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚರಿತ್ರೆ ನಿರ್ಮಿಸಲು ಯೋಜಿಸುತ್ತಿದ್ದಾರೆ. ನರೇಂದ್ರ ಮೋದಿ ಅವರನ್ನು ತೆರೆಮೇಲೆ ಚಿತ್ರಿಸಲು ಅಮಿತಾಭ್ ಬಚ್ಚನ್ ಅವರು ಸೂಕ್ತ ಎಂದು ಭಾವಿಸಿರುವ ನಿರ್ಮಾಪಕರು ಈ ಸಿನಿಮಾಗೆ ಬಚ್ಚನ್ ಅವರನ್ನೇ ಆಯ್ಕೆ ಮಾಡುವ ಬಯಕೆ ಹೊಂದಿದೆ.

ಇತ್ತೀಚಿನ ಸಂದರ್ಶನದಲ್ಲಿ ಪ್ರೇರಣಾ ಅರೋರಾ ಅವರು ಪಿಎಂ ನರೇಂದ್ರ ಮೋದಿ ಬಯೋಪಿಕ್ ನಿರ್ಮಾಣ ಮಾಡಲು ಬಯಸಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತದ ಪ್ರಧಾನ ಮಂತ್ರಿ ಅವರ ಜೀವನಚರಿತ್ರೆ ಮಾಡಲು ಬಯಸುತ್ತೇನೆ. ಏಕೆಂದರೆ ಅವರು ಭಾರತದ ಅತ್ಯಂತ ಕ್ರಿಯಾತ್ಮಕ, ಸುಂದರ ಮತ್ತು ಸಮರ್ಥ ವ್ಯಕ್ತಿ. ಹಾಗೆಯೇ ಮೋದಿ ಅವರಿಗಿಂತ ಶ್ರೇಷ್ಠ ನಾಯಕನ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಬಯೋಪಿಕ್‌ನಲ್ಲಿ ಪ್ರಧಾನಿ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ? ಎಂಬ ಪ್ರಶ್ನೆ ಎದುರಾದಾಗ, ಆ ಪಾತ್ರಕ್ಕೆ ಸೂಕ್ತ ಎನಿಸುವ ಏಕೈಕ ನಟ ಮಿಸ್ಟರ್ ಅಮಿತಾಭ್ ಬಚ್ಚನ್ ಎಂದರು. ಮೋದಿ ಅವರ ಬಯೋಪಿಕ್‌ಗೆ ಬಿಗ್ ಬಿ ಸೂಕ್ತ ಆಯ್ಕೆಯಾಗಿರುತ್ತಾರೆ. ಅವರ ಸ್ಥಾನವನ್ನು ಬೇರೆ ಯಾರಿಂದಲೂ ಹೊಂದಿಸಲು ಸಾಧ್ಯವಿಲ್ಲ ಎಂದು ನಿರ್ಮಾಪಕರು ಹೇಳಿದರು. ಆದಾಗ್ಯೂ, ಬಿಗ್​ ಬಿ ಈ ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆಯೇ? ಎಂಬುದರ ಕುರಿತು ಪ್ರೇರಣಾ ಅವರು ಬಹಿರಂಗಪಡಿಸಲಿಲ್ಲ.

ಇದನ್ನೂ ಓದಿ: Project K First Glimpse: 'ಕಲ್ಕಿ 2898 ಎಡಿ' ಟೈಟಲ್​ನೊಂದಿಗೆ ಪ್ರಾಜೆಕ್ಟ್ ಕೆ ಫಸ್ಟ್ ಗ್ಲಿಂಪ್ಸ್ ರಿಲೀಸ್‌

ನೀವು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯೇ? ಎಂಬ ಪ್ರಶ್ನೆ ಎದುರಾದಾಗ ನಿರ್ಮಾಪಕರು, "ಯಾರು ಅವರ ಅಭಿಮಾನಿಯಲ್ಲ?" ಎಂದು ಮರು ಪ್ರಶ್ನಿಸಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾದ ನಂತರ ಅವರ ಜೀವನದ ಕುರಿತು ಈ ಬಯೋಪಿಕ್​ನಲ್ಲಿ ಹೇಳುವ ಯೋಜನೆ ಇದೆಯಂತೆ. ವಿದೇಶಾಂಗ ನೀತಿಯಿಂದ ಹಿಡಿದು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಅವರ ಪಾತ್ರ, ಕೋವಿಡ್ -19 ಪರಿಸ್ಥಿತಿ ನಿಭಾಯಿಸಿದ್ದು ಸೇರಿದಂತೆ, ಲಸಿಕೆಗಳ ವಿತರಣೆ ವರೆಗಿನ ವಿವಿಧ ಅಂಶಗಳನ್ನು ಒಳಗೊಂಡಿದೆ ಎಂದು ಪ್ರೇರಣಾ ತಿಳಿಸಿದರು.

ಇದನ್ನೂ ಓದಿ: ಗ್ರ್ಯಾಮಿ ಪ್ರಶಸ್ತಿ ಸದಸ್ಯರಾಗಿ ಗಾಯಕ ಶ್ರೀರಾಮ್ ಅಯ್ಯರ್ ಆಯ್ಕೆ

ಈಗಾಗಲೇ ಪಿಎಂ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರವೊಂದು ಮೂಡಿ ಬಂದಿದೆ. ಅದರಲ್ಲಿ ನಟ ವಿವೇಕ್ ಒಬೆರಾಯ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. 2019ರ ಚಿತ್ರದ ಬಗ್ಗೆ ಮಾತನಾಡಿದಾಗ, ಪ್ರೇರಣಾ ಅವರು ವಿವೇಕ್ ಒಬೆರಾಯ್ ಅಭಿನಯದ ಆ ಬಯೋಪಿಕ್​ ಅನ್ನು ವೀಕ್ಷಿಸಿಲ್ಲ ಎಂದು ತಿಳಿಸಿದರು. ಆದರೆ ತಮ್ಮ ಮುಂದಿನ ಈ ಚಿತ್ರವು ಅದ್ಭುತ, ನ್ಯಾಯಯುತವಾಗಿರುತ್ತದೆ ಎಂದು ಭರವಸೆ ನೀಡಿದರು.

Last Updated :Jul 21, 2023, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.