ETV Bharat / entertainment

ಆಸ್ಕರ್ 2024: ನಾಮನಿರ್ದೇಶನ ಪ್ರಕ್ರಿಯೆಗೆ ಮಲಯಾಳಂನ '2018: ಎವ್ರಿಒನ್​​ ಈಸ್ ಎ ಹೀರೋ' ಎಂಟ್ರಿ

author img

By ETV Bharat Karnataka Team

Published : Sep 27, 2023, 2:17 PM IST

Updated : Sep 27, 2023, 2:31 PM IST

2018-Everyone is a Hero: ಆಸ್ಕರ್ 2024ರ ನಾಮನಿರ್ದೇಶನ ಪ್ರಕ್ರಿಯೆ ಆರಂಭಗೊಂಡಿದೆ. ಭಾರತದಿಂದ ಮಲಯಾಳಂ ಸಿನಿಮಾ '2018: ಎವ್ರಿಒನ್​​ ಈಸ್ ಎ ಹೀರೋ' ಚಿತ್ರವನ್ನು ಆಯ್ಕೆ ಮಾಡಲಾಗಿದೆ.

2018-Everyone is a Hero
2018: ಎವ್ರಿಒನ್​​ ಈಸ್ ಎ ಹೀರೋ

ಮಲಯಾಳಂ ಸಿನಿಮಾ '2018: ಎವ್ರಿಒನ್​​ ಈಸ್ ಎ ಹೀರೋ' (2018-Everyone is a Hero) ಆಸ್ಕರ್ 2024 ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಇಂದು ತಿಳಿಸಿದೆ. ಟೊವಿನೋ ಥಾಮಸ್ (Tovino Thomas) ಮುಖ್ಯಭೂಮಿಕೆಯ ಈ ಸಿನಿಮಾ ಮೇನಲ್ಲಿ ತೆರೆಕಂಡು ಅಭೂತಪೂರ್ವ ಯಶಸ್ಸು ಗಳಿಸಿದೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಈ ಸಿನಿಮಾವೂ ಒಂದು. ಇದೀಗ ಆಸ್ಕರ್ 2024 ನಾಮನಿರ್ದೇಶನ ಪ್ರಕ್ರಿಯೆಗೆ ಪ್ರವೇಶ ಪಡೆದುಕೊಂಡಿದೆ.

  • " class="align-text-top noRightClick twitterSection" data="">

ಈ ಚಿತ್ರವು ಕೇರಳದಲ್ಲಿ ಭಾರಿ ಅವಾಂತರ ಸೃಷ್ಟಿಸಿದ ಪ್ರವಾಹದ ಹಿನ್ನೆಲೆಯ ಕಥೆಯನ್ನೊಳಗೊಂಡಿದೆ. ಇದೀಗ ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಸ್ಥಾನ ಪಡೆಯುವ ಮೂಲಕ ಅಪರೂಪದ ಗೌರವಕ್ಕೆ ಪಾತ್ರವಾಗಿದೆ. 16 ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯು ಭಾರತೀಯ ಚಿತ್ರರಂಗದ ಹಲವು ಸಿನಿಮಾಗಳನ್ನು ಪರಿಶೀಲಿಸಿ ಅಂತಿಮವಾಗಿ '2018: ಎವ್ರಿಒನ್​​ ಈಸ್ ಎ ಹೀರೋ' ಚಿತ್ರವನ್ನು ಆಯ್ಕೆ ಮಾಡಿತು.

2018ರಲ್ಲಿ ಕೇರಳದ ಕೆಲ ಪ್ರದೇಶಗಳನ್ನು ಧ್ವಂಸಗೊಳಿಸಿದ್ದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಈ ಚಿತ್ರಕಥೆ ಸುತ್ತುತ್ತದೆ. ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಆಯ್ಕೆ ಸಮಿತಿ ಅಧ್ಯಕ್ಷರಾದ ಗಿರೀಶ್ ಕಾಸರವಳ್ಳಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹವಾಮಾನ ಬದಲಾವಣೆ ಮತ್ತು ಜನರು ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಿದರು.

ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರಕರ ಮಾತನಾಡಿ, ಗಿರೀಶ್ ಕಾಸರವಳ್ಳಿ ನೇತೃತ್ವದ 16 ಸದಸ್ಯರ ಸಮಿತಿಯಿಂದ ಆಸ್ಕರ್​ಗೆ ಸಿನಿಮಾ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದು ಬಹಿರಂಗಪಡಿಸಿದರು. ಇದೊಂದು ಕಠಿಣ ಆಯ್ಕೆ ಪ್ರಕ್ರಿಯೆ ಆಗಿತ್ತು, ಸಿನಿಮಾಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು ಎಂದು ತಿಳಿಸಿದರು. 22 ಸಿನಿಮಾಗಳ ಪೈಕಿ ಆಸ್ಕರ್​ ನಾಮನಿರ್ದೇಶನಕ್ಕೆ '2018: ಎವ್ರಿಒನ್​​ ಈಸ್ ಎ ಹೀರೋ' ಆಯ್ಕೆ ಆಗಿದೆ. ದಿ ಕೇರಳ ಸ್ಟೋರಿ (ಹಿಂದಿ), ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಮಿಸೆಸ್​ ಚಟರ್ಜಿ ವರ್ಸಸ್ ನಾರ್ವೆ (ಹಿಂದಿ), ಬಲಗಂ (ತೆಲುಗು), ವಾಲ್ವಿ (ಮರಾಠಿ), ಬಾಪ್ಲ್​ಯೋಕ್ (ಮರಾಠಿ), ಆಗಸ್ಟ್ 16, 1947 (ತಮಿಳು) ಸೇರಿದಂತೆ 22 ಚಿತ್ರಗಳ ಪೈಕಿ '2018: ಎವ್ರಿಒನ್​​ ಈಸ್ ಎ ಹೀರೋ' ಆಸ್ಕರ್​ಗೆ ಅರ್ಹ ಸಿನಿಮಾ ಆಗಿ ಆಯ್ಕೆಯಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂ.ಅನ್ನು ಅತ್ಯಂತ ವೇಗವಾಗಿ ತಲುಪಿದ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಜೂಡ್ ಆಂಥನಿ ಜೋಸೆಫ್ (Jude Anthany Joseph) ನಿರ್ದೇಶನದ ಈ ಚಿತ್ರದಲ್ಲಿ ಆಸಿಫ್ ಅಲಿ, ಕುಂಚಾಕೋ ಬೋಬನ್, ಲಾಲ್, ನರೈನ್, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ತನ್ವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ವಿಮರ್ಷಕರು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ.

ಇದನ್ನೂ ಓದಿ: 'ಲೋಕಾನೆ ಗರಡಿ..ಬಾಳೇ ಅಖಾಡ': 'ಗರಡಿ' ಟೈಟಲ್ ಸಾಂಗ್ ಬಿಡುಗಡೆ

ಜೂಡ್ ಆಂಥನಿ ಜೋಸೆಫ್ ಅವರು ಕೇರಳದ ಪ್ರವಾಹದ ಭಯಾನಕ ದೃಶ್ಯಗಳನ್ನು ತೆರೆಮೇಲೆ ಯಶಸ್ವಿಯಾಗಿ ಮರುಸೃಷ್ಟಿಸಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೇಣು ಕುಣ್ಣಪ್ಪಿಳ್ಳಿ, ಸಿ.ಕೆ ಪದ್ಮ ಕುಮಾರ್, ಆಂಥೋನಿ ಜೋಸೆಫ್ ಅವರು ಕಾವ್ಯ ಫಿಲ್ಮ್ ಕಂಪನಿ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: ನಯನತಾರಾ ವಿಘ್ನೇಶ್​ ಶಿವನ್​​​ ಅವಳಿ ಮಕ್ಕಳ ಮೊದಲ ವರ್ಷದ ಜನ್ಮದಿನ: ಫೋಟೋ ಹಂಚಿಕೊಂಡ ಸ್ಟಾರ್ ಕಪಲ್

Last Updated : Sep 27, 2023, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.