ETV Bharat / city

ಮುಗಿಲೆತ್ತರ ಬೆಳೆದು ನಿಂತ ತೆಂಗು, ಅಡಿಕೆ ಮರಗಳು ನೆಲಸಮ: ರೈತ ಕುಟುಂಬದ ಕಣ್ಣೀರು

author img

By

Published : Aug 25, 2021, 8:58 AM IST

Updated : Aug 25, 2021, 9:10 AM IST

ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ತೋಟದಲ್ಲಿ ತೆಂಗು ಹಾಗೂ ಅಡಿಕೆ ಮರಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದವು. ಇವುಗಳಿಂದ ಕೈಸೇರುವ ಫಸಲಿನಿಂದಾಗಿ ಬಡ ಕುಟುಂಬವೊಂದರ ಬಾಳು ಹಸನಾಗುತ್ತದೆ ಎನ್ನುವಷ್ಟರಲ್ಲಿಯೇ ತೋಟವನ್ನು ನೆಲಸಮ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಹೂಲಿಹಳ್ಳಿಯಲ್ಲಿ ನಡೆದಿದೆ.

cut downed the more than 100 Coconut and areca nut tree
ಹೂಲಿಹಳ್ಳಿಯಲ್ಲಿ ತೆಂಗು, ಅಡಿಕೆ ಮರಗಳು ನೆಲಸಮ ಮಾಡಲಾಯಿತು

ತುಮಕೂರು: ಬಡ ಕುಟುಂಬವೊಂದು ಒಂದು ಎಕರೆ ಜಾಗದಲ್ಲಿ ಕಷ್ಟಪಟ್ಟು ತೆಂಗು, ಅಡಿಕೆ ಮರಗಳನ್ನು ಬೆಳೆಸಿದ್ದರು. ಹತ್ತಾರು ವರ್ಷದಿಂದ ಫಸಲಿಗಾಗಿ ಕಾದು ಕುಳಿತಿದ್ದ ಕುಟುಂಬಸ್ಥರಿಗೆ ಇನ್ನೇನು ಬೆಳೆ ಕೈ ಸೇರುತ್ತದೆ ಅನ್ನುವಷ್ಟರಲ್ಲಿಯೇ ಅರ್ಧ ತೋಟವನ್ನೇ ನೆಲಸಮ ಮಾಡಲಾಗಿದೆ. ಪರಿಣಾಮ, ಇಡೀ ರೈತ ಕುಟುಂಬವೇ ಕಣ್ಣೀರಿಡುತ್ತಿದೆ.

ತಿಪಟೂರು ತಾಲೂಕಿನ ಹೂಲಿಹಳ್ಳಿಯಲ್ಲಿ ಗ್ರಾಮದ ಸರ್ವೇ ನಂಬರ್ 95 , 96, 97 ರ 1 ಎಕರೆ ಭೂಮಿಯಲ್ಲಿ ದೊಡ್ಡಚಿಕ್ಕಯ್ಯ ಎಂಬುವರು ತೋಟ ಮಾಡಿಕೊಂಡಿದ್ದರು. ಇವರ ತೋಟದ ಮಧ್ಯೆ ಬಂಡಿ ಜಾಡು ಹಾದು ಹೋಗುತ್ತದೆ ಎಂದು ಸಮಜಾಯಿಷಿ ನೀಡಿದ ತಹಶೀಲ್ದಾರ್ ಚಂದ್ರಶೇಖರ್, ಏಕಾಏಕಿ ಜೆಸಿಬಿ ತಂದು ಮರಗಳನ್ನು ಉರುಳಿಸಿದ್ದಾರೆ ಎಂದು ತೋಟದ ಮಾಲೀಕ ದೊಡ್ಡಚಿಕ್ಕಯ್ಯ ಆರೋಪಿಸಿದ್ದಾರೆ.

ಹೂಲಿಹಳ್ಳಿಯಲ್ಲಿ ತೆಂಗು, ಅಡಿಕೆ ಮರಗಳು ನೆಲಸಮ ಮಾಡಲಾಯಿತು

'ತಮ್ಮ ತೋಟದ ಪಕ್ಕದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಇದ್ದಿಲು ಕಾರ್ಖಾನೆ ಇದೆ. ಅವರಿಗೆ ರಸ್ತೆ ಮಾಡಿಕೊಡುವ ಸಲುವಾಗಿ ನಮ್ಮ ತೋಟವನ್ನು ನಾಶ ಮಾಡಿದ್ದಾರೆ ಎನ್ನುವುದು ಮಾಲೀಕರ ಆರೋಪ. ಇದ್ದಿಲು ಫ್ಯಾಕ್ಟರಿಗೆ ಹೋಗಲು ಈಗಾಗಲೇ ತೋಟದ ಕೊನೆಯ ಬದಿಯಲ್ಲಿ 12 ಅಡಿ ರಸ್ತೆ ಬಿಡಲಾಗಿದೆ. ಅಲ್ಲಿಂದಲೇ ಇಷ್ಟು ವರ್ಷ ಓಡಾಡುತ್ತಿದ್ದರು. ಇನ್ನೂ ಬೇಕಾದ್ರೆ ಅದೇ ಬದಿಯಲ್ಲಿ 5, 6 ಅಡಿ ಜಾಗ ಬಿಟ್ಟುಕೊಡಬಹುದಿತ್ತು. ಇದನ್ನು ಲೆಕ್ಕಿಸದೇ ತಹಶೀಲ್ದಾರ್ ಚಂದ್ರಶೇಖರ್, ಫ್ಯಾಕ್ಟರಿ ಮಾಲೀಕ ನಿಂಗಪ್ಪನವರ ಪ್ರಭಾವಕ್ಕೆ ಒಳಗಾಗಿ ತೋಟದ ನಡುಮಧ್ಯೆ ರಸ್ತೆ ಮಾಡಲು ಮರಗಳನ್ನು ಉರುಳಿಸಿದ್ದಾರೆ. ತೋಟದ ಮಧ್ಯೆ 30 ಅಡಿ ರಸ್ತೆ ನಿರ್ಮಿಸಿ ಕೊಡುವ ಸಲುವಾಗಿ 60 ಅಡಿಕೆ ಗಿಡ, 50 ತೆಂಗಿನ ಮರಗಳನ್ನು ಕರುಣೆ ಇಲ್ಲದೇ ನಾಶ ಮಾಡಿದ್ದಾರೆ' ಎಂದು ದೊಡ್ಡಚಿಕ್ಕಯ್ಯ ದೂರಿದ್ದಾರೆ.

ಈ ಆರೋಪವನ್ನು ತಹಶೀಲ್ದಾರ್ ಚಂದ್ರಶೇಖರ್ ತಳ್ಳಿಹಾಕಿದ್ದು, 'ಕಾನೂನು ಬದ್ದವಾಗಿ ನೋಟಿಸ್ ನೀಡಿ ಬಂಡಿ ಜಾಡು ದಾರಿಯನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಅದೇ ಜಾಗದಲ್ಲಿ ಖರಾಬು ಜಾಗ ಇದೆ, ಅದು ಸಂಪೂರ್ಣ ಸರ್ಕಾರಕ್ಕೆ ಸೇರಿರುವುದರಿಂದ ಖರಾಬು ಜಾಗದಲ್ಲಿ ರಸ್ತೆ ಮಾಡಲಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ತೋಟ ತೆರವುಗೊಳಿಸುವ ವೇಳೆ ಹೂಲಿಹಳ್ಳಿ ಗ್ರಾಮದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತೋಟದಲ್ಲಿ 50 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

Last Updated : Aug 25, 2021, 9:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.