ETV Bharat / city

ರಾಜ್ಯದಲ್ಲಿ 'ಟೆಂಟ್‌ ಟೂರಿಸಂ': ಮೈಸೂರಿನ ಲಲಿತ ಮಹಲ್ ಹೋಟೆಲ್ ಆವರಣ ಆಯ್ಕೆ

author img

By

Published : Jul 19, 2022, 1:23 PM IST

ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ದೃಷ್ಟಿಯಿಂದ ಇದೀಗ ರಾಜ್ಯದಲ್ಲಿ 'ಟೆಂಟ್‌ ಟೂರಿಸಂ' ಪರಿಕಲ್ಪನೆ ಅಳವಡಿಸಲಾಗುತ್ತಿದೆ.

Lalitha Mahal Palace Hotel
ಮೈಸೂರಿನ ಲಲಿತ ಮಹಲ್ ಹೋಟೆಲ್

ಮೈಸೂರು: ಪ್ರವಾಸೋದ್ಯಮಕ್ಕೆ ಶಕ್ತಿ ತುಂಬಲು ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ 'ಟೆಂಟ್ ಟೂರಿಸಂ' ಪ್ರಾರಂಭಿಸಲು ಮೈಸೂರಿನ ಪಾರಂಪರಿಕ ಲಲಿತ ಮಹಲ್ ಹೋಟೆಲ್ ಆವರಣವನ್ನು ಆಯ್ಕೆ ಮಾಡಿಕೊಂಡಿದೆ. ಕೋವಿಡ್ ನಂತರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಪಾರಂಪರಿಕ ಪ್ರವಾಸಿ ತಾಣಗಳಲ್ಲಿ ಟೆಂಟ್ ಟೂರಿಸಂ ಆರಂಭಿಸಲು ಯೋಜನೆ ಹಾಕಿಕೊಂಡಿದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದ್ದು ಆರ್ಥಿಕ ಹೊರೆ ಕಡಿಮೆ ಆಗಲಿದೆ. ಜತೆಗೆ ಹೋಟೆಲ್ ಮಾಲೀಕರಿಗೂ ಲಾಭವಾಗಲಿದೆ ಎಂಬ ನಿರೀಕ್ಷೆಯಿದೆ.

ಏನಿದು ಟೆಂಟ್ ಟೂರಿಸಂ?: ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಸಫಾರಿಗೆ ಹಾಗೂ ಪ್ರಕೃತಿ ರಮಣೀಯ ಪ್ರದೇಶಗಳಿಗೆ ಹೋಗಿ ವಾಪಸ್ ವಾಸ್ತವ್ಯಕ್ಕೆ ಬರುವ ವೇಳೆಗೆ ಹೋಟೆಲ್​​ ರೂಂಗಳು ಸಿಗುವುದು ಕಷ್ಟ. ಇಂತಹ ಸಂದರ್ಭದಲ್ಲಿ ಹೋಟೆಲ್ ಮುಂಭಾಗದಲ್ಲಿ, ಸುತ್ತ ಮುತ್ತ ಸುರಕ್ಷಿತ ಸ್ಥಳಗಳಲ್ಲಿ ಹಾಗೂ ಪ್ರವಾಸಿ ತಾಣಗಳ ಸುರಕ್ಷಿತ ಸ್ಥಳಗಳಲ್ಲಿ ಟೆಂಟ್ ಹಾಕಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವುದೇ 'ಟೆಂಟ್ ಟೂರಿಸಂ'.

ಅನುಕೂಲಗಳೇನು?: ಪ್ರವಾಸಿ ಸ್ಥಳಗಳನ್ನು ನೋಡಲು ಬರುವ ಪ್ರವಾಸಿಗರಿಗೆ ಮುಖ್ಯ ಸಮಸ್ಯೆ ವಾಸ್ತವ್ಯ. ಇದು ದುಬಾರಿಯಾಗಿ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಆದರೆ ಈ ಟೆಂಟ್ ಟೂರಿಸಂ ಆರಂಭಿಸಿದರೆ ಪ್ರವಾಸಿ ಸ್ಥಳದ ಸುರಕ್ಷಿತ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಬಜೆಟ್​​ನಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ಟೆಂಟ್ ನಿರ್ಮಾಣ ಮಾಡಿಕೊಡುವುದರಿಂದ ಹೆಚ್ಚಿನ ಹೊರೆಯಾಗುವುದಿಲ್ಲ. ಜೊತೆಗೆ ಪ್ರವಾಸಿ ತಾಣಗಳು, ಪ್ರಕೃತಿ ತಾಣಗಳಲ್ಲಿ ರಾತ್ರಿ ಕಳೆಯುವುದರಿಂದ ಇನ್ನೂ ಹೆಚ್ಜಿನ ಪ್ರವಾಸಿಗರನ್ನು ಆಕರ್ಷಣೆ ಮಾಡಬಹುದು. ಇದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.

Lalitha Mahal Palace Hotel
ಮೈಸೂರಿನ ಲಲಿತ ಮಹಲ್ ಹೋಟೆಲ್

ಎಲ್ಲೆಲ್ಲಿ ಯಶಸ್ವಿಯಾಗಿದೆ?: ಟೆಂಟ್ ಟೂರಿಸಂಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ತಯಾರಿಸಿದೆ. ಅಧಿಕೃತವಾಗಿ ಖಾಸಗಿ ವ್ಯಕ್ತಿಗಳು ನೋಂದಣಿ ಮಾಡಿಕೊಂಡು ಈ ಉದ್ಯಮವನ್ನು ಆರಂಭಿಸಬಹುದು ಅಥವಾ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಟೆಂಡರ್ ಮಾಲಕ ಆರಂಭಿಸಬಹುದು. ಈಗಾಗಲೇ ಈ ಟೆಂಟ್ ಟೂರಿಸಂ ರಾಜಸ್ತಾನದ ಅರಮನೆ ಬಳಿ ಆರಂಭಿಸಿ ಯಶಸ್ವಿಯಾಗಿದೆ. ಜೊತೆಗೆ ಕೇರಳದ ಹಲವು ಪ್ರದೇಶಗಳಲ್ಲಿ ಈ ಟೆಂಟ್ ಟೂರಿಸಂ ಯಶಸ್ವಿಯಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಇದನ್ನು ಆರಂಭಿಸಿದರೆ ಹೆಚ್ಜಿನ ಉದ್ಯೋಗ ಅವಕಾಶ ಸೃಷ್ಟಿ ಮಾಡಬಹುದು. ಜೊತೆಗೆ ಪ್ರವಾಸೋದ್ಯಮದ ಅಭಿವೃದ್ಧಿಯಾಗಲು ಹಾಗೂ ಉದ್ಯೋಗಕ್ಕಾಗಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಬಹುದು ಎನ್ನಲಾಗಿದೆ.

ಲಲಿತ್ ಮಹಲ್ ಹೋಟೆಲ್​​ನಲ್ಲಿ ಮೊದಲ ಪ್ರಯೋಗ: ರಾಜ್ಯದಲ್ಲಿ ಟೆಂಟ್ ಟೂರಿಸಂ ಆರಂಭಿಸಲು ಹಿಂದೆ ಇದ್ದ ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ ಮಹೇಶ್ ಯೋಜನೆ ರೂಪಿಸಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡ ಹಿನ್ನೆಲೆ ಈ ಯೋಜನೆ ಜಾರಿಯಾಗಲಿಲ್ಲ. ಈಗ ಪ್ರವಾಸೋದ್ಯಮ ಸಚಿವರಾಗಿರುವ ಆನಂದ್ ಸಿಂಗ್ ಲಲಿತ್ ಮಹಲ್ ಹೋಟೆಲ್ ಸುತ್ತ-ಮುತ್ತ ಇರುವ 54 ಎಕರೆ ಪ್ರದೇಶದಲ್ಲಿ ಟೆಂಟ್ ಟೂರಿಸಂ ಪ್ರಾರಂಭಿಸಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಒಂದು ಬಾರಿ ಲಲಿತ ಮಹಲ್ ಹೋಟೆಲ್​​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರವೇ ಈ ಯೋಜನೆಗೆ ಚಾಲನೆ ನೀಡುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಪ್ರವಾಸೋದ್ಯಮ ತಾಣಗಳ ಬಳಿ ಹಾಗೂ ಪಾರಂಪರಿಕ ಸ್ಥಳಗಳಲ್ಲಿ ಹೊಸ ಕಟ್ಟಡ ಕಟ್ಟಲು ಅವಕಾಶ ಇಲ್ಲ. ಇದರಿಂದ ಪ್ರವಾಸಿಗರಿಗೆ ವಾಸ್ತವ್ಯ ಕೊರತೆ ಉಂಟಾಗುತ್ತದೆ. ಈ ಸಮಸ್ಯೆಯನ್ನ ಬಗೆಹರಿಸಲು ಟೆಂಟ್ ಟೂರಿಸಂ ಅನುಕೂಲವಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ ಎನ್ನುವ ಅಭಿಪ್ರಾಯ ಸಚಿವರದ್ದು ಎಂದು ಮೈಸೂರು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಲಲಿತ ಮಹಲ್ ಬಳಿಯ ಹೆಲಿಪ್ಯಾಡ್ ರಾಜಮನೆತನಕ್ಕೆ ಸೇರಿದ್ದು ಎಂದ ಸುಪ್ರೀಂ.. ವಿವಾದದ ವಿವರ ಹೀಗಿದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.