'ಪುಟಗೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಮೈತ್ರಿ ಸರ್ಕಾರ ಕೆಡವಿದರು': ಕುಮಾರಸ್ವಾಮಿ ವಾಗ್ದಾಳಿ

author img

By

Published : Oct 12, 2021, 1:45 PM IST

Updated : Oct 12, 2021, 2:31 PM IST

'ಪುಟಗೋಸಿ ವಿರೋಧ ಪಕ್ಷದ ನಾಯಕ‌ನ ಸ್ಥಾನಕ್ಕಾಗಿ ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಕೆಡವಿದರು. ಅವರೊಬ್ಬ ಕುತಂತ್ರಿ ರಾಜಕಾರಣಿ' ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು: ಸಿದ್ದರಾಮಯ್ಯನವರಿಗೆ ಬೇಕಿರುವುದು ಪವರ್ ಮಾತ್ರ. ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಪುಟಗೋಸಿ ವಿರೋಧ ಪಕ್ಷದ ನಾಯಕ‌ ಸ್ಥಾನಕ್ಕಾಗಿ ಮೈತ್ರಿ ಸರ್ಕಾರವನ್ನು ಕೆಡವಿರುವ ಸಿದ್ದರಾಮಯ್ಯ ಕುತಂತ್ರಿ ರಾಜಕಾರಣಿ ಎಂದು ಮಾಜಿ ಸಿಎಂ ಹೆಚ್‌.ಡಿ‌.ಕುಮಾರಸ್ವಾಮಿ ಚಾಮುಂಡಿ ಬೆಟ್ಟದಲ್ಲಿ ವಾಗ್ದಾಳಿ ನಡೆಸಿದ್ದಾರೆ.

'ಪುಟಗೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಮೈತ್ರಿ ಸರ್ಕಾರ ಕೆಡವಿದರು': ಕುಮಾರಸ್ವಾಮಿ ವಾಗ್ದಾಳಿ

ಚಾಮುಂಡಿ ಬೆಟ್ಟಕ್ಕೆ ಕುಟುಂಬದ ಜೊತೆ ಬಂದು ನಾಡ ದೇವತೆಗೆ ನವರಾತ್ರಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ನೀರಾವರಿ ಯೋಜನೆಗೆ ಚಾಲನೆ 2006ರಲ್ಲಿ ನೀಡಿದ್ದೆವು. ಸಿಂದಗಿಯಲ್ಲಿ ಜೆಡಿಎಸ್, ಬಿಜೆಪಿ ನಡುವೆ ಸ್ಪರ್ಧೆ ಇದ್ದು, ಗೆಲ್ಲುವ ಅವಕಾಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ 23 ಸಚಿವರ ಹೊಟ್ಟೆ ಮೇಲೆ ಹೊಡೆದರು. ‌ಮೈತ್ರಿ ಸರ್ಕಾರ ಪತನವಾಗಲು ಕಾರಣವೇ ಅವರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಹಕಾರ ಕೊಟ್ಟವರು ಯಾರು? ಎಂಬುದು ಗೊತ್ತಿದೆ. ಐಟಿ ದಾಳಿ ಹಿಂದೆ ಸಿದ್ದರಾಮಯ್ಯ ಕುತಂತ್ರವಿದೆ. ಸಿದ್ದರಾಮಯ್ಯ ಅವರಿಗೆ ಬೇಕಿರುವುದು ಪವರ್ ಮಾತ್ರ. ಪವರ್‌ಗಾಗಿ ಏನು ಬೇಕಾದರೂ ಮಾಡುತ್ತಾರೆ. ಇವರು‌ ಜೆಡಿಎಸ್ ಬಗ್ಗೆ ಮಾತನಾಡಲು ಯಾರು ಎಂದು ಹೆಚ್‌ಡಿಕೆ ಪ್ರಶ್ನಿಸಿದರು.

'ಬಿಎಸ್‌ವೈ ಜೊತೆ ಸಿದ್ದರಾಮಯ್ಯ ಗುಪ್ತ ಮಾತುಕತೆ'

ಸಿದ್ದರಾಮಯ್ಯ ಜೊತೆ ಯಡಿಯೂರಪ್ಪ ಗುಪ್ತವಾಗಿ ಮಾತನಾಡಿರುವ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ಸಿಕ್ಕಿದೆ. ಆದ್ದರಿಂದಲೇ ಬಿಎಸ್‌ವೈ ಆಪ್ತರ ಮೇಲೆ ಐಟಿ ದಾಳಿ ಆಗಿದೆ. ಐಟಿ ಅವರಿಗೆ ಯಡಿಯೂರಪ್ಪ ಅಕ್ರಮಗಳ ಬಗ್ಗೆ ಮೊದಲೇ ಗೊತ್ತಿರಲಿಲ್ಲವೇ, ಆದರೆ ಈಗ ಗುಪ್ತ ಮಾತುಕತೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಟೈಟ್ ಮಾಡಲು ಐಟಿ ರೈಡ್ ಮಾಡಲಾಗಿದೆ. ಸಿದ್ದರಾಮಯ್ಯ, ಸೋನಿಯಾ ಗಾಂಧಿ ಭೇಟಿಯಾಗಿರುವುದು ಯಡಿಯೂರಪ್ಪ ಜೊತೆಗಿನ ಮಾಹಿತಿಯನ್ನು ಸೋನಿಯಾ ಗಾಂಧಿ ಅವರಿಗೆ ನೀಡಲು ಇರಬಹುದು ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಬಗ್ಗೆ ಮಾತನಾಡದಿದ್ದರೆ ನಿದ್ದೆ ಬರುವುದಿಲ್ಲ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸೋಲಿಸಿದ್ದು, ಸಿದ್ದರಾಮಯ್ಯ ಎಂದು ನಾನು ಹೇಳಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಬೆನ್ನು ತಟ್ಟಿಕೊಳ್ಳುವುದು ಬೇಡ. ಅಲ್ಲಿ ಕಾಂಗ್ರೆಸ್, ಬಿಜೆಪಿ, ರೈತಸಂಘ ಎಲ್ಲರೂ ಸೇರಿ ಕೌರವರ ರೀತಿಯಲ್ಲಿ ಚಕ್ರವ್ಯೂಹ ರಚಿಸಿ ಕುತಂತ್ರ ಮಾಡಿದ್ದಾರೆ. ‌ಇದರಲ್ಲಿ ಸಿದ್ದರಾಮಯ್ಯ ಪಾತ್ರ ಏನು ಇಲ್ಲ. ಸೋಲಿಸುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇದ್ದಿದ್ದರೆ ಏಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಿದ್ದರು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

'ಕಾಂಗ್ರೆಸ್‌ನಿಂದ ನಮ್ಮ ಅಭ್ಯರ್ಥಿ ಹೈಜಾಕ್‌'

ನಮ್ಮ ಪಕ್ಷದಲ್ಲಿ ಸರಿಯಾದ ಅಭ್ಯರ್ಥಿಗೆ ಟಿಕೆಟ್ ಕೊಡುತ್ತೇವೆ. ಅದು ನಮ್ಮ ನಿರ್ಧಾರ. ಯಾವುದೇ ದೊಣ್ಣೆನಾಯಕನ ಅಪ್ಪಣೆ ನಮಗೆ ಬೇಕಿಲ್ಲ. ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಕೊರತೆ ಇರುವುದು, ನಮಗೆ ಇಲ್ಲ. ಆದ್ದರಿಂದ ನಮ್ಮ ಅಭ್ಯರ್ಥಿಯನ್ನು ಹೈಜಾಕ್ ಮಾಡಿ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದರು.

ಬೆಂಗಳೂರು ಉಸ್ತುವಾರಿಗಾಗಿ ಅಶೋಕ್ ಮತ್ತು ಸೋಮಣ್ಣ ನಡುವೆ ಕಿತ್ತಾಟ ಒಳ್ಳೆಯ ಬೆಳವಣಿಗೆ ಅಲ್ಲ.‌ ಯಾವ ಖಾತೆ ಕೊಟ್ಟರೂ ಜನರ ಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು.

Last Updated :Oct 12, 2021, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.