ETV Bharat / city

ಮೈಸೂರಿನಲ್ಲಿ ಹಿಂಗಾರು ಅಬ್ಬರ: ಕುಸಿದ ಮನೆಗಳು, ಸಂಕಷ್ಟದಲ್ಲಿ ತಗ್ಗು ಪ್ರದೇಶದ ಜನ

author img

By

Published : Oct 25, 2021, 6:56 PM IST

ಮೈಸೂರು ಜಿಲ್ಲೆಯಲ್ಲಿ ಹಿಂಗಾರು ಮಳೆ ಎಡಬಿಡದೇ ಸುರಿಯುತ್ತಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಕೊಳೆತು ಹೋಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ‌.

mysore
ಮೈಸೂರು

ಮೈಸೂರು: ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಹಿಂಗಾರು ಮಳೆಯಿಂದ ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಿಗೆ ನೀರು ನುಗ್ಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೈಸೂರಿನಲ್ಲಿ ಹಿಂಗಾರು ಅಬ್ಬರ.. ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಿಗೆ ನುಗ್ಗಿದ ನೀರು..

ಜಮೀನಿನಲ್ಲಿ ಬೆಳೆದ ತರಕಾರಿ ಹಾಗು ಇತರ ಬೆಳೆಗಳು ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಇದಲ್ಲದೇ ರಾಜಕಾಲುವೆ ಮೇಲೆ ಹಾಗೂ ಒತ್ತುವರಿ ಮಾಡಿದ ಬಡಾವಣೆಗಳಲ್ಲಿ ನೀರು ನುಗ್ಗಿ ಜನರು ಅಪಾಯಕ್ಕೆ ಸಿಲುಕಿದ್ದಾರೆ‌.

ಮೋರಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ:

ನಿನ್ನೆ (ಭಾನುವಾರ) ರಾತ್ರಿ ಸುರಿದ ಭಾರಿ ಮಳೆಗೆ ವ್ಯಕ್ತಿಯೊಬ್ಬ ಮೋರಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಸಿದ್ದಾರ್ಥ ನಗರ ವಿನಯ ಮಾರ್ಗ 2ನೇ ಕ್ರಾಸ್ ನಿವಾಸಿ ಎಂ.ಜೆ.ಚಂದ್ರೇಗೌಡ (60) ಮೋರಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ.

ರಾತ್ರಿ 11 ಗಂಟೆಗೆ 1109 ಸಂಖ್ಯೆಯ ಮನೆ ಕಾಂಪೌಂಡ್ ಒಳಗೆ ನೀರು ತುಂಬಿದ್ದು, ಮನೆಯವರೆಲ್ಲರೂ ನೀರನ್ನು ಹೊರ ಹಾಕುವ ವೇಳೆ ಸಣ್ಣ ಸೇತುವೆ ಬಳಿ ನಿಂತು ದೊಡ್ಡ ಮೋರಿಯಲ್ಲಿ ಹರಿಯುತ್ತಿದ್ದ ನೀರನ್ನು ನೋಡುತ್ತಿದ್ದ ವೇಳೆ ಕಾಲು ಜಾರಿ ‌ಮೋರಿಗೆ ಬಿದ್ದಿದ್ದು, ಕುಟುಂಬಸ್ಥರ ಎದುರೇ ಕೊಚ್ಚಿಕೊಂಡು ಹೋಗಿದ್ದಾರೆ.

ತಕ್ಷಣ ಕುಟುಂಬಸ್ಥರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಮೋರಿಯು ಕಾರಂಜಿ ಕೆರೆಗೆ ಸಂಪರ್ಕ ಹೊಂದಿದ್ದು, ಕಾರಂಜಿಕೆರೆವರೆಗೆ ಮೋರಿಯುದ್ದಕ್ಕೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದರು ಪತ್ತೆಯಾಗಿಲ್ಲ.

ಹಲವೆಡೆ ಬಡಾವಣೆಗಳಿಗೆ ನುಗ್ಗಿದ ನೀರು

ಮಳೆಯ ಅಬ್ಬರಕ್ಕೆ ಮೈಸೂರು ನಗರದ ವಿವಿಧ ಬಡಾವಣೆಗಳು ಜಲಾವೃತಗೊಂಡಿವೆ. ಸಾತಗಳ್ಳಿ, ಅಜೀಜ್‌ ಸೇಠ್ ನಗರ, ಮಧುವನ, ಜನತಾ ನಗರ, ದಟ್ಟಗಳ್ಳಿ, ಗುಂಡೂರಾವ್ ನಗರ, ಬನ್ನಿ ಮಂಟಪ, ಗಿರಿ ದರ್ಶಿನಿ ಬಡಾವಣೆ, ಆಲನಹಳ್ಳಿ ಸೇರಿದಂತೆ ಹಲವು ಬಡಾವಣೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.

mysore
ಮೈಸೂರಿನಲ್ಲಿ ಹಿಂಗಾರು ಅಬ್ಬರ.. ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಿಗೆ ನುಗ್ಗಿದ ನೀರು..

ರಿಂಗ್ ರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ದೇವೇಗೌಡ ಸರ್ಕಲ್ ನಡುವೆ ಪ್ರದೇಶದಲ್ಲಿ ಕಾರುಗಳು ನೀರಿನಲ್ಲಿ ತೇಲಾಡಿರುವ ಬಗ್ಗೆ ವರದಿಯಾಗಿದೆ. ‌ಅಲ್ಲದೇ ಆ ರಸ್ತೆಯಲ್ಲಿ ಬರುತ್ತಿದ್ದ ಕುಟುಂಬವೊಂದರ ಕಾರು ಕೂಡ ನೀರಿನಲ್ಲಿ ತೇಲಾಡಿದ್ದು, ಬನ್ನಿ ಮಂಟಪ ಅಗ್ನಿಶಾಮಕ ದಳ ಸಿಬ್ಬಂದಿ ಕಾರಿನಲ್ಲಿದ್ದ ಕುಟುಂಬವನ್ನು ರಕ್ಷಿಸಿದ್ದಾರೆ. ಜತೆಗೆ ನೀರಿನಲ್ಲಿ ತೇಲುತ್ತಿದ್ದ ಹಲವು ಕಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಆಲನಹಳ್ಳಿ ಬಡಾವಣೆಯ ತಗ್ಗು ಪ್ರದೇಶವೊಂದರಲ್ಲಿ ಹಲವು ಕಾರುಗಳು ತೇಲುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಜೂನ್​​ನಿಂದ‌ ಸುರಿದ ಮಳೆಗೆ 542 ಮನೆಗಳಿಗೆ ಹಾನಿ, ಇಬ್ಬರು ಸಾವು:

ಜೂನ್​​ನಿಂದ ಅಕ್ಟೋಬರ್ ವರೆಗೆ ಸುರಿದ ಭಾರಿ ಮಳೆಗೆ 542 ಮನೆಗಳಿಗೆ ಹಾನಿಯಾಗಿದ್ದು, ಗೋಡೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೆ, ಆಟೋ ರಿಕ್ಷಾ ಮೇಲೆ ಮರ ಉರುಳಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸೆ. 30 ರಂದು ಸುರಿದ ಮಳೆಗೆ ಮೈಸೂರು ನಗರದ ಫೈವ್ ಲೈಟ್ ವೃತ್ತದ ಬಳಿ ಚಲಿಸುತ್ತಿದ್ದ‌ ಆಟೋ ರಿಕ್ಷಾ ಮೇಲೆ ಮರ ಉರುಳಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದ. ಹೆಚ್.ಡಿ‌.ಕೋಟೆ ತಾಲೂಕಿನ ಜಿ.ಬಿ.ಸರಗೂರು ಗ್ರಾಮದಲ್ಲಿ ಮಳೆಯಿಂದಾಗಿ ಕೆಂಪೇಗೌಡ ಎಂಬುವವರ ಮನೆ ಗೋಡೆ ಕುಸಿದು ಪಕ್ಕದ ಮನೆ ಮೇಲೆ ಬಿದ್ದ ಪರಿಣಾಮ ಬೋರೆಗೌಡ (55) ಮೃತಪಟ್ಟಿದ್ದರು.

mysore
ಮೈಸೂರಿನಲ್ಲಿ ಹಿಂಗಾರು ಅಬ್ಬರ.. ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಿಗೆ ನುಗ್ಗಿದ ನೀರು..

ನಂಜನಗೂಡು ತಾಲೂಕಿನಲ್ಲಿ ಕಳೆದ ಬುಧವಾರ ಸುರಿದ ಮಳೆಗೆ 15ಕ್ಕೂ ಹೆಚ್ಚು ಮನೆಗಳು ಕುಸಿದು, ಅಪಾರ ಪ್ರಮಾಣದಲ್ಲಿ ನಷ್ಟವಾಗಿತ್ತು. ಹುಣಸೂರಿನ ಉದ್ದೂರು ಕಾವಲ್, ಬಿ.ಆರ್.ಕಾವಲ್, ಬನ್ನಿಕುಪ್ಪೆ ಗ್ರಾಮದಲ್ಲಿ ತಲಾ ಒಂದು ಮನೆ ಹಾನಿಗೊಂಡಿವೆ.‌

ತಿ.ನರಸೀಪುರ ತಾಲೂಕಿನಲ್ಲಿ ಹಲವು ಕಡೆ ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿ ನಂದಿ ವಿಗ್ರಹಕ್ಕೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆಯ ಭೂಮಿ ಕುಸಿದಿತ್ತು.

ಹಾನಿಗೊಳಗಾದ ಬೆಳೆ:

ಸತತ ಮಳೆಯಿಂದಾಗಿ ಜಿಲ್ಲೆಯ ರೈತರು ಬೆಳೆದಿದ್ದ ಟೊಮೇಟೊ, ಎಲೆಕೋಸು, ಬೀನ್ಸ್ ಸೇರಿದಂತೆ ತರಕಾರಿ ಕೊಳೆಯುತ್ತಿವೆ. ಹೆಚ್.ಡಿ.ಕೋಟೆ ತಾಲೂಕಿನ ಹುನುಗನಹಳ್ಳಿ, ಮನುಗನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಬಾಳೆ ನೆಲಕ್ಕುರುಳಿದ್ದು, ಕಬ್ಬು ನೆಲಕಚ್ಚಿದೆ. ಜಿಲ್ಲೆಯಲ್ಲಿ ಬಾಳೆ, ರಾಗಿ ಭತ್ತ ಸೇರಿದಂತೆ 117 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಈಗಾಗಲೇ 60 ಎಕರೆಗೆ 4.47 ಲಕ್ಷ ಪರಿಹಾರ ನೀಡಲಾಗಿದೆ.

mysore
ಮೈಸೂರಿನಲ್ಲಿ ಹಿಂಗಾರು ಅಬ್ಬರ.. ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಿಗೆ ನುಗ್ಗಿದ ನೀರು..

ಹುಣಸೂರು ತಾಲೂಕಿನಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ತಿ.ನರಸೀಪುರ ತಾಲೂಕಿನ ತಲಕಾಡು ಭಾಗದಲ್ಲಿ ನಾಲೆಯ ನೀರಿನ ಹರಿವು ಹೆಚ್ಚಾಗಿ ಗದ್ದೆಗಳಿಗೆ ಹರಿದು ಭತ್ತದ ಬೆಳೆ ಹಾನಿಯಾಗಿದೆ. ಪ್ರಸಕ್ತ ಸಾಲಿನಲ್ಲಿ 68.57 ಸೆಂ.ಮೀ ವಾಡಿಕೆ ಮಳೆಯಾಗಬೇಕಾಗಿದ್ದು, 62.85 ಸೆಂ.ಮೀ ಮಳೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.