ETV Bharat / city

ಕಟೀಲು ದೇವಸ್ಥಾನದಲ್ಲಿ ಶಾಂತಿ ಹಕ್ಕಿನ ವಿವಾದ: ಮಧ್ಯಾಹ್ನ ಪೂಜೆ ವಿಳಂಬ

author img

By

Published : May 12, 2022, 9:46 AM IST

ಕಟೀಲು ಕ್ಷೇತ್ರದಲ್ಲಿ ಶಾಂತಿ ಹಕ್ಕಿನ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಏರ್ಪಟ್ಟು ಬುಧವಾರ ಮಧ್ಯಾಹ್ನದ ಪೂಜೆಯೇ ವಿಳಂಬವಾಗಿ ನಡೆದಿದೆ.

ಕಟೀಲು ದೇವಸ್ಥಾನ
ಕಟೀಲು ದೇವಸ್ಥಾನ

ಮಂಗಳೂರು: ಕರಾವಳಿಯ ಪ್ರಮುಖ ದೇವಾಲಯವಾದ ಕಟೀಲು ಕ್ಷೇತ್ರದಲ್ಲಿ ಶಾಂತಿ ಹಕ್ಕಿನ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಏರ್ಪಟ್ಟು ಬುಧವಾರ ಮಧ್ಯಾಹ್ನದ ಪೂಜೆಯೇ ವಿಳಂಬವಾಗಿ ನಡೆದ ಘಟನೆ ನಡೆದಿದೆ. ಈ ವಿವಾದದ ಬಗ್ಗೆ ಚರ್ಚೆ ಆರಂಭವಾಗಿ ಮಧ್ಯಾಹ್ನ 12 ಗಂಟೆಗೆ ನಡೆಯಬೇಕಿದ್ದ ಪೂಜೆ 2 ಗಂಟೆಗೆ ನೇರವೇರಿತು.

ಕಟೀಲು ದೇವಸ್ಥಾನದ ಕೀಳು ಶಾಂತಿ ಹಕ್ಕಿನ ಬಗ್ಗೆ ರಾಜ್ಯ ಮುಜರಾಯಿ ಇಲಾಖೆಯ ಕೋರ್ಟ್‌ನಲ್ಲಿ ಕೆಲವು ವರ್ಷಗಳಿಂದ ವ್ಯಾಜ್ಯ ವಿಚಾರಣೆಯಲ್ಲಿತ್ತು. ಇತ್ತೀಚೆಗೆ ಆನುವಂಶಿಕ ಕೀಳು ಶಾಂತಿ ಹುದ್ದೆಯನ್ನು ಮರುಸ್ಥಾಪಿಸಿ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರು ಆದೇಶ ನೀಡಿದ್ದು, ಅದರಂತೆ ಈ ಹುದ್ದೆಯನ್ನು ವಹಿಸಿಕೊಳ್ಳುವ ಬಗ್ಗೆ ಗುರುರಾಜ್ ಭಟ್ ಮತ್ತು ಮುರಳೀಧರ ಉಪಾಧ್ಯಾಯ ಕಟೀಲು ದೇವಸ್ಥಾನದ ಆನುವಂಶಿಕ ಮೊಕ್ತೇಸರರಿಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ಬುಧವಾರ ಮಧ್ಯಾಹ್ನ ಮತ್ತೆ ಕ್ಷೇತ್ರದಲ್ಲಿ ಚರ್ಚೆಗಳು ನಡೆದು ಮಧ್ಯಾಹ್ನ ಪೂಜೆಯೇ ವಿಳಂಬವಾಗಿತ್ತು.

ಶಾಂತಿ ಹಕ್ಕು ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಯಾಗಿ ದೇವಸ್ಥಾನದ ವತಿಯಿಂದ ಪತ್ರ ನೀಡಲಾಗಿತ್ತು. ಈ ವ್ಯಾಜ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಥವಾ ಆನುವಂಶಿಕ ಮೊಕ್ತೇಸರರು ಪಾರ್ಟಿ ಆಗಿಲ್ಲ. 2016ರ ಜೂ.1ರಿಂದಲೇ ಇಲ್ಲಿ ಆಡಳಿತಾಧಿಕಾರಿ ಇರುವುದಿಲ್ಲವಾದರೂ ಆಡಳಿತಾಧಿಕಾರಿಯನ್ನೇ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅನುವಂಶಿಕ ಮೊಕ್ತೇಸರರಿಗೆ ಈ ವ್ಯಾಜ್ಯ ನಡೆಯುತ್ತಿದ್ದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಕಾನೂನು ಅಭಿಪ್ರಾಯ ಪಡೆದುಕೊಳ್ಳಲು ನಿರ್ಣಯಿಸಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ 'ಆರಟ' ಸೇವೆಯೊಂದಿಗೆ ತೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.