ETV Bharat / city

ದಕ್ಷಿಣ ಕನ್ನಡ: SSLC ಪಾಸಾದ ತಾಯಿ-ಮಗಳು

author img

By

Published : May 21, 2022, 11:51 AM IST

Updated : May 21, 2022, 12:07 PM IST

ಮುನ್ನೂರು ಗ್ರಾಮದ ತೇವುಲ ನಿವಾಸಿ ಮಮತಾ ರಮೇಶ್ ಮತ್ತು ಪುತ್ರಿ ಖುಷಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಒಟ್ಟಿಗೆ ತೇರ್ಗಡೆಯಾಗಿದ್ದಾರೆ.

Mother and Daughter clear SSLC Exam in dakshina kannada
ಎಸ್‌ಎಸ್‌ಎಲ್‌ಸಿ ಪಾಸಾದ ತಾಯಿ-ಮಗಳು

ಉಳ್ಳಾಲ(ದಕ್ಷಿಣ ಕನ್ನಡ): ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ತಾಯಿ ಮಗಳಿಬ್ಬರೂ ತೇರ್ಗಡೆಯಾಗಿದ್ದಾರೆ. ಮುನ್ನೂರು ಗ್ರಾಮದ ತೇವುಲ ನಿವಾಸಿ ಮಮತಾ ರಮೇಶ್ ಕನ್ನಡ ಮಾಧ್ಯಮದಲ್ಲಿ ಮತ್ತು ಪುತ್ರಿ ಖುಷಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.

21 ವರ್ಷಗಳ ಹಿಂದೆ ವಿದ್ಯಾರ್ಥಿ ಜೀವನದಲ್ಲಿ ಸ್ವಯಂ ನಿರ್ಧಾರದಿಂದ ಎಸ್​ಎಸ್​ಎಲ್​ಸಿ ಕಲಿಯುವ ಅವಕಾಶದಿಂದ ಹಿಂದೆ ಸರಿದ ಮಮತಾ ರಮೇಶ್ ಕಳೆದ ಮೂರು ವರ್ಷಗಳ ಹಿಂದೆ ಪರೀಕ್ಷೆ ಬರೆದರೂ ಯಶಸ್ವಿಯಾಗಿರಲಿಲ್ಲ. ಅಂಗನವಾಡಿ ಶಿಕ್ಷಕಿಯಾಗಲು ಎಸ್​ಎಸ್​ಎಲ್​ಸಿ ವಿದ್ಯಾರ್ಹತೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಮನಸ್ಸು ಮಾಡಿ ಪರೀಕ್ಷೆ ಬರೆಯಲು ಮುಂದಾದರು.

ಎಸ್‌ಎಸ್‌ಎಲ್‌ಸಿ ಪಾಸಾದ ತಾಯಿ-ಮಗಳು

ಸ್ಥಳೀಯ ಜೈ ಹನುಮಾನ್ ಕ್ರೀಡಾ ಸಂಘಟನೆಯ ಕಾರ್ಯಕರ್ತೆ, ಕುತ್ತಾರ್ ಲಚ್ಚಿಲ್ ಅಂಗನವಾಡಿಯಲ್ಲಿ ಸಹಾಯಕಿಯಾಗಿದ್ದ ಮಮತಾ ಅವರಿಗೆ ಬಬ್ಬುಕಟ್ಟೆಯ ಹೀರಾ ಮಹಿಳಾ ಕಾಲೇಜಿನ ಸಹಾಯಕ ಪ್ರಾಂಶುಪಾಲರಾದ ಭಾಗೀರಥಿ ಅವರ ಪರಿಚಯವಾಗಿತ್ತು. ಅವರ ನಿರ್ದೇಶನದಂತೆ ಪರೀಕ್ಷೆಗೆ ಸಿದ್ಧತೆ ನಡೆಸಿದ ಮಮತಾ ಅವರಿಗೆ ಡಿಸೆಂಬರ್ ತಿಂಗಳಿನಿಂದ ಹಿಡಿದು ಪರೀಕ್ಷೆ ಮುಗಿಸುವವರೆಗೂ ಭಾಗೀರಥಿ ಅವರು ತಮ್ಮ ಮನೆಯಲ್ಲೇ ಉಚಿತವಾಗಿ ತರಬೇತಿಯನ್ನು ನೀಡಿದ್ದಾರೆ. ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಪರೀಕ್ಷೆಯನ್ನು ಕಟ್ಟಿದ್ದ ಮಮತಾ ಅವರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಪುತ್ರಿ ಖುಷಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಮುನ್ನೂರಿನ ಜೈ ಹನುಮಾನ್ ಕ್ರೀಡಾಮಂಡಳಿ ಸ್ಥಳೀಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಂಘ. ಗ್ರಾಮೀಣ ಭಾಗವಾಗಿರುವುದರಿಂದ ವಿದ್ಯಾರ್ಥಿಗಳು ಟ್ಯೂಷನ್​ಗೆ ತೆರಳಲು ಅಸಾಧ್ಯವಿರುವ ಹಿನ್ನೆಲೆಯಲ್ಲಿ ಸಂಘದ ಶಿಕ್ಷಿತ ಸದಸ್ಯರೇ ಸೇರಿಕೊಂಡು ಈ ಭಾಗದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ಅದರಲ್ಲಿ ಭಾಗೀರಥಿ ಸೇರಿದಂತೆ ಹಲವರಿದ್ದಾರೆ. ವಿದ್ಯಾದಾನ ಮಹಾದಾನ ಎಂಬಂತೆ ನಮ್ಮ ಜೊತೆಗಿರುವವರು ಕೂಡಾ ವಿದ್ಯಾವಂತರಾಗಿರಬೇಕು ಎನ್ನುವ ಆಶಯದಂತೆ ಶಿಕ್ಷಣ ಹೇಳಿಕೊಡುತ್ತಿದ್ದೇವೆ ಎಂದು ಭಾಗೀರಥಿ ತಿಳಿಸಿದರು.

ಇದನ್ನೂ ಓದಿ: ಕೃಷಿಯಲ್ಲಿ ಯುವಕರು ಉದ್ಯಮಿಗಳಾಗಲು ಸಾಧ್ಯ: ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್

ಅಂಗನವಾಡಿ ಶಿಕ್ಷಕಿಯಾಗಬೇಕು ಎನ್ನುವ ಕನಸು ಚಿಗುರಿದೆ. ಭಾಗೀರಥಿ ಅವರಿಂದ ಇದು ಸಾಧ್ಯವಾಗಿದೆ. ಇಂಗ್ಲಿಷ್, ಗಣಿತ ಕಷ್ಟವೆನಿಸಿದರೂ ನಿರಂತರ ತರಬೇತಿಯಿಂದ ಪಾಸಾಗಲು ಸಾಧ್ಯವಾಯಿತು. ಮನೆಯಲ್ಲಿ ಮಗಳು ಮತ್ತು ನಾನು ಜೊತೆಯಾಗಿ ಕಲಿಯುತ್ತಿದ್ದೆವು. ಮಗಳು ಆಂಗ್ಲ ಭಾಷೆಯಲ್ಲಿ ಪರೀಕ್ಷೆಯನ್ನು ಎದುರಿಸಿದ್ದರೆ, ತಾನು ಕನ್ನಡದಲ್ಲೇ ಬರೆದಿರುವೆ. ಕ್ರೀಡಾ ಸಂಘದ ಕಾರ್ಯಕರ್ತರ ಪ್ರೋತ್ಸಾಹದ ಜೊತೆಗೆ ಮನೆಮಂದಿಯ ಹಾಗೂ ಶಿಕ್ಷಕಿಯ ಶ್ರಮದಿಂದ ಕನಸು ನನಸಾಗಿದೆ ಎಂದು ಮಮತಾ ತಿಳಿಸಿದರು.

Last Updated : May 21, 2022, 12:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.