ETV Bharat / city

'ಹಸ್ತಮುದ್ರೆ'ಯಲ್ಲಿಯೇ ನೃತ್ಯ ಮಾಡಿ ಸೈ ಎನಿಸಿಕೊಂಡ ಕರಾವಳಿಯ 'ನಾಟ್ಯಗಾತಿ': ವಿಡಿಯೋ ವೈರಲ್

author img

By

Published : May 30, 2021, 10:59 PM IST

Updated : May 31, 2021, 6:18 AM IST

ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ನೃತ್ಯಗುರು, ರಂಗ ಅಭಿನೇತ್ರಿ ಮಂಜುಳಾ ಸುಬ್ರಹ್ಮಣ್ಯ ಅವರು, ತಮ್ಮ ಪರಿಶ್ರಮದಿಂದ ಹಸ್ತಮುದ್ರೆಯ ಮೂಲಕವೇ ನಾಟ್ಯದ ಅಭಿವ್ಯಕ್ತಿಯನ್ನು ಮೂಡಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ.

manjula-subrahmanya-hasthamudra-dance
'ಹಸ್ತಮುದ್ರೆ'ಯಲ್ಲಿಯೇ ನೃತ್ಯ

ಮಂಗಳೂರು: 'ನೀನಿಲ್ಲದೇ ನನಗೇನಿದೇ' ಎಂಬ ಪ್ರಸಿದ್ಧ ಭಾವಗೀತೆಗೆ ಕೇವಲ ಹಸ್ತಮುದ್ರೆಯ ಚಲನೆಯ ಮೂಲಕವೇ ನೃತ್ಯದ ಭಾವವನ್ನೇ ಮೂಡಿಸಿರುವ ವಿಡಿಯೋವೊಂದು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

'ಹಸ್ತಮುದ್ರೆ'ಯಲ್ಲಿಯೇ ನೃತ್ಯ

ಓದಿ: 'ಮೋದಿಯವರೇ, ಪಕೋಡಾ ಮಾರುವುದು ಕೂಡ ಈಗ ಕಷ್ಟವಾಗಿದೆ'

ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ನೃತ್ಯಗುರು, ರಂಗ ಅಭಿನೇತ್ರಿ ಮಂಜುಳಾ ಸುಬ್ರಹ್ಮಣ್ಯ ಅವರು, ತಮ್ಮ ಪರಿಶ್ರಮದಿಂದ ಹಸ್ತಮುದ್ರೆಯ ಮೂಲಕವೇ ನಾಟ್ಯದ ಅಭಿವ್ಯಕ್ತಿಯನ್ನು ಮೂಡಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ.

ಕತ್ತಲು-ಬೆಳಕಿನಾಟದಲ್ಲಿಯೇ ಹಸ್ತಾಭಿನಯವನ್ನು ಪ್ರದರ್ಶಿಸಿರುವ ಮಂಜುಳಾ ಸುಬ್ರಹ್ಮಣ್ಯ ಅವರಿಗೆ ಉಡುಪಿಯ ನೃತ್ಯಗುರು ಪ್ರತಿಭಾ ಸಾಮಗರು ಕಳಿಸಿರುವ ಹಸ್ತಮುದ್ರೆಯೊಂದಿಗೆ ನೃತ್ಯಭಾವ ಮೂಡಿಸಿರುವ ವಿಡಿಯೋವೊಂದು ಪ್ರೇರಣೆಯಾಗಿತ್ತಂತೆ. ಅದನ್ನು ನೋಡಿ ಲಾಕ್​ಡೌನ್ ನಿಂದ ಮನೆಯಲ್ಲಿಯೇ ಇದ್ದ ಮಂಜುಳಾ ಅವರಿಗೂ ತಾವು ಇದೇ ರೀತಿ ಯಾಕೆ ಪ್ರಯೋಗ ಮಾಡಬಾರದು ಎಂಬ ಆಲೋಚನೆ ತಲೆಗೆ ಹೊಕ್ಕಿತ್ತಂತೆ. ಅದಕ್ಕಾಗಿ ಅವರು ಕನ್ನಡದ ಕವಿ ಎಂ.ಎನ್. ವ್ಯಾಸರಾವ್ ಅವರ 'ನೀನಿಲ್ಲದೇ ನನಗೇನಿದೇ' ಎಂಬ ಭಾವಗೀತೆಗೆ ಹಸ್ತಾಭಿನಯದ ನಾಟ್ಯ ಮಾಡುವ ಆಲೋಚನೆ ಮಾಡಿದ್ದಾರಂತೆ.

ಆದರೆ ದೇಹವನ್ನೇ ತೋರಿಸದೆ ಬರೀ ಹಸ್ತ ಮುದ್ರೆಯಲ್ಲಿಯೇ 'ನೀನಿಲ್ಲದೇ ನನಗೇನಿದೇ' ಭಾವಗೀತೆಯ ಭಾವವನ್ನು ತೋರಿಸೋದು ಭಾರಿ ತ್ರಾಸದ ಕೆಲಸ. ಅದಕ್ಕಾಗಿ ಎರಡು ಮೂರು ದಿನಗಳಲ್ಲಿ ಸಮಯ ಸಿಕ್ಕಾಗಲೆಲ್ಲಾ ಸಣ್ಣಗೆ ತಾಲೀಮು ಮಾಡಿಕೊಂಡು ಅವರು ಹಸ್ತಾಭಿನಯಕ್ಕೆ ಸಜ್ಜಾಗಿಯೇ ಬಿಟ್ಟರಂತೆ. ಅಚ್ಚರಿಯ ಸಂಗತಿಯೆಂದರೆ ಕೇವಲ ಎಲ್ಇಡಿ ಸಣ್ಣ ಟಾರ್ಚ್ ಬೆಳಕನ್ನು ಕತ್ತಲೆಯ ಗೋಡೆಯಲ್ಲಿ ಮೂಡಿಸಿ ಕತ್ತಲೆಯಲ್ಲಿಯೇ ನಿಂತು ಬರೀ ಕೈಚಲನೆಯಲ್ಲಿ ನೃತ್ಯ ಮೂಡಿಸಿ ಸಾಧಿಸಿಯೇ ಬಿಟ್ಟರು. ಇದರ ವಿಡಿಯೋವನ್ನು ಮಂಜುಳಾ ಸುಬ್ರಹ್ಮಣ್ಯರವರ ಅಣ್ಣ ಗಣೇಶ್ ಕುಮಾರ್ ನಿಕಾನ್ ಡಿ3200 ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ವಿಡಿಯೋ ನೋಡುವಾಗ ಅದ್ಭುತ ಎಂದೆನಿಸಿದರೂ, ಇದರ ಹಿಂದೆ ಮಂಜುಳಾ ಸುಬ್ರಹ್ಮಣ್ಯರ ಪರಿಶ್ರಮ ಬಹಳಷ್ಟಿದೆ. ಏಕೆಂದರೆ ದೇಹಭಾವ, ಮುಖಭಾವವಿಲ್ಲದೆ ಇಡೀ ಭಾವಗೀತೆಯ ಆಶಯವನ್ನು ಬರೀ ಹಸ್ತಮುದ್ರೆಯ ಮೂಲಕವೇ ಅಭಿವ್ಯಕ್ತಪಡಿಸೋದು ಭಾರಿ ಸವಾಲಿನ ಕೆಲಸ.

Last Updated :May 31, 2021, 6:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.