ಪ್ರವೀಣ್‌ ಹತ್ಯೆ ಮಾಡಿದ ಪ್ರಮುಖ ಆರೋಪಿಗಳು ಪೊಲೀಸ್‌ ಬಲೆಗೆ?: ದಿಢೀರ್ ಸುದ್ದಿಗೋಷ್ಠಿ ಕರೆದ ಎಸ್​ಪಿ

author img

By

Published : Aug 11, 2022, 10:33 AM IST

Etv Bharat

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಸುಳ್ಯ: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಪ್ರಮುಖ ಮೂವರು ಆರೋಪಿಗಳನ್ನು ಬುಧವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇಂದು ಮಧ್ಯಾಹ್ನ 12.30ಕ್ಕೆ ಮಂಗಳೂರಲ್ಲಿ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್‌ ಸೋನಾವಣೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜುಲೈ 26 ರಂದು ಸಂಜೆ ಸುಳ್ಯ ತಾಲೂಕಿನ ಬೆಳ್ಳಾರೆಯ ಮಾಸ್ತಿ ಕಟ್ಟೆ ಬಳಿ ಬೈಕ್​ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ಅವರನ್ನು ಕಡಿದು ಹತ್ಯೆ ಮಾಡಿದ್ದರು. ಈ ಬಗ್ಗೆ ಈಗಾಗಾಲೇ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಹತ್ಯೆಯಲ್ಲಿ ನೇರ ಭಾಗಿಯಾದ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಇದೀಗ ಈ ಮೂವರು ಪ್ರಮುಖ ಆರೋಪಿಗಳನ್ನು ಬುಧವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಇನ್ನೂ ಏನನ್ನೂ ಹೇಳಿಲ್ಲ. ಆದರೆ ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಎಸ್​ಪಿ ಮಾಹಿತಿ ನೀಡುವ ಸಾಧ್ಯತೆ ಇದೆ. ಜೊತೆಗೆ ಪ್ರವೀಣ್ ಹತ್ಯೆಯ ಸಂಪೂರ್ಣ ವಿವರ, ಹತ್ಯೆಯ ಹಿಂದಿನ ಕಾರಣಗಳು ಹಾಗೂ ಆರೋಪಿಗಳ ವಿವರಗಳನ್ನು ಬಹಿರಂಗ ಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

(ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆಯಲ್ಲಿ ಪಿಎಫ್ಐ ಲಿಂಕ್ ಬಗ್ಗೆ ದಾಖಲೆಗಳಿಲ್ಲದೆ ಹೇಳಲಾಗದು: ಅಲೋಕ್‌ ಕುಮಾರ್‌)

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಆ ಬಳಿಕ ಮಂಗಳೂರಲ್ಲಿ ಮತ್ತೋರ್ವ ಯುವಕ ಕೊಲೆಯಾಗಿತ್ತು. ಇದರಿಂದ ದಕ್ಷಿಣ ಕನ್ನಡದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಜಿಲ್ಲೆಯಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದರು.

ಇನ್ನು ಪ್ರವೀಣ್ ಕುಟುಂಬಸ್ಥರಿಗೆ ಕರ್ನಾಟಕ ಸರ್ಕಾರ 25 ಲಕ್ಷ ರೂ ಪರಿಹಾರ ನೀಡಿದೆ. ಜೊತೆಗೆ ಬಿಜೆಪಿ ಪಕ್ಷ ಕೂಡ 25 ಪಕ್ಷ ಹಣ ನೀಡಿ ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದೆ.

(ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳ ಆಸ್ತಿ ಮುಟ್ಟುಗೋಲು: ಎಡಿಜಿಪಿ ಅಲೋಕ್ ಕುಮಾರ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.