ETV Bharat / city

ಸ್ವಾತಂತ್ರ್ಯ ಹೋರಾಟದಲ್ಲಿ‌ ಪಾಲ್ಗೊಂಡಿಲ್ಲವೆಂದು ವಾಜಪೇಯಿ ಬ್ರಿಟಿಷರಿಗೆ ಮುಚ್ಚಳಿಕೆ ಬರೆದಿದ್ದರು: ಬಿ.ಕೆ. ಹರಿಪ್ರಸಾದ್

author img

By

Published : Feb 23, 2021, 7:40 AM IST

ವಾಜಪೇಯಿ ನಾನು ಸ್ವಾತಂತ್ರ್ಯ ಹೋರಾಟದಲ್ಲಿ‌ ಪಾಲ್ಗೊಂಡಿಲ್ಲ, ನನ್ನನ್ನು ಕ್ಷಮಿಸಿ ಎಂದು ಬ್ರಿಟಿಷರಿಗೆ ಮುಚ್ಚಳಿಕೆ ಬರೆದಿದ್ದರು. ದುರಂತವೆಂದರೆ ಇವರ ಪಕ್ಷದವರಿಂದಲೇ ಇಂದು ನಾವು ದೇಶಭಕ್ತಿಯ ಪಾಠ ಕಲಿಯಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ.

Congress leader BK Hariprasad reaction
ವಾಜಪೇಯಿ ಬ್ರಿಟಿಷರಿಗೆ ಮುಚ್ಚಳಿಕೆ ಬರೆದಿದ್ದರು

ಮಂಗಳೂರು: ಮಹಾತ್ಮ ಗಾಂಧಿಯವರು ಕ್ವಿಟ್ ಇಂಡಿಯಾ ಚಳವಳಿ ನಡೆಸಿದಾಗ ಬಹಳಷ್ಟು ಮಂದಿ ಜೈಲುಪಾಲಾಗುತ್ತಾರೆ. ಇದರಲ್ಲಿ‌ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡಾ ಒಬ್ಬರು. ಆದರೆ, ಅವರು ಸಂಜೆ ಆಗುವ ಹೊತ್ತಿಗೆ ನಾನು ಸ್ವಾತಂತ್ರ್ಯ ಹೋರಾಟದಲ್ಲಿ‌ ಪಾಲ್ಗೊಂಡಿಲ್ಲ, ನನ್ನನ್ನು ಕ್ಷಮಿಸಿ ಎಂದು ಮುಚ್ಚಳಿಕೆ ಬರೆದಿದ್ದರು. ದುರಂತವೆಂದರೆ ಇವರ ಪಕ್ಷದವರಿಂದಲೇ ಇಂದು ನಾವು ದೇಶಭಕ್ತಿಯ ಪಾಠ ಕಲಿಯಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ವಾಜಪೇಯಿ ಬ್ರಿಟಿಷರಿಗೆ ಮುಚ್ಚಳಿಕೆ ಬರೆದಿದ್ದರು

ನಗರದ ಪುರಭವನದಲ್ಲಿ ನಡೆದ ಭಾವೈಕ್ಯತಾ ಸಮಾವೇಶದಲ್ಲಿ‌ ಭಾಗವಹಿಸಿ ಮಾತನಾಡಿದ ಅವರು, ಈ ದೇಶದ ಆಗು-ಹೋಗುಗಳಲ್ಲಿ ಓರ್ವ ಬಹುಸಂಖ್ಯಾತನಿಗೆ ಎಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಅಲ್ಪಸಂಖ್ಯಾತನಿಗೂ ಇದೆ. ಈ ದೇಶದಲ್ಲಿ ಹೇಗೆ ಇರಬೇಕೆಂದು ಸಂವಿಧಾನದಲ್ಲಿದೆ. ಆದರೆ, ಇಂದು ನರೇಂದ್ರ ಮೋದಿ ವಿರುದ್ಧ ಮಾತನಾಡಿದಲ್ಲಿ‌ ದೇಶದ್ರೋಹಿಗಳು, ರೈತರ ಪರ ಮಾತನಾಡಿದ್ದಲ್ಲಿ ಖಾಲಿಸ್ತಾನಿಗಳು, ಸಿಎಎ, ಎನ್ಆರ್​ಸಿ ವಿರುದ್ಧ ಮಾತನಾಡಿದರೆ ಪಾಕಿಸ್ತಾನಿಗಳು ಎಂದು ಹಣೆ ಪಟ್ಟಿಕಟ್ಟಲು ನಕಲಿ ದೇಶಭಕ್ತರೇ ನೀವು ಯಾರು ಎಂದು ಗುಡುಗಿದರು.

ಉಳ್ಳಾಲದ ರಾಣಿ ಅಬ್ಬಕ್ಕ ದೇವಿ ಸ್ವಾತಂತ್ರ್ಯ ಹೋರಾಟಗಾರಳೆಂದು ಹೇಳುವ ನಕಲಿ ಸ್ವಾತಂತ್ರ್ಯ ಹೋರಾಟಗಾರರು, ಕೋಮು ಸೌಹಾರ್ದತೆಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ. ಯಾರು ಸ್ವಾತಂತ್ರ್ಯ ಹೋರಾಟದ, ಸಂವಿಧಾನದ, ತ್ರಿವರ್ಣ ಧ್ವಜದ ವಿರುದ್ಧವಾಗಿದ್ದರೋ, ಅವರಿಂದು ನಮಗೇ ದೇಶಪ್ರೇಮದ ಪಾಠ ಹೇಳಿಕೊಡಲು ಬರುತ್ತಿದ್ದಾರೆ ಎಂದು ಕಿಡಿಕಾರಿದರು.

ಸಾವರ್ಕರ್ ಯಾವತ್ತಿಗೂ ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳದೇ ಕೇಸರಿ ಧ್ವಜವನ್ನು ಹಿಡಿದವರು. ಅವರು, ಕೂಡಾ ಬ್ರಿಟಿಷರಿಗೆ ಮುಚ್ಚಳಿಕೆ ಬರೆದುಕೊಟ್ಟವರು. ಆದರೆ, ಇಂದು ವೀರರಾಗಿದ್ದಾರೆ. ಯಾರು ತ್ರಿವರ್ಣ ಧ್ವಜಕ್ಕೆ ಗೌರವ ಕೊಡುವುದಿಲ್ಲವೋ‌ ಅವರು ದೇಶದ್ರೋಹಿಗಳು. ಯಾರು ಸಂವಿಧಾನಕ್ಕೆ ಗೌರವ ಕೊಡುವುದಿಲ್ಲವೋ‌ ಅವರು ರಾಷ್ಟ್ರದ್ರೋಹಿಗಳು. ಆದ್ದರಿಂದ ದೇಶಭಕ್ತಿ ಎಂದು ಹೇಳುವ ಬಿಜೆಪಿ ರಾಷ್ಟ್ರದ ಸುಳ್ಳು ಸಂಘಟನೆ. ಇಂತಹ ನಕಲಿ ದೇಶಭಕ್ತರ ಬಗ್ಗೆ ಎಲ್ಲರೂ ಎಚ್ಚರದಿಂದಿರಬೇಕಾಗುತ್ತದೆ ಎಂದು ಹರಿಪ್ರಸಾದ್​ ಹೇಳಿದರು.

ಓದಿ: ತ್ವರಿತವಾಗಿ ಒಕ್ಕಲಿಗ ಪ್ರಾಧಿಕಾರ ರಚನೆ ಮಾಡಲೇಬೇಕು: ನಿರ್ಮಲಾನಂದನಾಥ ಸ್ವಾಮೀಜಿ
ಬಿಜೆಪಿಗರ ಹಿಂದುತ್ವಕ್ಕೂ, ಹಿಂದೂ ಧರ್ಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇವರು ಎಂದಿಗೂ ಸಂವಿಧಾನವನ್ನು ಒಪ್ಪುವುದಿಲ್ಲ‌. ಆ ಸಂವಿಧಾನ ಇರುವುದರಿಂದಲೇ ಮೋದಿ ಪ್ರಧಾನಿಯಾಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಸಂವಿಧಾನದ ವಿರುದ್ಧವೇ ಷಡ್ಯಂತರ ಮಾಡಿ ಅದನ್ನೇ ಮುಗಿಸಲು ಹೊರಟಿದ್ದಾರೆ.‌ ಜೊತೆಗೆ ಮೀಸಲಾತಿಯನ್ನು ತೆಗೆದುಹಾಕುವ ಸಂಚು ನಡೆಸುತ್ತಿದ್ದಾರೆ.‌ ಇದರ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು ಎಂದು ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.