ETV Bharat / city

ನನ್ನ ಮೇಲಿನ ಭೂಕಬಳಿಕೆ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಭೈರತಿ ಬಸವರಾಜ್

author img

By

Published : Feb 1, 2022, 1:31 PM IST

ರೈಲ್ವೆ ಅಂಡರ್ ಪಾಸ್​​ಗೆ 30 ಕೋಟಿ ರೂ. ಇರಿಸಲಾಗಿದ್ದು, ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಅದನ್ನೂ ಕೂಡ ರೈಲ್ವೆ ಇಲಾಖೆಯ ಮುಖ್ಯಸ್ಥರೊಂದಿಗೆ ಮಾತನಾಡಿ, ಅದಕ್ಕೂ ವೇಗ ಕೊಡುವ ಕಾರ್ಯ ಮಾಡಲಾಗುತ್ತದೆ. ಮಂಗಳೂರಿಗೆ ಮೂರನೇ ಬಾರಿ ಆಗಮಿಸಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿ ಅವಧಿಯೊಳಗೆ ಮಾಡಿ ಮುಗಿಸುವ ಕೆಲಸ ಖಂಡಿತವಾಗಿಯೂ ಮಾಡುತ್ತೇವೆ..

ಬೈರತಿ ಬಸವರಾಜ್
ಬೈರತಿ ಬಸವರಾಜ್

ಮಂಗಳೂರು : ತನ್ನ ವಿರುದ್ಧದ ಭೂಕಬಳಿಕೆ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ವಿರೋಧ ಪಕ್ಷದ ನಾಯಕರಿಗೂ ತಿಳಿದಿದೆ. ಆದರೆ, ರಾಜಕಾರಣ ಮಾಡುವ ದೃಷ್ಟಿಯಿಂದ ಸುಮ್ಮನೆ ಆರೋಪ ಮಾಡಲಾಗಿದೆ. ಅದೆಲ್ಲವೂ ಇತ್ಯರ್ಥವಾಗಿದೆ ಎಂದು ಮಂಗಳೂರಿನಲ್ಲಿಂದು ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.

ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ರಾಜಕೀಯಕ್ಕೆ ಬರುವ ಮೊದಲು ನಾನೋರ್ವ ಉದ್ದಿಮೆದಾರ. 18 ವರ್ಷಗಳ ಮೊದಲು ನಾನು ಜಮೀನು ಖರೀದಿಸಿದ್ದೆ. ಯಾರೋ ಸುಮ್ಮನೆ ನನ್ನ ಬೆಳವಣಿಗೆ ಕಂಡು ಆರೋಪ‌ ಮಾಡಿದ್ದಾರೆ ಎಂದು ಹೇಳಿದರು.

ತಮ್ಮ ಮೇಲಿನ ಭೂಕಬಳಿಕೆ ಆರೋಪದ ಕುರಿತಂತೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ಪಷ್ಟನೆ ನೀಡಿರುವುದು..

ನಮ್ಮ ಸರ್ಕಾರ ಇನ್ನೂ ಒಂದು ವರ್ಷ ಮೂರು ತಿಂಗಳ ಕಾಲ ರಾಜ್ಯದಲ್ಲಿ ಪ್ರಗತಿ ಕೆಲಸವನ್ನು ಮಾಡಲಿದೆ. ರಾಜ್ಯದ ಸಿಎಂ ಜೊತೆಗೆ ಎಲ್ಲಾ ಸಚಿವರು, ಶಾಸಕರು ಕೆಲಸ ಮಾಡಲು ತಯಾರಿದ್ದೇವೆ. ವಿರೋಧ ಪಕ್ಷದವರು ಏನೋ ಹೇಳುತ್ತಿರುತ್ತಾರೆ. ಅದಕ್ಕೆ ನಾವು ತಲೆಕೆಡಿಕೊಳ್ಳುವುದಿಲ್ಲ. ನಮ್ಮ ಸರ್ಕಾರ ಜನರ ಪರವಾಗಿ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತದೆ. ಆದ್ದರಿಂದ ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಡಿಕೆಶಿ ಹಾಗೂ ಆನಂದ್ ಸಿಂಗ್ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿಯವರನ್ನು ಭೇಟಿ ಮಾಡಿದ ತಕ್ಷಣ ಅದಕ್ಕೆ ರಾಜಕೀಯ ಲೇಪನ ಹಚ್ಚುವ ಅವಶ್ಯಕತೆಯಿಲ್ಲ. ವೈಯುಕ್ತಿಕವಾಗಿ ಏನೋ ಮಾತನಾಡಿರುತ್ತಾರೆ. ಆದ್ದರಿಂದ ಅದಕ್ಕೆ ಹೆಚ್ಚು ಒತ್ತು ಕೊಡುವ ಅವಶ್ಯಕತೆಯಿಲ್ಲ ಎಂದರು.

ಕಾಂಗ್ರೆಸ್​ನವರಿಗೆ ಯಾರಾದರೂ ಬಿಜೆಪಿಗರು ಸಂಪರ್ಕದಲ್ಲಿದ್ದರೆ ಸತ್ಯಾಸತ್ಯಾತೆಯನ್ನು ಎಲ್ಲರ ಮುಂದೆ ಇಡಲಿ. ಇಂತವರು ನಮ್ಮ ಸಂಪರ್ಕದಲ್ಲಿದ್ದಾರೆಂದು ಹೇಳಲಿ. ಯಾಕೆ ಸುಳ್ಳು ಹೇಳಿಕೊಂಡು ತಿರುಗಾಡುವುದು. ಗಾಳಿಯಲ್ಲಿ ಗುಂಡು ಹಾರಿಸೋದು, ಉಡಾಫೆ ಮಾಡೋದು ಬೇಡ. ಯತ್ನಾಳ್ ಅವರ ಮಾತಿಗೆ ನಾನೇನೂ ಪ್ರತಿಕ್ರಿಯೆ ನೀಡೋದಿಲ್ಲ ಎಂದರು.

ನಗರದ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಪರಿಶೀಲನೆ ಮಾಡಲಾಗಿದೆ. ಎಲ್ಲ ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿವೆ. ಆದ್ದರಿಂದ ಕಾಮಗಾರಿಗಳಿಗೆ ವೇಗ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಂಗಳೂರು ಮನಪಾ ಆಯುಕ್ತರಿಗೆ ನಗರವನ್ನು ಸ್ವಚ್ಛತೆಯಿಂದ ಇರಿಸಲು ಹೆಚ್ಚು ಒತ್ತು ಕೊಡಬೇಕೆಂದು ಸೂಚನೆ ನೀಡಿದ್ದೇನೆ. ಮುಂದಿನ ತಿಂಗಳು ಮತ್ತೆ ನಗರಕ್ಕೆ ಆಗಮಿಸಿ, ಮತ್ತೆ ಪರಿಶೀಲನೆ ನಡೆಸುತ್ತೇನೆ ಎಂದರು.

ರೈಲ್ವೆ ಅಂಡರ್ ಪಾಸ್​​ಗೆ 30 ಕೋಟಿ ರೂ. ಇರಿಸಲಾಗಿದ್ದು, ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಅದನ್ನೂ ಕೂಡ ರೈಲ್ವೆ ಇಲಾಖೆಯ ಮುಖ್ಯಸ್ಥರೊಂದಿಗೆ ಮಾತನಾಡಿ, ಅದಕ್ಕೂ ವೇಗ ಕೊಡುವ ಕಾರ್ಯ ಮಾಡಲಾಗುತ್ತದೆ. ಮಂಗಳೂರಿಗೆ ಮೂರನೇ ಬಾರಿ ಆಗಮಿಸಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿ ಅವಧಿಯೊಳಗೆ ಮಾಡಿ ಮುಗಿಸುವ ಕೆಲಸ ಖಂಡಿತವಾಗಿಯೂ ಮಾಡುತ್ತೇವೆ.

ಗುಣಮಟ್ಟ ಪರಿಶೀಲನಾ ತಂಡವು ಎಲ್ಲಾ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಅಂತಿಮ ವರದಿ ನೀಡುತ್ತದೆ. ಸಾರ್ವಜನಿಕರು ಕಾಮಗಾರಿ ಗುಣಮಟ್ಟದ ದೂರು ನೀಡಿದ್ದಲ್ಲಿ ಅದನ್ನು ಪರಿಶೀಲನೆ ನಡೆಸಿ, ತಪ್ಪಿದ್ದಲ್ಲಿ ಸರಿಪಡಿಸುವ ಕಾರ್ಯ ಮಾಡುತ್ತೇವೆ. ಅಲ್ಲದೆ 2023 ಮಾರ್ಚ್ ಒಳಗೆ ಎಲ್ಲ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.