ETV Bharat / city

ಪಿಎಸ್ಐ ನೇಮಕಾತಿ ಅಕ್ರಮ ಆರೋಪ: ರ್‍ಯಾಂಕ್‌ ಪಡೆದಿದ್ದ ಕಲಬುರಗಿಯ ಅಭ್ಯರ್ಥಿ ಸಿಐಡಿ ವಶಕ್ಕೆ

author img

By

Published : Apr 11, 2022, 12:12 PM IST

Updated : Apr 11, 2022, 12:35 PM IST

PSI Recruitment Scam: ಮೂರು ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿ, ಮೂರು ಬಾರಿಯೂ ಅರ್ಹತೆ ಪಡೆಯುವಲ್ಲಿ ವಿಫಲನಾಗಿದ್ದ. ವಯಸ್ಸು ಮೀರಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಅಕ್ರಮವಾಗಿ ನೇಮಕಾತಿ ಪಡೆಯಲು ಆತ ಮುಂದಾಗಿದ್ದ ಎಂದು ಶಂಕಿಸಲಾಗಿದೆ.

CID
ಸಿಐಡಿ

ಕಲಬುರಗಿ: ಪೊಲೀಸ್ ಸಬ್ ಇನ್ಸ್​​ಪೆಕ್ಟರ್ (ಪಿಎಸ್ಐ) ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಸಿಐಡಿ ತನಿಖೆ ಸಹ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕುರಿತಂತೆ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ತನಿಖೆ ನಡೆಸುವುದಾಗಿ ಹೇಳಿದ್ದರು. ಇದೀಗ ತನಿಖೆ‌ ಕೈಗೆತ್ತಿಕೊಂಡಿರುವ ಸಿಐಡಿ (ಅಪರಾಧ ತನಿಖಾ ವಿಭಾಗ) ಪೊಲೀಸರು, ಸೇಡಂ ಪಟ್ಟಣದ ಅಭ್ಯರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ‌. 545 ಪಿಎಸ್ಐ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಹಿನ್ನೆಲೆ ಸಿಐಡಿ ತನಿಖೆಯನ್ನು ಚುರುಕುಗೊಳಿಸಿದೆ.

ಕಲಬುರಗಿ ಜಿಲ್ಲೆಯ ಠಾಣೆಯೊಂದರ ಎಎಸ್ಐಯೊಬ್ಬರ ಪುತ್ರನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮೂರು ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದ ಈತ, ಮೂರು ಬಾರಿಯೂ ಅರ್ಹತೆ ಪಡೆಯುವಲ್ಲಿ ವಿಫಲನಾಗಿದ್ದ. ವಯಸ್ಸು ಮೀರಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಅಕ್ರಮವಾಗಿ ನೇಮಕಾತಿ ಪಡೆಯಲು ಆತ ಮುಂದಾಗಿದ್ದ ಎಂದು ಶಂಕಿಸಲಾಗಿದೆ. ಕಳೆದ ವರ್ಷ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದು, ಕೇವಲ 20 ಪ್ರಶ್ನೆಗಳಿಗೆ ಉತ್ತರ ಬರೆದಿದ್ದರು. ನಂತರ ಅಕ್ರಮವಾಗಿ ಒಎಂಆರ್ (ಆಪ್ಟಿಕಲ್‌ ಮಾರ್ಕ್ಸ್ ರೆಕಗ್ನಿಷನ್) ಹಾಳೆ ತರಸಿಕೊಂಡು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ 121 ಅಂಕ ಪಡೆಯುವ ಮೂಲಕ ಕಲ್ಯಾಣ ಕರ್ನಾಟಕ ಮೀಸಲು ಅನ್ವಯ ರ್‍ಯಾಂಕ್‌ ಪಡೆದು ತೇರ್ಗಡೆ ಹೊಂದಿದ್ದ ಎನ್ನಲಾಗ್ತಿದೆ.

ಅನುಮಾನಗೊಂಡ ಸಿಐಡಿ ಬೆಂಗಳೂರಿನಿಂದ ನೇರವಾಗಿ ಬಂದು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಜೊತೆಗೆ ಇನ್ನೂ ಹಲವು ವಿದ್ಯಾರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಸಿಐಡಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ಶೋಧ ಕಾರ್ಯ ಆರಂಭಿಸಿದ್ದಾರೆ. ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಅಕ್ರಮ ನೇಮಕಾತಿಯಲ್ಲಿ ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಸೇರಿದಂತೆ ಹಲವರು ಭಾಗಿಯಾಗಿರುವ ಅನುಮಾನವಿದೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಕುರಿತು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ತನಿಖೆ: ಸಿಎಂ ಬೊಮ್ಮಾಯಿ

Last Updated : Apr 11, 2022, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.