ETV Bharat / city

ಜನ್ಮದಿನ ಆಚರಿಸಿ ಬರುವಾಗ ಜವರಾಯನ ಅಟ್ಟಹಾಸ: ಹೊತ್ತಿ ಉರಿದ ಬಸ್​,7 ಜನ ಸಜೀವ ದಹನ‌; ಮೋದಿ ಸಂತಾಪ

author img

By

Published : Jun 3, 2022, 10:05 AM IST

Updated : Jun 3, 2022, 6:26 PM IST

ಕಲಬುರಗಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಮತ್ತು ಖಾಸಗಿ ಬಸ್​ ಡಿಕ್ಕಿ ಬಳಿಕ ಬಸ್​ ಹೊತ್ತಿ ಉರಿದ ಪರಿಣಾಮ 7 ಜನ ಸಜೀವವಾಗಿ ದಹನ‌ವಾಗಿದ್ದಾರೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

Private bus and Lorry accident in Kalaburagi, bus catches fire in Kalaburagi, many people died in Kalaburagi bus fire, ಕಲಬುರಗಿಯಲ್ಲಿ ಖಾಸಗಿ ಬಸ್ ಮತ್ತು ಲಾರಿ ಅಪಘಾತ, ಕಲಬುರಗಿಯಲ್ಲಿ ಬಸ್‌ಗೆ ಬೆಂಕಿ, ಕಲಬುರಗಿ ಬಸ್‌ಗೆ ಬೆಂಕಿ ತಗುಲಿ ಹಲವರು ಸಾವು,
ಕಲಬುರಗಿಯಲ್ಲಿ ಭೀಕರ ಅಪಘಾತ

ಕಲಬುರಗಿ : ಕಮಲಾಪುರ ಹೊರವಲಯದಲ್ಲಿ ಖಾಸಗಿ ಸ್ಲೀಪರ್ ಬಸ್ ಹಾಗೂ ಗೂಡ್ಸ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಬಸ್ ಹೊತ್ತಿ ಉರಿದ ಪರಿಣಾಮ 7 ಜನರು ಸಜೀವ ದಹನವಾಗಿದ್ದಾರೆ. ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಕಮಲಾಪುರ ಹೊರವಲಯದಲ್ಲಿ ಈ ಅಪಘಾತ ಸಂಭವಿಸಿದೆ. ಗೋವಾ ಮೂಲದ ಆರೆಂಜ್ ಕಂಪನಿಗೆ ಸೇರಿದ ಸ್ಲೀಪರ್ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗೆ 6.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಸ್-ಗೂಡ್ಸ್ ಲಾರಿ ಅಪಘಾತದ ನಂತರ ಬಸ್ ಪಲ್ಟಿಯಾಗಿ ಏಕಾಏಕಿ ಬೆಂಕಿಯಿಂದ ಹೊತ್ತಿ ಉರಿಯಲು ಆರಂಭಿಸಿತ್ತು.

ಬೆಂಕಿ ಹೊತ್ತಿ ಉರಿಯುತ್ತಿರುವ ಹಿನ್ನೆಲೆ ಸ್ಥಳೀಯರು ಬಸ್​ ಬಳಿ ಬರಲು ಸಾಧ್ಯವಾಗಿರಲಿಲ್ಲ. ಕೂಡಲೇ ಸ್ಥಳೀಯರು ಅಗ್ನಿ ಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ಓದಿ: ನಾಲ್ವರು ಯುವಕರಿಗೆ ಡಿಕ್ಕಿ ಹೊಡೆದ ಕಾರು.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ಬಸ್​ನಲ್ಲಿದ್ದವರೆಲ್ಲ ಹೈದರಾಬಾದ್​ನ ಸಿಕಂದ್ರಾಬಾದ್​ ನಿವಾಸಿಗಳಾಗಿದ್ದು, 2 ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಎಂಜಿನಿಯರ್ ಅರ್ಜುನಕುಮಾರ್‌ ಎಂಬುವರ ಮಗನ ಜನ್ಮ ದಿನ ಆಚರಣೆಗೆ ಗೋವಾಗೆ ಕುಟುಂಬಸ್ಥರೆಲ್ಲ ತೆರಳಿದ್ದರು. ನಿನ್ನೆ ಜನ್ಮ ದಿನ ಆಚರಿಸಿ ವಾಪಸ್ ಆಗುತ್ತಿರುವಾಗ ಅಪಘಾತ ಸಂಭವಿಸಿದೆ. ಎರಡು ಕುಟುಂಬಗಳ ಒಟ್ಟು 35 ಜನರು ಸೇರಿ ಓರ್ವ ಚಾಲಕ ಮತ್ತು ಕ್ಲೀನರ್ ಬಸ್‌ನಲ್ಲಿದ್ದರು ಎಂದು ತಿಳಿದು ಬಂದಿದೆ.

ಹೊತ್ತಿ ಉರಿದ ಬಸ್​,7 ಜನ ಸಜೀವ ದಹನ‌

ಬಸ್‌ನಲ್ಲಿ ಇದ್ದವರ ಪೈಕಿ 7 ಮಂದಿ​ ಹೊರ ಬರಲಾಗದೆ ಸಜೀವ ದಹನವಾಗಿದ್ದಾರೆ. ಆರೆಂಜ್​ ಟೂರ್ಸ್ & ಟ್ರಾವೆಲ್ಸ್​ಗೆ ಸೇರಿದ‌ ಈ ಬಸ್, ಗೋವಾದಿಂದ ಹೈದ್ರಾಬಾದ್‌ ಕಡೆಗೆ ತೆರಳುತ್ತಿತ್ತು. ಮುಖಾಮುಖಿ ಡಿಕ್ಕಿ ನಂತರ ಬಸ್ ಪಕ್ಕದ ಬ್ರಿಡ್ಜ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನ್ಮ ದಿನ ಆಚರಿಸಿ ಬರುವಾಗ ದುರಂತ : ಸಿಕಂದ್ರಾಬಾದ್​ ನಿವಾಸಿಗಳಾದ ಎಂಜಿನಿಯರ್ ಅರ್ಜುನಕುಮಾರ (37), ಅವರ ಪತ್ನಿ ಸರಳಾದೇವಿ(32), ಪುತ್ರ ಬಿವಾನ್ (4), ದೀಕ್ಷಿತ್ (9), ಅನಿತಾ ರಾಜು (40), ಶಿವಕುಮಾರ (35) ಮತ್ತು ಇವರ ಪತ್ನಿ ರವಾಲಿ (30) ಅಪಘಾತದಲ್ಲಿ ಮೃತರಾಗಿದ್ದಾರೆ. ಇವರೆಲ್ಲ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿದ್ದು, ಎಲ್ಲ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಕಲಬುರಗಿ ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ: ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಸಂಭವಿಸಿರುವ ಭೀಕರ ದುರ್ಘಟನೆಯಿಂದ ದುಃಖವಾಗಿದೆ. ದುರಂತದಲ್ಲಿ ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡವರ ಬಗ್ಗೆ ನನ್ನ ಸಂತಾಪ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಸ್ಥಳೀಯ ಆಡಳಿತ ಸಂತ್ರಸ್ತರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.

Last Updated : Jun 3, 2022, 6:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.