ETV Bharat / city

ಪ್ರೀತಿಯಲ್ಲಿ ಗೆದ್ದು, ಸಾವಿನಲ್ಲಿ ಒಂದಾದ ಜೋಡಿ : ಹನುಮಂತ-ಶೃತಿ ದುರಂತ ಪ್ರೇಮಕಥೆ

author img

By

Published : Dec 17, 2021, 1:42 PM IST

Updated : Dec 17, 2021, 1:56 PM IST

ಪೋಷಕರ ಆಕ್ರಂದನ‌ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ, ಬಾಳಿ ಬದುಕಬೇಕಾದ ಪ್ರೇಮಿಗಳಿಬ್ಬರ ದುರಂತ ಅಂತ್ಯ ಮನಕಲುಕುವಂತೆ ಮಾಡಿದೆ..

girl-committed-suicide-in-kalaburagi
ಹನಮಂತ ಶೃತಿ

ಕಲಬುರಗಿ : ಅವರಿಬ್ಬರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡ್ತಿದ್ರು. ಮನೆಯಲ್ಲಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡು ಮದುವೆ ಮಾಡಿಕೊಳ್ಳಲು ಸಿದ್ಧತೆ ಕೂಡ ನಡೆಸಿದ್ದರು. ಆದ್ರೆ, ತಾನೊಂದು ಬಗೆದರೆ ವಿಧಿಯೊಂದು ಬಗೆದಿತ್ತು ಅನ್ನೋ ಹಾಗೆ, ಯುವಕ ಆಯತಪ್ಪಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ರೆ, ಮನನೊಂದ ಯುವತಿ ನೇಣಿಗೆ ಕೊರಳೊಡ್ಡಿ ತನ್ನ ಜೀವನ ಪಯಣ‌ ಕೊನೆಗೊಳಿಸಿದ್ದಾಳೆ.

ಪ್ರೀತಿಗಾಗಿ ಯುವತಿ ಸಾವು : ನಗರದ ಪಿಡಬ್ಲ್ಯೂಡಿ ಕ್ವಾಟರ್ಸ್ ನಿವಾಸಿ ಶೃತಿ (18) ಎಂಬುವರು ಆತ್ಮಹತ್ಯೆಗೆ ಶರಣಾದವರು. ದ್ವೀತಿಯ ಪಿಯುಸಿ ಓದುತ್ತಿದ್ದ ಶೃತಿ, ಸಂಬಂಧಿಯಾದ ಬಸವನಬಾಗೇವಾಡಿ ನಿವಾಸಿ ಹನುಮಂತ ಎಂಬಾತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ಳು. ಹನುಮಂತ ಕೂಡ ಅಷ್ಟೇ ಪ್ರೀತಿ ಮಾಡುತ್ತಿದ್ದ.

ಇಬ್ಬರೂ ತಮ್ಮ‌ ಪೋಷಕರಿಗೆ ಪ್ರೀತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಪೋಷಕರು ಸಹ ಮದುವೆಗೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ರು. ಇನ್ನೇನು ಎಲ್ಲಾ ಅಂದುಕೊಂಡಂತೆ ಆಯ್ತಲ್ಲ ಎನ್ನುವ ಖುಷಿಯಲ್ಲಿರುವಾಗಲೇ, ಹನುಮಂತ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದಾನೆ.

ಕಲಬುರಗಿ ಯುವತಿ ಆತ್ಮಹತ್ಯೆ : ಕಳೆದ ಒಂದು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ಹನುಮಂತ ಸಾವನ್ನಪ್ಪಿದ್ದ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದ ಹನಮಂತನ ಸಾವಿನಿಂದ ಶೃತಿಗೆ ಜೀವದ ಮೇಲಿನ‌ ಆಸೆ ಹೋಗಿತ್ತು. ಆಹಾರ ತ್ಯಜಿಸಿದ್ದಳು. ಕಡೆಗೆ ನಿನ್ನೆ ಸಂಜೆ ಮನೆಯ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪೋಷಕರ ಆಕ್ರಂದನ‌ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ, ಬಾಳಿ ಬದುಕಬೇಕಾದ ಪ್ರೇಮಿಗಳಿಬ್ಬರ ದುರಂತ ಅಂತ್ಯ ಮನಕಲಕುವಂತೆ ಮಾಡಿದೆ.

Last Updated : Dec 17, 2021, 1:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.