ETV Bharat / city

ರೈತನ ಭೂಮಿಯಲ್ಲಿ ಅತಿ ದೊಡ್ಡ ರಾಷ್ಟ್ರಧ್ವಜ: 75 ಅಡಿ ಉದ್ದ, 50 ಅಡಿ ಅಗಲ, 140 ಕೆಜಿ ತೂಕದ ಧ್ವಜ ನಿರ್ಮಿಸಿದ ಕುಟುಂಬ

author img

By

Published : Aug 12, 2022, 2:29 PM IST

ಬೃಹತ್​ ಗಾತ್ರದ ರಾಷ್ಟ್ರಧ್ವಜ: ದೇಶದ್ಯಾಂತ ಆಚರಿಸುತ್ತಿರುವ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ಕಲಬುರಗಿ ಜಿಲ್ಲೆಯ ಕಮಲಾಪುರದ ಕುದುರೆ ಮುಖ ಬಳಿ ಕುಟುಂಬವೊಂದು ಅತಿ ದೊಡ್ಡ ರಾ‍ಷ್ಟ್ರಧ್ವಜ ನಿರ್ಮಿಸುವ ಮೂಲಕ ದೇಶಪ್ರೇಮ ಮೆರೆದಿದೆ.

flag
ರೈತನ ಭೂಮಿಯಲ್ಲಿ ಅನಾವರಣಗೊಂಡ ರಾಷ್ಟ್ರಧ್ವಜ

ಕಲಬುರಗಿ: ದೇಶಾದ್ಯಂತ 75ನೇ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ಹರ್ ಘರ್ ತಿರಂಗಾ ಅಭಿಯಾನ ಕೂಡ ಕೇಂದ್ರ ಸರ್ಕಾರ ಆರಂಭಿಸಿದ್ದು, ಸ್ವಾತಂತ್ರೋತ್ಸವದ ಹಿನ್ನೆಲೆ ಕಲಬುರಗಿ ಜಿಲ್ಲೆಯಲ್ಲಿ ಸಹ ಬೃಹತ್ ಆಕಾರದ ರಾಷ್ಟ್ರಧ್ವಜ ನಿರ್ಮಾಣ ಮಾಡುವ ಮೂಲಕ ಕುಟುಂಬವೊಂದು ರಾಷ್ಟ್ರಪ್ರೇಮ ಮೆರೆದಿದೆ. ರಾಷ್ಟ್ರಧ್ವಜ ನಿರ್ಮಿಸಿದ ಸ್ಥಳ ಇದೀಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ರೈತನ ಭೂಮಿಯಲ್ಲಿ ಅನಾವರಣಗೊಂಡ ಬೃಹತ್​ ಗಾತ್ರದ ರಾಷ್ಟ್ರಧ್ವಜ

ಹೌದು, 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಕಲಬುರಗಿ ಜಿಲ್ಲೆಯ ಕಮಲಾಪುರದ ಹೃದಯ ಭಾಗವಾದ ಕುದುರೆ ಮುಖ ಬಳಿ ಬಮ್ಮಣ ಪರಿವಾರದ ವತಿಯಿಂದ ಅತಿ ದೊಡ್ಡ ರಾಷ್ಟ್ರಧ್ವಜವನ್ನು ನಿರ್ಮಿಸಲಾಗಿದ್ದು, ಏಳು ದಿನಗಳ ಕಾಲ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಲಬುರಗಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 15ರ ಬಾಚನಾಳ ಸಮೀಪದ ಕುದುರೆ ಮುಖ ಪರ್ವತ ಬಳಿಯ 23 ಎಕರೆ ವಿಶಾಲ ಪ್ರದೇಶದಲ್ಲಿ ಧ್ವಜಾರೋಹಣ ಅನಾವರಣ ಮಾಡಲಾಯಿತು. ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಅನ್ನದಾತನ ಭೂಮಿಯಲ್ಲಿ 75 ಅಡಿ ಉದ್ದ, 50 ಅಡಿ ಅಗಲದ ಸುಮಾರು 140 ಕೆಜಿಯ ತೂಕದ ರಾಷ್ಟ್ರಧ್ವಜ ಅನಾವರಣಗೊಂಡಿದೆ.

ಭಾರತೀಯ ಸೈನ್ಯದಿಂದ ಜಮ್ಮುವಿನ ಲಡಾಖ್ ಪ್ರದೇಶದಲ್ಲಿ ಗಾಂಧಿ ಜಯಂತಿ ನಿಮಿತ್ತ 150 ಅಡಿ ಎತ್ತರ ಧ್ವಜವನ್ನು ಹಾರಿಸಲಾಗಿತ್ತು. ಇದೀಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಅಮೃತ ಮಹೋತ್ಸವದ ನಿಮಿತ್ತ ಭಾರಿ ಗಾತ್ರದ ಖಾದಿ ಬಟ್ಟೆಯಿಂದ ತಯಾರಿಸಿದ ತಿರಂಗಾ ಧ್ವಜ ಪ್ರದರ್ಶನಕ್ಕೆ ಇಡಲಾಗಿದೆ.

ಖಾದಿ ಬಟ್ಟೆಯಿಂದ ತಯಾರಾದ ಬೃಹತ್ ರಾಷ್ಟ್ರಧ್ವಜ: ಧಾರವಾಡ ಜಿಲ್ಲೆಯ ಗರಗ ಗ್ರಾಮದ ರಾಷ್ಟ್ರಧ್ವಜ ತಯಾರಿಸುವ 300 ಜನ ಮಹಿಳೆಯರು ಇಲ್ಲಿಗೆ ಆಗಮಿಸಿ, ಶುದ್ಧ ಹತ್ತಿ ಉಪಯೋಗಿಸಿ ನೇಯ್ದ ಖಾದಿ ಬಟ್ಟೆಯಿಂದ ಸುಮಾರು ಒಂದೂವರೆ ತಿಂಗಳು ಕೆಲಸ ಮಾಡಿ, ಈ ಧ್ವಜ ತಯಾರಿಸಿದ್ದಾರೆ. ಕೇಂದ್ರ ಸರ್ಕಾರದ ಧ್ವಜ ಸಂಹಿತಿ ಮಂಡಳಿ ಮಾರ್ಗಸೂಚಿ ಪಾಲಿಸಲಾಗಿದ್ದು, ಇಂದಿನ ಯುವ ಪೀಳಿಗೆಗೆ ದೇಶಾಭಿಮಾನ ಮೂಡಿಸಲು ವಿಶಿಷ್ಟವಾಗಿ ಧ್ವಜಾರೋಹಣ ನೇರವೇರಿಸಲಾಗುತ್ತಿದೆಯಂತೆ.

ಒಟ್ಟಿನಲ್ಲಿ ಬಮ್ಮಣ್ಣ ಪರಿವಾರದ ದೇಶಪ್ರೇಮ ನಿಜಕ್ಕೂ ಮೆಚ್ಚುವಂತಹದ್ದು. ಖಾದಿ ಬಳಸಿ ಬೃಹದಾಕಾರದ ಧ್ವಜ ನಿರ್ಮಿಸುವ ಮೂಲಕ ಜನರಲ್ಲಿ ದೇಶಪ್ರೇಮ ಹೆಚ್ಚಿಸುವ ಪ್ರಯತ್ನವನ್ನ ಬಮ್ಮಣ ಪರಿವಾರದವರು ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಜಿಲ್ಲಾಡಳಿತ ಸೇರಿದಂತೆ ಕಲಬುರಗಿ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಧ್ವಜ ಪ್ರದರ್ಶನಕ್ಕೆ ಇಂದಿನಿಂದ ಆ. 17ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ:ಶ್ರೀನಗರದಲ್ಲಿ ಹರ್ ಘರ್ ತಿರಂಗಾ ರ್‍ಯಾಲಿಗೆ ಚಾಲನೆ ನೀಡಿದ ಲೆಫ್ಟಿನೆಂಟ್ ಗವರ್ನರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.