ETV Bharat / city

ಬಿಜೆಪಿಯವರು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ: ಸಿದ್ದರಾಮಯ್ಯ

author img

By

Published : Apr 6, 2022, 3:52 PM IST

ಬಿಜೆಪಿಯುವರು ತಮ್ಮ ವೈಫಲ್ಯವನ್ನು ಮರೆಮಾಚಲು ಧಾರ್ಮಿಕ ವಿಚಾರಗಳನ್ನಿಟ್ಟುಕೊಂಡು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Siddaramaiah outrage on BJP
ವಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ

ಹುಬ್ಬಳ್ಳಿ (ಧಾರವಾಡ): ಬಿಜೆಪಿಯವರು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಜನರ ಮುಂದೆ ಹೋಗಲು ಅವರ ಬಳಿ ಸಾಧನೆಗಳಿಲ್ಲ. ಅದನ್ನು ಮರೆಮಾಚಲು ಧಾರ್ಮಿಕ ವಿಚಾರಗಳನ್ನಿಟ್ಟುಕೊಂಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸದ್ಯ ಮಸೀದಿಯಲ್ಲಿ ಮೈಕ್ ಬಳಸುವ ವಿಷಯ ಮುನ್ನಲೆಗೆ ಬಂದಿದೆ. ಇನ್ನೂ ಮಾವಿನ ಹಣ್ಣು ಖರೀದಿ ವಿಚಾರವೂ ಇದರಿಂದ ಹೊರತಲ್ಲ ಎಂದರು.

ಪ್ರತಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

ಹಿಂದು-ಮುಸ್ಲಿಂರು ಬಹಳ ವರ್ಷಗಳಿಂದ ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ನಮ್ಮೂರಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹಣ್ಣು ಕೊಡುತ್ತಿದ್ದೆವು. ಆದ್ರೀಗ ಬಿಜೆಪಿಯವರು ಮತಗಳನ್ನು ಕ್ರೋಢೀಕರಣ ಮಾಡಬೇಕೆಂದು ಹೀಗೆ ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಹುನ್ನಾರಗಳೆಲ್ಲ ಜನರಿಗೆ ಗೊತ್ತಾಗುತ್ತಿವೆ ಎಂದು ಕಿಡಿಕಾರಿದರು.

ಹಲಾಲ್: ಮುಸ್ಲಿಂರು ಕಟ್ ಮಾಡಿದ ಮಾಂಸವನ್ನೇ ನಾವು ತಿನ್ನೋದು. ತಿನ್ನದೇ ಇರುವವರು ಹೀಗೆ ಮಾಡುತ್ತಿದ್ದಾರೆ. ಹಲಾಲ್​ ಮುಸನಲ್ಮಾನರ ನಂಬಿಕೆ. ಕುರಿಗಳಲ್ಲಿ ರಕ್ತ ಇರಬಾರದು ಅನ್ನೋದು ಅವರ ನಂಬಿಕೆ. ನಾವು ಕುರಿ ಕಡಿದರೆ ಅವರನ್ನೇ ಕರೆಸಿ ಕ್ಲೀನ್ ಮಾಡಿಸುತ್ತಿದ್ದೆವು. ಆದ್ರೀಗ ಹಲಾಲ್​ ವಿಷಯವನ್ನಿಟ್ಟುಕೊಂಡಿದ್ದಾರೆ. ಬೆಲೆ ಏರಿಕೆ ಬಗ್ಗೆ ಏಕೆ ಮಾತನಾಡಲ್ಲ? ಗೊಬ್ಬರ ಬೆಲೆ ಸಹ ಏರಿಕೆ ಆಗಿದೆ. ಇನ್ನೂ ಗ್ಯಾಸ್, ಅಡುಗೆ ಎಣ್ಣೆ ಸೇರಿ ಅಗತ್ಯವಿರುವ ಎಲ್ಲದರ ಬೆಲೆ ಹೆಚ್ಚಾಗಿದೆ. ಇದರ ಬಗ್ಗೆ ಅವರು ಮಾತನಾಡಲ್ಲ. ಧಾರ್ಮಿಕ ಭಾವನೆ ಕೆರಳಿಸುವಂಥದ್ದನ್ನು ನಾವು ಖಂಡಿಸುತ್ತೇವೆ ಎಂದರು.

ಚಂದ್ರು ಕೊಲೆ: ಚಂದ್ರು ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಯಾರೇ ಇರಲಿ ಅವರ ವಿರುದ್ಧ ಕ್ರಮ ಆಗಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಇದೇ ವೇಳೆ ಗೃಹ ಸಚಿವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿ, ಹೋಮ್ ಮಿನಿಸ್ಟರ್​ಗೆ ಅನುಭವವೇ ಇಲ್ಲ. ಇಲಾಖೆಯನ್ನು ನಿಭಾಯಿಸಲು ಬರಲ್ಲ. ಯಾರದ್ದೇ ಕೊಲೆಯಾದರೂ ನಾನು ಖಂಡಿಸುತ್ತೇನೆ. ಹಿಂದೂ ಸಮುದಾಯದವರು ಸತ್ತರೂ ಅದು ಜೀವ, ಮುಸ್ಲಿಂರು ಸತ್ತರೂ ಜೀವವೇ. ನರಗುಂದದಲ್ಲಿ ಮುಸ್ಲಿಂ ಹತ್ಯೆ ಆದಾಗ ಏಕೆ 25 ಲಕ್ಷ ರೂ. ಕೊಟ್ಟಿಲ್ಲ. ಹರ್ಷನನ್ನು ಕೊಂದವರನ್ನು ನೇಣಿಗೆ ಹಾಕಿ ಜೀವಾವಧಿ ಶಿಕ್ಷೆ ಕೊಡಿಸಿ. ಹಾಗೆ ಮುಸ್ಲಿಂ ಯುವಕರ ಹತ್ಯೆಯಾದವರಿಗೂ ಶಿಕ್ಷೆಯಾಗಲಿ ಎಂದು ಹೇಳಿದರು.

ಇದನ್ನೂ ಓದಿ: ಬೇಜವಾಬ್ದಾರಿ ಹೇಳಿಕೆಗೆ ಆರಗ ಜ್ಞಾನೇಂದ್ರ ವಿಷಾದಿಸಿದ್ರು.. ಇಷ್ಟಾದ್ರೂ ಸಚಿವ ಅಶ್ವತ್ಥ್‌ ನಾರಾಯಣ ತಿಪ್ಪೇ ಸಾರಿಸುವ ಮಾತು..

ಮೈಸೂರಿನಲ್ಲಿ ಗ್ಯಾಂಗ್ ರೇಪ್ ಆದಾಗ ಗೃಹ ಸಚಿವರು ಅಷ್ಟೊತ್ತಿಗೆ ಆ ಹುಡುಗಿ ಯಾಕೆ ಅಲ್ಲಿಗೆ ಹೋಗಿದ್ರು ಅಂತ ಹೇಳಿಕೆ ಕೊಟ್ಟಿದ್ದರು. ಗೃಹ ಸಚಿವರಾಗಲು ಲಾಯಕ್ ಏನ್ರಿ ಇವರು? ಎಂದು ಪ್ರಶ್ನಿಸಿ, ಸಿಎಂ ಸಹ ಅವರಿಗೆ ಕುಮ್ಮಕ್ಕು ಕೊಡ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಸಚಿವ ಈಶ್ವರಪ್ಪ ಈಗಲೇ ರಾಜೀನಾಮೆ ಕೊಡಬೇಕೆಂದು ಇದೇ ವೇಳೆ ಆಗ್ರಹಿಸಿದರು. ಹೂಡಿಕೆ ಕರ್ನಾಟಕಕ್ಕೆ ಬರದೇ ತಮಿಳುನಾಡಿಗೆ ಹೋಗುತ್ತಿದೆ. ಎಲ್ಲ ಉದ್ಯಮಗಳು ರಾಜ್ಯದಲ್ಲಿ ಮುಚ್ಚಿ ಹೋಗುತ್ತಿವೆ. ನಾವು ಸುಳ್ಳು ಹೇಳಲ್ಲ, ನಾವು ಸತ್ಯ ಹೇಳಿಕೊಂಡು ಜನರ ಮುಂದೆ ಹೋಗುತ್ತೇವೆ. ಬೋಗಸ್ ಧರ್ಮ ಪ್ರಚಾರವನ್ನು ನಾವು ಮಾಡುವುದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.