ETV Bharat / city

ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆ; ಧರೆಗುರುಳಿದ ಮರ, ಸಂಪರ್ಕ ಕಡಿತ

author img

By

Published : Jun 19, 2021, 11:58 AM IST

ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮ ಮಳೆಯಿಂದ ಸಂಪರ್ಕ ಕಡಿದುಕೊಂಡಿದ್ದು, ಗ್ರಾಮಸ್ಥರೇ ಸೇರಿ ರಸ್ತೆ ದುರಸ್ತಿ ಕಾರ್ಯಕ್ಕೆ ಇಳಿದಿದ್ದಾರೆ.

ಮಳೆ
ಮಳೆ

ಧಾರವಾಡ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಗ್ರಾಮದ ಸಂಪರ್ಕ ಕಡಿತಗೊಂಡ ಹಿನ್ನೆಲೆ ದಾರಿಯನ್ನು ಗ್ರಾಮಸ್ಥರು ತಾವೇ ಸರಿ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ ಮತ್ತು ಗ್ರಾಪಂನ ದಿವ್ಯ ನಿರ್ಲಕ್ಷ್ಯ ಎಂದು ಆರೋಪಿಸಿರುವ ಗ್ರಾಮಸ್ಥರು ತಮ್ಮೂರ ದಾರಿಯನ್ನು ತಾವೇ ಸರಿಪಡಿಕೊಂಡಿದ್ದಾರೆ.

ಮಳೆಯಿಂದ ಕಡಿತಗೊಂಡ ಗ್ರಾಮದ ಸಂಪರ್ಕ

ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮ ಮಳೆಯಿಂದ ಸಂಪರ್ಕ ಕಡಿದುಕೊಂಡಿತ್ತು. ಪ್ರತೀ ಸಲದ ಮಳೆಗೆ ಸೇತುವೆ ಮುಳುಗಡೆಯಾಗುತ್ತದೆ. ಸಾಕಷ್ಟು ಹೋರಾಟ ಮಾಡಿದರೂ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದೆ.

ಅರಣ್ಯ ಭಾಗದಿಂದ ನೀರಿನ ಜೊತೆ ಹರಿದು ಬರುವ ಮರದ ದಿನ್ನೆಗಳ ಅಡ್ಡಿಯಿಂದ ಸೇತುವೆ ಮುಳುಗಡೆಯಾಗುತ್ತದೆ. ಹೀಗಾಗಿ ಗ್ರಾಮಸ್ಥರು ತಾವೇ ಚಂದಾ ಸಂಗ್ರಹಿಸಿ ದಾರಿ ಸರಿ ಮಾಡಿಕೊಂಡಿದ್ದಾರೆ. ಸೇತುವೆಗೆ ಅಡ್ಡಲಾಗಿದ್ದ ಮರದ ದಿನ್ನೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ನೀರು ಹರಿದು ಹೋಗಲು ದಾರಿ ಮಾಡಿದ್ದಾರೆ.

Hubli-Dharwad rain
ಮಳೆಯಿಂದ ಗ್ರಾಮದ ಸಂಪರ್ಕ ಕಡಿತ

ಧರೆಗೆ ಉರುಳಿದ ಮರ: ಸಂಪರ್ಕ ಕಡಿತ

ಇನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ನಗರದ ಬಹುತೇಕ ಕಡೆಗಳಲ್ಲಿ ಅವಾಂತರ ಸೃಷ್ಟಿಸುತ್ತಿದೆ. ಸತತವಾಗಿ ಸುರಿದ ಮಳೆಗೆ ಮರವೊಂದು ಧರೆಗೆ ಉರುಳಿದ ಘಟನೆ ಭವಾನಿ ನಗರದ ಆಕೃತಿ ಅಪಾರ್ಟ್ ಮೆಂಟ್ ಪಕ್ಕದಲ್ಲಿ ನಡೆದಿದೆ.

Hubli-Dharwad rain
ಧರೆಗೆ ಉರುಳಿದ ಮರ

ಮರವು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಿತ್ಯ ನೂರಾರು ವಾಹನ ಸವಾರರು ಓಡಾಡುವ ರಸ್ತೆಯಲ್ಲಿಯೇ ಮರವು ನೆಲಕ್ಕೆ ಬಿದ್ದಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.

ಮಳೆ ಆಗುತ್ತಿದ್ದ ಪರಿಣಾಮ ಜನರ ಓಡಾಟ ವಿರಳವಿದ್ದಾಗ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭವಾನಿ‌ನಗರ- ದೇಶಪಾಂಡೆ ನಗರ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.