ETV Bharat / city

ಪ್ರಾಂಶುಪಾಲ ವೃತ್ತಿ ತೊರೆದು ಸಾವಯವ ಕೃಷಿಯತ್ತ ಮುಖಮಾಡಿದ ದಂಪತಿ

author img

By

Published : Jul 1, 2021, 10:00 PM IST

ಗದುಗಿನ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ‌ಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ತಮ್ಮ ಹುದ್ದೆಯನ್ನು ತ್ಯಜಿಸಿ, ಸಾವಯವ ಕೃಷಿ ಪದ್ಧತಿ ಮೂಲಕ ಗುಣಮಟ್ಟದ ತರಕಾರಿಗಳನ್ನು ಬೆಳೆದು ಗ್ರಾಹಕರ ಮನೆಗೆ ತಲುಪಿಸುತ್ತಿದ್ದಾರೆ.

organic farming
ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ

ಹುಬ್ಬಳ್ಳಿ: ಸಾವಯವ ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು ತಮ್ಮ ಹುದ್ದೆಯನ್ನು ತ್ಯಜಿಸಿ ಶುದ್ಧ ಹಾಗೂ ಗುಣಮಟ್ಟದ ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ

ಹುಬ್ಬಳ್ಳಿಯ ಬಿ.ವಿ.ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಗದುಗಿನ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ‌ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಪ್ರಕಾಶ್​ ಹುಬ್ಬಳ್ಳಿ ಅವರು ತಮ್ಮ ಪತ್ನಿ ಕುಸುಮಾ ಹುಬ್ಬಳ್ಳಿ ಅವರೊಂದಿಗೆ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾವಯವ ಕೃಷಿಯಲ್ಲಿ ಹೆಚ್ಚು ಆಸಕ್ತಿಯಿದ್ದ ಕಾರಣ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಹುದ್ದೆ ಬಿಟ್ಟು, ದಂಪತಿಗಳಿಬ್ಬರು ಕಲಘಟಗಿ ತಾಲೂಕಿನ ಹಿಂಡಸಗೇರಿ ಗ್ರಾಮದಲ್ಲಿದ್ದ ಒಟ್ಟು 4 ಎಕರೆ ಜಮೀನಿನಲ್ಲಿ ತರಕಾರಿ ಬೆಳೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಪ್ರಸ್ತುತ ಒಟ್ಟು 55 ವಿವಿಧ ರೀತಿಯ ತರಕಾರಿ ಬೆಳೆ ಬೆಳೆಯುತ್ತಿರುವ ಇವರು, 40 ಬಗೆಯ ದೇಶಿ ತರಕಾರಿ ಹಾಗೂ 15 ವಿದೇಶಿ ತರಕಾರಿಗಳನ್ನು ಬೆಳೆಯುತ್ತಾರೆ. ಜೊತೆಗೆ ಹುಬ್ಬಳ್ಳಿ ನಗರದ ನಿವಾಸಿಗಳಿಂದ ಆನ್‌ಲೈನ್ ಮತ್ತು ವಾಟ್ಸ್ಆಪ್ ಮೂಲಕ ಆರ್ಡರ್ ಪಡೆದುಕೊಂಡು ಗ್ರಾಹಕರ ಮನೆ ಬಾಗಿಲಿಗೆ ತರಕಾರಿ ಸರಬರಾಜು ಮಾಡುವ ಮೂಲಕ ಹೆಸರುಗಳಿಸಿದ್ದಾರೆ.

ಎರೆಹುಳು ಗೊಬ್ಬರ , ಬೇವಿನ ಹಿಂಡಿ, ಬೇವಿನ ಎಣ್ಣೆ, ಬೇವಿನ ಅಸ್ತ್ರ , ಅಗ್ನಿ ಅಸ್ತ್ರ , ಹುಳಿ ಮಜ್ಜಿಗೆ, ಕೀಟಗಳ ನಿರ್ವಹಣೆಗೆ ಸ್ಟಿಕಿ ಟ್ರ್ಯಾಪ್, ಲೈಟ್ ಟ್ರಾಪ್, ಚೆಂಡು ಹೂವು ಬೆಳೆದು ಹುಬ್ಬಳ್ಳಿ ನಗರದ ಗ್ರಾಹಕರ ಮನೆ ಬಾಗಿಲಿಗೆ ಗುಣಮಟ್ಟದ ತರಕಾರಿಗಳನ್ನು ತಮ್ಮ "ನೇಚರ್ ಫಸ್ಟ್ ಫಾರ್ಮ್" ಮೂಲಕ ಸರಬರಾಜು ಮಾಡುತ್ತಿದ್ದಾರೆ.

ತೋಟಗಾರಿಕೆ ಉಪನಿರ್ದೇಶಕ ಕಾಶೀನಾಥ ಭದ್ರುನವರ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಹಾಂತೇಶ ಪಟ್ಟಣಶೆಟ್ಟಿ, ಸಹಾಯಕ ತೋಟಗಾರಿಕೆ ಅಧಿಕಾರಿ ಕೆ.ವಿ ಅಂಗಡಿ ಅವರ ಮಾರ್ಗದರ್ಶನದಲ್ಲಿ ತೋಟಗಾರಿಕೆ ಇಲಾಖೆ ಯೋಜನೆಗಳಾದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊದಿಕೆ ಮತ್ತು ಐಐಹೆಚ್‌ಆರ್ ತರಕಾರಿ ಸ್ಪೆಷಲ್ ಸೌಲಭ್ಯಗಳನ್ನು ಪಡೆದಿದ್ದಾರೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನೈಸರ್ಗಿಕ ಸಾವಯವ ವಿಧಾನಗಳಲ್ಲಿ ಬೆಳೆದ ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಾ, ವರ್ಷವಿಡಿ ಆದಾಯ ಪಡೆಯುತ್ತಿರುವ ದಂಪತಿ ಕಾರ್ಯ ನಿಜಕ್ಕೂ ಮಾದರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.