ETV Bharat / city

ಎಸ್ಟಿ ಮೀಸಲಾತಿಗೆ ಪಟ್ಟು.. ವರದಿ ಬರುವ ಮುನ್ನವೇ ಕುರುಬ ಸಮುದಾಯದಿಂದ ಮತ್ತೆ ಹಕ್ಕೊತ್ತಾಯ ಸಭೆ

author img

By

Published : Jul 4, 2022, 1:16 PM IST

ಕುರುಬ ಸಮಾಜವನ್ನು ಎಸ್​ಟಿಗೆ ಸೇರ್ಪಡೆ ಮಾಡಬೇಕು ಎನ್ನುವ ಹೋರಾಟ, ಪಾದಯಾತ್ರೆ ನಂತರ ಈಗ ಮತ್ತೆ ಹಕ್ಕೊತ್ತಾಯ ಸಭೆಗಳು ಶುರುವಾಗಿವೆ. ಎಸ್​ಟಿ ಮೀಸಲಾತಿಗೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕುವುದಕ್ಕಾಗಿ ಮೀಸಲಾತಿ ಹಕ್ಕೊತ್ತಾಯ ಸಭೆ ನಡೆಯುತ್ತಿದೆ.

Sri Niranjanandapuri Swamiji of Kanaka Gurpeeth
ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ

ದಾವಣಗೆರೆ : ರಾಜ್ಯ ಸರ್ಕಾರ ಇನ್ನೇನು ಏಳೆಂಟು ತಿಂಗಳು ಅಧಿಕಾರದಲ್ಲಿದ್ದು, ಮತ್ತೆ ಚುನಾವಣೆಯನ್ನು ಎದುರಿಸಲಿದೆ. ಆದರೆ ಈಗ ಮೀಸಲಾತಿ ಹೋರಾಟಗಳು ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಕಂಟಕವಾಗಲಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಕುರುಬ ಸಮಾಜಕ್ಕೆ ಎಸ್​ಟಿ ಮೀಸಲಾತಿ ನೀಡುವಂತೆ ಮತ್ತೆ ಒತ್ತಾಯಗಳು ಶುರುವಾಗಿವೆ. ಈಗಾಗಲೇ ಕನಕ ಗುರುಪೀಠದಲ್ಲಿ ಮೀಸಲಾತಿ ಹಕ್ಕೊತ್ತಾಯ ಸಭೆ ನಡೆಸುತ್ತಿದ್ದು, ಮತ್ತೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

ಕುರುಬ ಸಮಾಜವನ್ನು ಎಸ್​ಟಿಗೆ ಸೇರ್ಪಡೆ ಮಾಡಬೇಕು ಎನ್ನುವ ಹೋರಾಟಗಳು ಆಗಿದ್ದಾಯ್ತು, ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿ ಶಕ್ತಿ ಪ್ರದರ್ಶನ ಕೂಡ ಮಾಡಿದ್ದು ಆಯಿತು. ಈಗ ಮತ್ತೆ ಹಕ್ಕೊತ್ತಾಯ ಸಭೆಗಳು ಶುರುವಾಗಿವೆ. ಹರಿಹರ ತಾಲೂಕಿನ ಬಳಿ ಇರುವ ಬೆಳ್ಳೋಡಿ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಎಸ್​ಟಿ ಮೀಸಲಾತಿಗಾಗಿ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಲು ಮೀಸಲಾತಿ ಹಕ್ಕೊತ್ತಾಯ ಸಭೆ ನಡೆಯುತ್ತಿದೆ.

ಕುರುಬ ಸಮುದಾಯದ ಹಕ್ಕೊತ್ತಾಯ ಸಭೆಗಳು

ಬುಡಕಟ್ಟು ಸಂಶೋಧನಾ ಕೇಂದ್ರ ಅಧ್ಯಯನ ನಡೆಸಿ ವರದಿ ತಯಾರು ಮಾಡುತ್ತಿದೆ. ಈಗಾಗಲೇ 70% ರಷ್ಟು ಕೆಲಸ ಮುಗಿದಿದ್ದು, ರಾಜ್ಯ ಸರ್ಕಾರದ ಮುಂದೆ ವರದಿ ಬಂದ ನಂತರ ಕೇಂದ್ರಕ್ಕೆ ಕಳುಹಿಸುವ ಒತ್ತಾಯವನ್ನು ಮಾಡುತ್ತೇವೆ ಎಂದು ಶ್ರೀಗಳು ತಿಳಿಸಿದರು.

ಕನಕ ಗುರುಪೀಠದಲ್ಲಿ ಯುಪಿಎಸ್ಸಿ ಕೆಪಿಎಸ್ಸಿ ತರಬೇತಿ ಕೇಂದ್ರ ಪ್ರಾರಂಭೋತ್ಸವ ನಂತರ ಸಭೆಯನ್ನು ಮಾಡಿದ್ದು, ಈ ಸಭೆಯಲ್ಲಿ ರಾಜ್ಯದ ಹಾಲುಮತ ಸಮಾಜದ ಮುಖಂಡರು ಭಾಗವಹಿಸಿದ್ದರು. ಮುಂದಿನ ದಿನಗಳ ಹೋರಾಟ ಹಾಗೂ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವ ರೂಪುರೇಷೆಗಳನ್ನು ರೂಪಿಸಿದ್ದಾರೆ. ಎಸ್​ಟಿ ಸೇರ್ಪಡೆ ಮಾಡಿ 2Aಯಲ್ಲಿ ಇರುವ ಮೀಸಲಾತಿಯನ್ನು ಎಸ್​ಟಿಗೆ ವರ್ಗಾವಣೆ ಮಾಡಲಿ. ವರದಿ ಬಂದ ಕೂಡಲೇ ಕೇಂದ್ರಕ್ಕೆ ಕಳುಹಿಸಿ ಕುರುಬ ಸಮಾಜಕ್ಕೆ ಎಸ್​ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ ಎಸ್​ಟಿಗೆ ಸೇರ್ಪಡೆ ಮಾಡಬೇಕು ಎನ್ನುವ ಒತ್ತಡ ರಾಜ್ಯ ಸರ್ಕಾರದ ಮೇಲೆ ಹೆಚ್ಚಾಗಿದ್ದು, ಈಗ ಚುನಾವಣೆ ಹೊತ್ತಿನಲ್ಲಿ ಈ ಒತ್ತಾಯ ಸರ್ಕಾರಕ್ಕೆ ಮತ್ತೆ ತಲೆನೋವಾಗಿ ಪರಿಣಮಿಸಲಿದೆಯಾ ಎಂಬುದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಪಠ್ಯ ಪುಸ್ತಕ ವಿವಾದ ಸರಿಪಡಿಸದಿದ್ದಲ್ಲಿ ಹೋರಾಟ: ನಿರಂಜನಾನಂದಪುರಿ ಸ್ವಾಮೀಜಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.