ETV Bharat / city

ಕೋವಿಡ್ 3ನೇ ಅಲೆಯಲ್ಲೂ ಬ್ಲ್ಯಾಕ್ ಫಂಗಸ್?: ಡಯಾಬಿಟಿಸ್ ರೋಗಿಗಳು ಕಾಳಜಿವಹಿಸಿ

author img

By

Published : Aug 9, 2021, 7:13 AM IST

Updated : Aug 9, 2021, 9:00 AM IST

ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚಾಗಿ ಕೇಳಿ ಬಂದಿದ್ದು ಬ್ಲ್ಯಾಕ್ ಫಂಗಸ್. ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಫಂಗಸ್ ಪತ್ತೆಯಾಗಿ ಅದು ದೇಹದ ವಿವಿಧ ಅಂಗಗಳಿಗೆ ಹಾನಿ ಮಾಡಿದ್ದನ್ನು ನೋಡಿದ್ದೇವೆ. ಟೈಪ್ -1 ಡಯಾಬಿಟಿಸ್ ಹೊಂದಿರುವ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಲ್ಲೂ ಈ ಸೋಂಕು ಕಾಣಿಸಿಕೊಂಡಿದೆ ಎನ್ನುತ್ತಾರೆ ವೈದ್ಯರು.

will black fungus effect to the people in third wave of covid ?
ಕೋವಿಡ್ ಮೂರನೇ ಅಲೆಯಲ್ಲೂ ಕಾಡಲಿದ್ಯಾ ಬ್ಲ್ಯಾಕ್ ಫಂಗಸ್!

ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನ ಮೊದಲ ಹಾಗೂ ಎರಡನೇ ಅಲೆಯಿಂದ ಜನರು ತತ್ತರಿಸಿ ಹೋಗಿದ್ದರು. ಮೊದಲ ಅಲೆಯಲ್ಲಿ ಆದ ಹೊಡೆತಕ್ಕಿಂತ ಎರಡನೇ ಅಲೆ ತೀವ್ರವಾಗಿ ಬಾಧಿಸಿದ್ದು ಸುಳ್ಳಲ್ಲ.

ಕೊರೊನಾ ವೈರಸ್‌ವೊಂದೇ ಜನರಿಗೆ ಕಾಡಿದೆಯೇ ಎಂದು ಅರಿಯಲು ಹೋದರೆ ಇದಕ್ಕೆ ಅಂಟಿಕೊಂಡಂತೆ ಬ್ಲ್ಯಾಕ್ ಫಂಗಸ್ ಹಾಗೂ ಪೋಸ್ಟ್ ಕೋವಿಡ್ ನಂತಹ ಸಮಸ್ಯೆಗಳು ಎರಡನೇ ಅಲೆಯಲ್ಲಿ ಕಾಡಿತ್ತು. ಇನ್ನೇನು ಸೋಂಕು ಕಡಿಮೆ ಆಯ್ತು ಅನ್ನುವಾಗಲೇ ಇದೀಗ ಕೋವಿಡ್ ಮೂರನೇ ಅಲೆಯ ಮುನ್ಸೂಚನೆಯನ್ನು ತಜ್ಞರು ನೀಡಿದ್ದಾರೆ.‌ ಹೀಗಾಗಿ, ಮೂರನೇ ಅಲೆಯಲ್ಲೂ ಬ್ಲ್ಯಾಕ್ ಫಂಗಸ್ ಕಾಡಲಿದ್ಯಾ ಎನ್ನುವ ಭೀತಿ ಶುರುವಾಗಿದೆ‌.

ಬ್ಲ್ಯಾಕ್ ಫಂಗಸ್​ಗೆ 394 ಸೋಂಕಿತರು ಬಲಿ:

ಎರಡನೇ ಅಲೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ಬ್ಲ್ಯಾಕ್‌ ಫಂಗಸ್ ಹೆಸರು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹಾಗೂ ಡಯಾಬಿಟಿಸ್ ಇದ್ದವರಿಗೆ ಬ್ಲ್ಯಾಕ್ ಫಂಗಸ್ ಹರಡಲಿದೆ. ರಾಜ್ಯದಲ್ಲಿ ಈತನಕ 3725 ಜನರಲ್ಲಿ ಕಾಣಿಸಿಕೊಂಡಿದ್ದು, 394 ಜನರು ಮೃತರಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 1187 ಸೋಂಕು ಪತ್ತೆಯಾಗಿದ್ದು ಇದರಲ್ಲಿ 129 ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 209, ಬೌರಿಂಗ್ 416, ಕೆ.ಸಿ ಜನರಲ್ 5 ಹಾಗೂ ಇಂದಿರಾಗಾಂಧಿ 3 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ಸಚಿನ್, ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚಾಗಿ ಕೇಳಿ ಬಂದಿದ್ದು ಬ್ಲ್ಯಾಕ್ ಫಂಗಸ್. ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಫಂಗಸ್ ಪತ್ತೆಯಾಗಿ ಅದು ದೇಹದ ವಿವಿಧ ಅಂಗಗಳಿಗೆ ಹಾನಿ ಮಾಡಿದ್ದನ್ನು ನೋಡಿದ್ದೇವೆ. ಟೈಪ್ -1 ಡಯಾಬಿಟಿಸ್ ಹೊಂದಿರುವ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರತನಕ ಎಲ್ಲರಲ್ಲೂ ಈ ಸೋಂಕು ಕಾಣಿಸಿಕೊಂಡಿದೆ. ಇದೀಗ ಮೂರನೇ ಅಲೆಯ ಮುನ್ಸೂಚನೆ ಇರುವುದರಿಂದ ಮತ್ತೆ ಬ್ಲ್ಯಾಕ್ ಫಂಗಸ್ ಏರಿಕೆ ಆಗುವ ಸಾಧ್ಯತೆ ಇದೆ. ಮಣ್ಣು, ಗೊಬ್ಬರ, ನೀರು ಸೋರುವ ಜಾಗದಲ್ಲಿ, ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ, ಧೂಳು ಇರುವ ಪ್ರದೇಶದಲ್ಲಿ ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಮೂಲಕ ಸೋಂಕು ದೇಹವನ್ನ ಸೇರುವ ಸಾಧ್ಯತೆಯು ಇರಲಿದೆ.‌ ಹೀಗಾಗಿ, ಫೇಸ್ ಮಾಸ್ಕ್ ಧರಿಸುವುದಾಗಿ ಕಡ್ಡಾಯ ಮಾಡಿಕೊಳ್ಳಬೇಕು ಅಂತ ಸಲಹೆ ನೀಡಿದರು.

ಡಯಾಬಿಟಿಸ್ ಇರುವವರು ತಮ್ಮ ಸಮೀಪದ ವೈದ್ಯರನ್ನ ಸಂಪರ್ಕಿಸಿ, ಡಯಾಬಿಟಿಸ್ ಕಂಟ್ರೋಲ್​ನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಜೊತೆಗೆ ಸ್ಟೀರಾಯ್ಡ್ ಅಗತ್ಯ ಇದ್ದಾಗ ಮಾತ್ರ ಬಳಸಬೇಕು, ಸ್ವಂತ ಜ್ಞಾನದ ಮೂಲಕ ಇವುಗಳ ಬಳಕೆ ಮಾಡುವುದು ತರವಲ್ಲ ಅಂತ ಸೂಚಿಸಿದರು.‌

ಡಯಾಬಿಟಿಸ್ ರೋಗಿಗಳು ಕಾಳಜಿವಹಿಸಿ

ಜನರಿಗೆ ಬೇಕು ಬ್ಲ್ಯಾಕ್ ಫಂಗಸ್ ಜಾಗೃತಿ:

ಕೋವಿಡ್ ಮೂರನೇ ಅಲೆಯಲ್ಲಿ ಬ್ಲ್ಯಾಕ್ ಫಂಗಸ್ ತಡೆಗಟ್ಟಬೇಕು ಅಂದರೆ ಪ್ರಮುಖವಾಗಿ ರೋಗಿಯನ್ನು ಎಜುಕೇಟ್ ಮಾಡಬೇಕು. ಎರಡನೇ ಅಲೆಯಲ್ಲಿ ಡಯಾಬಿಟಿಸ್ ರೋಗಿಗಳಲ್ಲೇ ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂದ್ರ) ಹೆಚ್ಚು ಪತ್ತೆಯಾಗಿರುವುದು ಕಂಡಿದ್ದೇವೆ. ಹೀಗಾಗಿ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲು ಆದಾಗ ಅಥವಾ ಡಿಸ್ಚಾರ್ಜ್ ಸಮಯದಲ್ಲಿಯಾದರೂ ಎಂಡೋಸ್ಕೋಪಿ ಮಾಡುವುದು ಒಳ್ಳೆಯದು ಅಂತ ಫೋರ್ಟಿಸ್ ಆಸ್ಪತ್ರೆಯ ಇಎನ್ ಟಿ ತಜ್ಞರಾಗಿರುವ ಡಾ‌. ಸುಶೀನ್ ದತ್ ಮಾಹಿತಿ ನೀಡಿದರು.

ಕೋವಿಡ್ ಸೋಂಕು ತಗುಲಿದಾಗ ಯಾವುದೇ ಲಕ್ಷಣಗಳು ಕಂಡಾಗ ಅದನ್ನ ನಿರ್ಲಕ್ಷ್ಯ ಮಾಡಬಾರದು. ತಲೆನೋವು, ಮುಖದ ಭಾಗದಲ್ಲಿ ಸ್ಪರ್ಶ ಇಲ್ಲದೇ ಇರುವುದು ಕಪ್ಪು ಶಿಲೀಂದ್ರದ ಲಕ್ಷಣವಾಗಿದೆ. ಹೀಗಾಗಿ ಫೋಟಿಸ್ ಆಸ್ಪತ್ರೆಯಲ್ಲಿ ಗುಣಮುಖರಾಗಿ ಹೊರಡುವ ವ್ಯಕ್ತಿಗಳಿಗೆ ಒಂದು ಎಂಡೋಸ್ಕೋಪಿ ಮಾಡುತ್ತಿದ್ದೇವೆ.. ಒಂದು ವೇಳೆ ಸಂಶಯ ಶಮನವಾಗದೇ ಇದ್ದರೆ ಮುಂದಿನ ಹಂತದಲ್ಲಿ ಎಂಆರ್‌ಐ ಸ್ಕ್ಯಾನ್ ಕೂಡ ಮಾಡುತ್ತಿದ್ದೇವೆ ಅಂತ ತಿಳಿಸಿದರು.

ಅನಗತ್ಯವಾಗಿ ಸ್ಟೀರಾಯ್ಡ್ ಬಳಕೆ ಬೇಡ:

ಜನರು ಆತಂಕಕ್ಕೆ ಒಳಗಾಗಿ ಅನಗತ್ಯವಾಗಿ ಸ್ಟೀರಾಯ್ಡ್ ಔಷಧಿ ಬಳಕೆ ಮಾಡುತ್ತಿದ್ದಾರೆ. ಇತ್ತ ಹೆಚ್ಚಿನ ಒತ್ತಡಕ್ಕೆ ಒಳಗಾಗಿ ‌ಶ್ವಾಸಕೋಶಕ್ಕೆ ಹಾನಿಯಾಗದೇ ಇರಲಿ ಎಂದು ಸ್ಟೀರಾಯ್ಡ್ ನೀಡುತ್ತಿದ್ದಾರೆ. ಕೆಲವೊಮ್ಮೆ ಕೋವಿಡ್ ಕೇಸ್ ನಲ್ಲಿ ಶ್ವಾಸಕೋಶ ಸೋಂಕು ಜಾಸ್ತಿ ಆದರೆ ಸ್ಟಿರಾಯ್ಡ್ ಔಷಧ ಕೊಡಲೇ ಬೇಕಾಗುತ್ತೆ. ಸ್ಟೀರಾಯ್ಡ್ ಬಳಕೆ ಮಾಡುವಾಗ ವೈದ್ಯರು ಬಹಳ ಎಚ್ಚರಿಕೆಯಿಂದ ಇರಬೇಕು ಅಂತ ಮಾಹಿತಿ ನೀಡಿದರು.

ಟೈಪ್-1 ಡಯಾಬಿಟಿಸ್ ಮಕ್ಕಳ ಪೋಷಕರು ಮೊದಲು ವ್ಯಾಕ್ಸಿನೇಷನ್‌ ಆಗಬೇಕು:

ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹೆಚ್ಚು ಬಾದಿಸುವ ಸಾಧ್ಯತೆ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಟೈಪ್-1 ಡಯಾಬಿಟಿಸ್ ಇರುವ ಮಕ್ಕಳಿಗು ಎರಡನೇ ಅಲೆಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿತ್ತು. ಹೀಗಾಗಿ, ಈ ಕುರಿತು ಮಾಹಿತಿ ನೀಡಿರುವ ಡಾ‌. ಸುಶೀನ್ ದತ್ , ಟೈಪ್-1 ಡಯಾಬಿಟಿಸ್ ಮಕ್ಕಳಿಗೆ ಮೊದಲಿಗೆ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕು.‌ ಯಾಕೆಂದರೆ ಸೋಂಕು ಬಂದ್ಮೇಲೆ ಚಿಕಿತ್ಸೆ ನೀಡುವುದು ಕಷ್ಟವಾಗಬಹುದು. ಕೋವಿಡ್ ನಿಮೋನಿಯಾ ಆಗದಂತೆ ತಡೆಯಲು ಸ್ಟಿರಾಯ್ಡ್ ಕೊಡಬೇಕಾಗುತ್ತೆ. ಇದರಿಂದ ಬ್ಲ್ಯಾಕ್‌ ಫಂಗಸ್ ಬರುವ ಸಾಧ್ಯತೆ ಇದೆ.‌ ಹೀಗಾಗಿ, ಪೋಷಕರು ಮೊದಲು ಕೋವಿಡ್ ವ್ಯಾಕ್ಸಿನೇಷನ್‌ ಪಡೆದುಕೊಳ್ಳಬೇಕು. ತೀರಾ ಅಗತ್ಯ ಇದ್ದರಷ್ಟೇ ಈ ಪೋಷಕರು ಹೊರಗೆ ಓಡಾಡಬೇಕು ಎಂದು ತಿಳಿಸಿದ್ದಾರೆ.

Last Updated : Aug 9, 2021, 9:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.