ETV Bharat / city

ಪಂಚಾಯತ್‌ ಕಾರ್ಯದರ್ಶಿಗಳು, ಪಿಡಿಒ ಹುದ್ದೆಗಳ ನೇಮಕ ಶೀಘ್ರ.. ಸಚಿವ ಕೆ ಎಸ್‌ ಈಶ್ವರಪ್ಪ

author img

By

Published : Dec 17, 2021, 2:23 PM IST

ಪಿಡಿಒಗಳು ಅವರ ಕಚೇರಿಯಲ್ಲಿರಬೇಕು ಇಲ್ಲವೇ ಕರ್ತವ್ಯದ ಮೇಲೆ ಹೊರಗೆ ಹೋಗಿರಬೇಕು. ಪಿಡಿಒಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಪಂಚಾಯತ್‌ಗಳ ಅಧ್ಯಕ್ಷರಿಗೂ ಸೂಚನೆ ನೀಡಲಾಗಿದೆ..

ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ

ಬೆಂಗಳೂರು : ರಾಜ್ಯದಲ್ಲಿ ಆಯಾ ಗ್ರಾಮ ಪಂಚಾಯತ್​ಗಳಲ್ಲೇ ಪಿಡಿಒಗಳು ವಾಸ ಮಾಡಲು ಪೂರಕವಾಗಿ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ಸರ್ಕಾರದಿಂದಲೇ ಕ್ವಾಟ್ರಸ್ ಕಟ್ಟಿಸಿಕೊಡುವ ಬಗ್ಗೆ ಸರ್ಕಾರ‌ ಚಿಂತನೆ ನಡೆಸಲಿದೆ‌ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್‌ ಈಶ್ವರಪ್ಪ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ತಳವಾರ್ ಸಾಬಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅನೇಕ ಪಿಡಿಒಗಳು ಅವರ ಪಂಚಾಯತ್​ನಲ್ಲಿ ಇರಲ್ಲ ಎನ್ನುವ ದೂರುಗಳು ಬರುತ್ತಿವೆ. ಈಗಾಗಲೇ ತುಂಬಾ ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ.

ಪಿಡಿಒಗಳು ಅವರ ಕಚೇರಿಯಲ್ಲಿರಬೇಕು ಇಲ್ಲವೇ ಕರ್ತವ್ಯದ ಮೇಲೆ ಹೊರಗೆ ಹೋಗಿರಬೇಕು. ಪಿಡಿಒಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಪಂಚಾಯತ್‌ಗಳ ಅಧ್ಯಕ್ಷರಿಗೂ ಸೂಚನೆ ನೀಡಲಾಗಿದೆ.

ಪಂಚಾಯತ್​ನಲ್ಲೇ ಪಿಡಿಒಗಳನ್ನು ಇರಿಸಲು ಸೂಚಿಸಲಾಗಿದೆ. ಎಲ್ಲಿ ಪಿಡಿಒಗಳು ಸಿಗುತ್ತಿಲ್ಲ ಎಂದು ದೂರು ಬರುತ್ತವೋ ಅಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿರುವ ಸಚಿವ ಕೆ.ಎಸ್‌.ಈಶ್ವರಪ್ಪ..

ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಪಿಡಿಒಗಳಿಗೆ ಹಳ್ಳಿಗಳಲ್ಲೇ ಕ್ವಾಟ್ರಸ್ ಕಟ್ಟಿಸಿಕೊಡಿ ಎಂದು ಸಲಹೆ ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಈಶ್ವರಪ್ಪ, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ.

ನಿಮ್ಮ ಸಲಹೆ ಗಮನಿಸಿ ನಮ್ಮ ಇಲಾಖೆಯಿಂದ‌ ಹಣ ಜೋಡಿಸಲು ಸಾಧ್ಯವಾ ಎಂದು ಪರಿಶೀಲಿಸಲಾಗುತ್ತದೆ ಅಥವಾ ಸಿಎಂ ಜೊತೆ ಮಾತುಕತೆ ನಡೆಸಿ ಪಿಡಿಒಗಳಿಗೆ ಆಯಾ ಗ್ರಾಮ ಪಂಚಾಯತ್‌ನಲ್ಲೇ ಕ್ವಾಟ್ರಸ್ ಕಟ್ಟಿಸಿಕೊಡಲು ಪ್ರಯತ್ನ ನಡೆಸಲಾಗುತ್ತದೆ ಎಂದರು.

ಜಲ ಜೀವನ್ ಮಿಷನ್​ : 2024ರ ವೇಳೆಗೆ ರಾಜ್ಯದ ಎಲ್ಲಾ ಮನೆಗಳಿಗೂ ಮನೆ ಮನೆಗೆ ಗಂಗೆ ಯೋಜನೆ ಅಡಿಯಲ್ಲಿ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ನದಿ ನೀರಿನ ಮೂಲ ಸಿಗುವ ಕಡೆ ಮೊದಲ ಆದ್ಯತೆ ನೀಡಲಾಗಿದೆ. ಸಿಹಿ ನೀರು‌ ಸಿಗದ ಹಳ್ಳಿಗಳಲ್ಲಿ ನೀರು ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಮನೆ ಮನೆಗೆ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. 2024ರ ವೇಳೆಗೆ ಎಲ್ಲಾ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ. ಈಗ ಪ್ರತಿ ದಿನ‌ 10 ಸಾವಿರ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ.

ಜಲ ಜೀವನ್ ಮಿಷನ್ ಅಡಿ ಎಲ್ಲಿ ಸುಸ್ಥಿರ ನೀರು ಸಿಗಲಿದೆಯೋ ಅಲ್ಲಿ ಮಾಡಲಾಗುತ್ತದೆ, ಸುಸ್ಥಿರ ನೀರು ಸಿಗದ ಕಡೆ ಇದನ್ನು ಮಾಡಲು ಸಾಧ್ಯವಿಲ್ಲ. ಯೋಜನೆ ಅನುಷ್ಠಾನದಲ್ಲಿ ಇಡೀ ದೇಶದಲ್ಲಿ ನಾವು ಮೊದಲ‌ ಸ್ಥಾನದಲ್ಲಿದ್ದೇವೆ.

ಮನೆ ಮನೆಗೆ ಗಂಗೆ ಯೋಜನೆಯಲ್ಲಿ 2024ರ ವೇಳೆಗೆ ರಾಜ್ಯದ 93 ಲಕ್ಷ ಮನೆಗೂ ನೀರು ಕೊಡಲಿದ್ದೇವೆ. ನದಿ ನೀರು ಇರೋ ಕಡೆ ಆದ್ಯತೆ ನೀಡಲಾಗಿದೆ. ಸಿಹಿ ನೀರು ಸಿಗದ ಕಡೆ ನೀರು ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತದೆ, ಜಗಳೂರಿನ‌ಲ್ಲಿ ನೀರಿನ ಗುಣಮಟ್ಟದ ಸಮಸ್ಯೆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪಿಡಿಒಗಳ ಹುದ್ದೆ ಭರ್ತಿ : ಗ್ರಾಮ ಪಂಚಾಯತ್​ನಲ್ಲಿ ಖಾಲಿ ಇರುವ ಪಿಡಿಒ ಮತ್ತು ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು. ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 727 ಪಿಡಿಒ, 1591 ಕಾರ್ಯದರ್ಶಿ ಗ್ರೇಡ್-1, 343 ಕಾರ್ಯದರ್ಶಿ ಗ್ರೇಡ್-2 ಹುದ್ದೆ ಖಾಲಿ ಇವೆ.

ಪಿಡಿಒಗಳು ಮತ್ತು ಸಂಬಂಧಪಟ್ಟ ವೃಂದದ ನೇಮಕಾತಿ ಅಧಿಕಾರ ಸಿಇಒಗಳಿಗೆ ಕೊಡಲಾಗಿದೆ. ನೇರ ನೇಮಕಾತಿಯನ್ನ ಕೆಪಿಎಸ್​ಸಿ ಮೂಲಕ ಮಾಡಲಾಗುತ್ತದೆ. ಕೋವಿಡ್ ಕಾರಣದಿಂದ ನೇಮಕಾತಿ ಆಗಿಲ್ಲ,‌ ಆದಷ್ಟು ಬೇಗ ಭರ್ತಿಗೆ ಕ್ರಮವಹಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯಿಂದ ಅನುಮತಿ ಪಡೆಯುತ್ತೇವೆ ಎಂದರು.

ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ : ಆದಷ್ಟು ಬೇಗ ರಾಜ್ಯದಲ್ಲಿ ಕ್ರೀಡಾ ವಿಶ್ಚವಿದ್ಯಾಲಯ ಸ್ಥಾಪನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದರು. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದಸ್ಯರು ಕ್ರೀಡಾ ವಿಶ್ವವಿದ್ಯಾಲಯ ಆಗಬೇಕೆಂದು ಕೇಳುತ್ತಿದ್ದಾರೆ.

ಕರ್ನಾಟಕದಲ್ಲಿ ಒಂದು ಕ್ರೀಡಾ ವಿವಿ ಆಗಬೇಕು ಎನ್ನುವ ಆಶಯ ನಮ್ಮದೂ ಕೂಡ ಆಗಿದೆ. ಇದಕ್ಕಾಗಿ ಕೇಂದ್ರದ ಅನುಮತಿ, ಜಮೀನು ಗುರುತಿಸುವ ಕೆಲಸ ಸೇರಿದಂತೆ ಹಲವು ಅನುಮತಿ ಪಡೆಯುವ ಕೆಲಸ ಆಗಬೇಕಿದೆ. ಶೀಘ್ರದಲ್ಲಿ ಕರ್ನಾಟದಲ್ಲಿ ಕ್ರೀಡಾ ವಿವಿ ಬರುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ನಮ್ಮ ಮೊದಲ ಆದ್ಯತೆ ಕೊಡಗಿನಲ್ಲಿಯೇ ಕ್ರೀಡಾ ವಿಶ್ವವಿದ್ಯಾಲಯ ಆಗಬೇಕು ಎನ್ನುವುದಾಗಿದೆ. ಆದರೆ, ಕೇಂದ್ರ ಸರ್ಕಾರ ಅದಕ್ಕೆ ಅನುಮತಿ ಕೊಡಬೇಕು, ಜಾಗ ಅಂತಿಮಕ್ಕೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಅರಸು ಸಂಶೋಧನಾ ಕೇಂದ್ರ ಮುಚ್ಚಲ್ಲ : ರಾಜ್ಯದಲ್ಲಿರುವ ದೇವರಾಜು ಅರಸು ಸಂಶೋಧನಾ ಕೇಂದ್ರವನ್ನು ಮುಚ್ಚುವುದಿಲ್ಲ. ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಬಲಪಡಿಸಲಾಗುತ್ತದೆ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ ಪೂಜಾರಿ, ದೇವರಾಜ ಅರಸು ಸಂಶೋಧನಾ ಕೇಂದ್ರವನ್ನು ಮುಚ್ಚುವ ಪ್ರಸ್ತಾಪ ಇಲ್ಲ.

ಅದನ್ನು ಮುಚ್ಚಲು ಚಿಂತನೆ ನಡೆಸಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಉತ್ತಮವಾಗಿ ಕೆಲಸ ಮಾಡುತ್ತಿರುವ ಅರಸು ಸಂಶೋಧನಾ ಕೇಂದ್ರವನ್ನು ಮತ್ತಷ್ಟು ಸಬಲೀಕರಣ ಮಾಡಲಾಗುತ್ತದೆ ಎಂದರು.

ಅರಸು ಅಭಿವೃದ್ಧಿ ನಿಗಮದಿಂದ ಬಡವರ ಕಲ್ಯಾಣ ಯೋಜನೆಗಳಿಗೆ ಹಣ ಕೊಡಲಾಗುತ್ತಿದೆ. ನಾನು ಇಂದು ಉಳುಮೆ ಮಾಡುತ್ತಿದ್ದರೆ ಅದಕ್ಕೆ ಭೂ ಸುಧಾರಣಾ ಕಾಯ್ದೆ ಕಾರಣ ಎನ್ನುವುದು ನೆನಪಿದೆ. ಹಾಗಾಗಿ, ಅರಸು ಕೇಂದ್ರ ಸಬಲೀಕರಣ ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.