ETV Bharat / city

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಾಗಿ ಸಿಕ್ಕಿದ್ದು ಕೇವಲ 14 ಸ್ಥಾನ ಮಾತ್ರ : ವಿ.ಎಸ್​.​ ಉಗ್ರಪ್ಪ

author img

By

Published : Sep 7, 2021, 7:44 PM IST

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿದರೂ ಕಾಂಗ್ರೆಸ್​ ಪಕ್ಷಕ್ಕಿಂತ ಕೇವಲ 14 ಸ್ಥಾನ ಹೆಚ್ಚು ಪಡೆದಿದೆ. ಕೋವಿಡ್​ ಕಾರಣ ನಾವು ಹೆಚ್ಚು ಪ್ರಚಾರ ಮಾಡಿರಲಿಲ್ಲ, ಅದರೂ 100 ಸ್ಥಾನದಲ್ಲಿ ನಾವು ಗೆದ್ದಿದ್ದೇವೆ. ಬಿಜೆಪಿ ಏನೆಲ್ಲಾ ಸರ್ಕಸ್​ ಮಾಡಿದ್ರೂ ಅವರಿಗೆ ನಿರೀಕ್ಷೆಗೆ ತಕ್ಕಂತೆ ಜನರ ಬೆಂಬಲ ಸಿಕ್ಕಿಲ್ಲ..

vs-ugrappa-statement-on-corporation-election-results
ಉಗ್ರಪ್ಪ

ಬೆಂಗಳೂರು : ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 269 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಅದರಲ್ಲಿ ನಮಗೂ ಹಾಗೂ ಬಿಜೆಪಿಗೂ ಇರುವ ಅಂತರ ಕೇವಲ 14 ಸ್ಥಾನ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ತಿಳಿಸಿದ್ದಾರೆ.

ನಗರದ ಕುವೆಂಪು ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಡಳಿತ ಪಕ್ಷ ಬಿಜೆಪಿಯ ಹಣ, ಅಧಿಕಾರ ದುರ್ಬಳಕೆ ಮಾಡಿದ ಹೊರತಾಗಿಯೂ 114 ಸ್ಥಾನ ಸಿಕ್ಕಿದೆ. ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಕೋವಿಡ್ ಹಿನ್ನೆಲೆ ಸರಿಯಾಗಿ ಪ್ರಚಾರ ಮಾಡಲಾಗದಿದ್ದರೂ 100 ಸ್ಥಾನದಲ್ಲಿ ಗೆದ್ದಿದೆ.

ಏಪ್ರಿಲ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು. ಸರ್ಕಾರ ಏನೆಲ್ಲ ಪ್ರಯತ್ನ ಮಾಡಿದರೂ ಅವರ ನಿರೀಕ್ಷೆಗೆ ತಕ್ಕಂತೆ ಜನರ ಬೆಂಬಲ ಸಿಕ್ಕಿಲ್ಲ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ ಎಂದರು.

ಬಹಿರಂಗ ಚರ್ಚೆ ಮಾಡಲು ನಾವು ಸಿದ್ಧ : ನಳೀನ್ ಕುಮಾರ್ ಕಟೀಲ್, ಸಿ ಟಿ ರವಿ ಸೇರಿದಂತೆ ಬಿಜೆಪಿ ನಾಯಕರು ಬೆಲೆ ಏರಿಕೆ ವಿಚಾರವಾಗಿ ಜನರನ್ನು ದಾರಿ ತಪ್ಪಿಸುವ ಸಂಚು ರೂಪಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಗೆ ಕಾಂಗ್ರೆಸ್ ನೀಡಿದ ತೈಲ ಬಾಂಡ್​ಗಳೇ ಕಾರಣ ಎಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಬಹಿರಂಗ ಚರ್ಚೆ ಮಾಡಲು ಸಿದ್ಧವಿದ್ದೇವೆ ಎಂದು ಸವಾಲು ಹಾಕಿದರು.

ಬಿಜೆಪಿ ಇಂಧನ ತೆರಿಗೆ ಲೂಟಿ ಮಾಡಿದೆ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾರೆಲ್ ಕಚ್ಚಾತೈಲ ಬೆಲೆ 120-130 ಡಾಲರ್ ಇದ್ದಾಗ ಜನರಿಗೆ ಹೊರೆ ಹೆಚ್ಚಾಗಬಾರದು ಎಂದು ಸಬ್ಸಿಡಿ ಮೂಲಕ ಹೊರೆ ಇಳಿಸಲು ಕಾಂಗ್ರೆಸ್ 1.34 ಲಕ್ಷ ಕೋಟಿಯಷ್ಟು ತೈಲ ಬಾಂಡ್ ನೀಡಿದ್ದು ನಿಜ. ನಾವು ಜನರ ಒತ್ತಡ ಕಡಿಮೆ ಮಾಡಲು ಇದನ್ನು ಜಾರಿಗೆ ತಂದಿದ್ದೆವೆಯೇ ಹೊರತು ಕಿಕ್ ಬ್ಯಾಕ್ ಪಡೆಯಲು ಇದನ್ನು ನೀಡಿಲ್ಲ.

ಈ ವರ್ಷ 10 ಸಾವಿರ ಕೋಟಿಯಷ್ಟು ಹಣವನ್ನು ಈ ತೈಲ ಬಾಂಡ್‌ಗೆ ಪಾವತಿ ಮಾಡಬೇಕಾಗಿದೆ. ಆದರೆ, ಈ ವರ್ಷ ಏಪ್ರಿಲ್-ಜುಲೈ ಅವಧಿಯಲ್ಲಿ ಕೇಂದ್ರ ಸರ್ಕಾರ ತೆರಿಗೆ ಮೂಲಕ 32,492 ಕೋಟಿಯಷ್ಟು ಹಣ ಸಂಗ್ರಹಿಸಿದೆ. ಬಿಜೆಪಿ ಸರ್ಕಾರ ಕಳೆದ 7 ವರ್ಷಗಳಲ್ಲಿ ಈ ಇಂಧನಗಳ ಮೇಲಿನ ತೆರಿಗೆಯಿಂದ 23 ಲಕ್ಷ ಕೋಟಿಯಷ್ಟು ಹಣ ಲೂಟಿ ಮಾಡಿದ್ದಾರೆ ಎಂದರು.

ಅಚ್ಛೇ ದಿನ್ ಇದೇನಾ? : ಕಷ್ಟದ ಸಮಯದಲ್ಲಿ ನಾವು ಬಾಂಡ್ ಮೂಲಕ ಹಣ ಸಂಗ್ರಹಿಸಿ ಜನರ ಮೇಲೆ ಹೊರೆ ಇಳಿಸಲು ಪ್ರಯತ್ನಿಸಿದರೆ, ಬಿಜೆಪಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಅದರ ಪ್ರಯೋಜನ ಜನರಿಗೆ ಸಿಗದಂತೆ ಮಾಡಿದೆ. ಆ ಮೂಲಕ ಪೆಟ್ರೋಲ್​​ ದರ ₹105, ಡೀಸೆಲ್ ದರ ₹94 ಹಾಗೂ ಅಡುಗೆ ಅನಿಲ 887 ರೂ. ಆಗಿದೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವ್ಯತ್ಯಾಸ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಅಚ್ಛೇ ದಿನ್ ಇದೇನಾ? ಜನರ ಬದುಕು ದುರ್ಬರ ಮಾಡುವುದೇ ಬಿಜೆಪಿಯ ಅಚ್ಛೇ ದಿನ್. ದೇಶದ ಜನರ ಭಾವನೆಯಲ್ಲಿ ಪ್ರಧಾನಿ ಇಮೇಜ್ ಕಡಿಮೆಯಾಗಿದೆ ಎಂದರು.

ನರೇಂದ್ರ ಮೋದಿ ದುರಾಡಳಿತ : ಜಾಗತಿಕ ಸಂಸ್ಥೆಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದ ಭಾರತವನ್ನು ಕೈಬಿಟ್ಟಿವೆ. ದೇಶದ ಜಿಡಿಪಿ ಋಣಾತ್ಮಕವಾಗಿ ಸಾಗಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದು, ಇದು ದೇಶಕ್ಕೆ ಆಗಿರುವ ಅಪಮಾನ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತವೇ ಕಾರಣ. ಮೋದಿ ಅವರು ಬೆಲೆ ಏರಿಕೆ ಮೂಲಕ ಜನರ ಬದುಕಿನ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ನಾವು ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಬೆಲೆ ನಿಯಂತ್ರಿಸುತ್ತೇವೆ ಎಂದಿದ್ದರು. ಆದರೆ, ಅದ್ಯಾವುದೂ ಆಗಲಿಲ್ಲ ಎಂದರು.

ಕೇಂದ್ರದ ಜಿಎಸ್​ಟಿ ಮೋಸ : ಇನ್ನು, ರಾಜ್ಯದಿಂದ ಸಂಗ್ರಹಿಸಲಾಗುವ ಜಿಎಸ್ಟಿಯಲ್ಲಿ 2018-19ರಲ್ಲಿ 10,754 ಕೋಟಿಯಷ್ಟು, 2029-20ರಲ್ಲಿ 16,620 ಕೋಟಿಯಷ್ಟು, 2020-21ರಲ್ಲಿ 12 ಸಾವಿರ ಕೋಟಿ, 2021-22ರಲ್ಲಿ 8,542.17 ಕೋಟಿಯಷ್ಟು ಜಿಎಸ್ಟಿ ಪರಿಹಾರ ಬರಬೇಕು. ಏಪ್ರಿಲ್-ಮೇ ತಿಂಗಳಲ್ಲೇ 5500 ಕೋಟಿಯಷ್ಟು ಪರಿಹಾರ ಬರಬೇಕು. ಆದರೆ, ಕೇಂದ್ರ ಸರ್ಕಾರ ಕಳೆದ ಮಾರ್ಚ್‌ 27ರಂದು ನೀಡಿರೋದು 2970 ಕೋಟಿ ಮಾತ್ರ. ಇನ್ನು 11 ಸಾವಿರ ಕೋಟಿಗೂ ಹೆಚ್ಚು ಹಣ ನೀಡಬೇಕಿದೆ ಎಂದು ತಿಳಿಸಿದರು.

ನಯಾಪೈಸೆ ಅನುದಾನ ನೀಡಿಲ್ಲ : ಕೇಂದ್ರ ಸರ್ಕಾರದ ಸ್ವಚ್ಛ ಭಾರತ, ಪಿಎಂಜಿಎಸ್, ಪಿಎಂ ಆವಾಸ್ ಯೋಜನೆ, ರಾಷ್ಟ್ರೀಯ ಸುಸ್ಥಿರ ಕೃಷಿ, ಪ್ರಧಾನಮಂತ್ರಿ ಕೃಷಿ ಸಂಚಯ್ ಯೋಜನೆ, ವಿದ್ಯಾರ್ಥಿ ವೇತನ ಸೇರಿದಂತೆ ಪ್ರಮುಖ ಯೋಜನಗೆಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಯಾಪೈಸೆ ಅನುದಾನ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ. ಕೇಂದ್ರದ ಪ್ರಮುಖ ವಲಯಗಳಾದ ಗ್ರಾಮೀಣಾಭಿವೃದ್ಧಿ, ವಸತಿ, ಕೃಷಿ ಸೇರಿದಂತೆ ಇತರೆ ವಲಯಗಳಿಗೆ 3,890 ಕೋಟಿ ರೂ. ಅನುದಾನ ಬೇಕಾಗಿದೆ. ಅದರಲ್ಲಿ ಕೇಂದ್ರದ ಪಾಲು 2,410 ಕೋಟಿ ರೂ., ರಾಜ್ಯದ ಪಾಲು 1,479 ಕೋಟಿ ರೂ. ಇದೆ. ಇದರಲ್ಲಿ ಕೇಂದ್ರದಿಂದ ಒಂದು ಪೈಸೆಯೂ ಕೇಂದ್ರ ಸರ್ಕಾರದಿಂದ ನೀಡುತ್ತಿಲ್ಲ ಎಂದರು.

ಅತ್ಯಂತ ಭ್ರಷ್ಟ ಪ್ರಧಾನಿ ಅಂದ್ರೆ ಮೋದಿ : ಪಿಎಂಜಿಎಸ್​ವೈ ಒಂದೇ ಯೋಜನೆಯಲ್ಲಿ 900 ಕೋಟಿ ರೂ., ಸ್ವಚ್ಛ ಭಾರತ ಯೋಜನೆಯಲ್ಲಿ 290 ಕೋಟಿ ರೂ., ಅವಾಸ್ ಯೋಜನೆಯಲ್ಲಿ 300 ಕೋಟಿ ರೂ., ಸುಸ್ಥಿರ ಯೋಜನೆಗೆ 117 ಕೋಟಿ ರೂ., ಆಹಾರ ಭದ್ರತೆಗೆ 98.3 ಕೋಟಿ ರೂ., ಕೃಷಿ ಸಂಚಯ್ ಯೋಜನೆಗೆ 270 ಕೋಟಿ ರೂ. ನೀಡಬೇಕಿದೆ. ಕೊಟ್ಟಿಲ್ಲ ಯಾಕೆ? ರಾಜ್ಯದ ಜನರಿಗೆ ತೆರಿಗೆ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದಾರೆ.

ಮತ್ತೊಂದೆಡೆ ನಮ್ಮ ಜಿಎಸ್ ಟಿ ಪಾಲು ನೀಡುತ್ತಿಲ್ಲ. ಈ ಪ್ರಧಾನಿಯನ್ನು ಏನೆಂದು ಕರೆಯಬೇಕು? ಈ ದೇಶ ಕಂಡ ಅತ್ಯಂತ ಸುಳ್ಳುಗಾರ, ಜನರ ದಾರಿ ತಪ್ಪಿಸುವ ಪ್ರಧಾನಿ ಎಂದರೆ ಅದು ಮೋದಿ. ಈ ದೇಶ ಕಂಡ ಅತ್ಯಂತ ಭ್ರಷ್ಟ ಪ್ರಧಾನಿ ಮೋದಿ. ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾರ ಬೋಫೋರ್ಸ್ ನಲ್ಲಿ 63 ಕೋಟಿ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ 2ಜಿ, ಕಲ್ಲಿದ್ದಲಿನಲ್ಲಿ 1.74 ಲಕ್ಷ ಕೋಟಿ ಹಗರಣ ಎಂದು ಆರೋಪ ಮಾಡಿದ್ದರು. ನಾವು ತಪ್ಪು ಮಾಡಿಲ್ಲ ಎಂಬ ವಿಶ್ವಾಸದಿಂದ ತನಿಖೆಗೆ ಆದೇಶ ಮಾಡಿದ್ದೆವು. ಇವರು ಅಧಿಕಾರಕ್ಕೆ ಬಂದು 7 ವರ್ಷವಾಗಿದೆ ನಾವು ಹಗರಣ ಮಾಡಿದ್ದರೆ ನಮ್ಮನ್ನು ಜೈಲಿಗೆ ಹಾಕಬೇಕಿತ್ತು. ಯಾಕೆ ಹಾಕಿಲ್ಲ ಎಂದರೆ ಭ್ರಷ್ಟಾಚಾರ ನಡೆದಿಲ್ಲ ಎಂದು ಅಭಿಪ್ರಾಯಪಟ್ಟರು.

ದಮ್ಮು, ತಾಕತ್ತು ಇದ್ದರೆ ಚರ್ಚೆಗೆ ಬನ್ನಿ : ಈ ಸರ್ಕಾರ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 39,600 ಕೋಟಿ ಕಿಕ್ ಬ್ಯಾಗ್ ಪಡೆದಿದೆ. ವಾಜಪೇಯಿ ಅವರು 2001ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ದೇಶಕ್ಕೆ 126 ಫೈಟರ್ ಜೆಟ್ ಬೇಕು ಎಂದು ಸಂಪುಟದಲ್ಲಿ ನಿರ್ಧಾರ ಕೈಗೊಂಡಿದ್ದರು. ನಂತರ 2008ರಲ್ಲಿ ಅದು ಟೆಂಡರ್ ಕರೆದು 2011ರಲ್ಲಿ ಅಂತಿಮವಾಗುತ್ತದೆ. ಆಗ ಒಂದು ಯುದ್ಧ ವಿಮಾನಕ್ಕೆ 570 ಕೋಟಿ ರೂ. ದರ ನಿಗದಿ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ 2015ರಲ್ಲಿ ಕೇವಲ 36 ಯುದ್ಧ ವಿಮಾನವನ್ನು ಪ್ರತಿ ವಿಮಾನಕ್ಕೆ 1670 ಕೋಟಿ ರೂ.ಗೆ ದರ ಏರಿಸುತ್ತಾರೆ. ಇದರ ನಿರ್ಮಾಣದ ಜವಾಬ್ದಾರಿಯನ್ನು 11 ದಿನಗಳ ಹಿಂದಷ್ಟೇ ಹುಟ್ಟುಕೊಂಡಿದ್ದ ಅನಿಲ್ ಅಂಬಾನಿ ಅವರ ಕಂಪನಿಗೆ ನೀಡುತ್ತಾರೆ.

ಒಂದು ವಿಮಾನಕ್ಕೆ 1100 ಕೋಟಿ ಎಂಬಂತೆ 36 ಯುದ್ಧ ವಿಮಾನಕ್ಕೆ 39,600 ಕೋಟಿ. ಯುಪಿಎ ಇದ್ದಾಗ ಪೆಟ್ರೋಲ್ ಮೇಲೆ 9 ರೂಪಾಯಿ ಡೀಸೆಲ್ ಮೇಲೆ 3 ರೂಪಾಯಿ ತೆರಿಗೆ ಹಾಕಲಾಗುತ್ತಿತ್ತು. ಆದರೆ ಇಂದು 32.90 ಹಾಗೂ 31.80 ರೂಪಾಯಿ ತೆರಿಗೆ ಹಾಕಲಾಗಿದೆ. ಮಾತೆತ್ತಿದರೆ ಬಾಂಡ್ ಸಾಲ ತೀರಿಸಬೇಕು ಎನ್ನುವ ಬಿಜೆಪಿಗರಿಗೆ ನಾಚಿಕೆಯಾಗಬೇಕು. ಅವರು ರಾಜಕಾರಣ ಮಾಡಲಿ, ಆದರೆ ಸುಳ್ಳು ಹೇಳುವುದನ್ನು ನಿಲ್ಲಿಸಲಿ. ಅವರಿಗೆ ದಮ್ಮು, ತಾಕತ್ತು ಇದ್ದರೆ ಈ ವಿಚಾರವಾಗಿ ಸಾರ್ವಜನಿಕ ಚರ್ಚೆಗೆ ಬರಲಿ. ಬಿಜೆಪಿ ಅಸಮರ್ಥ ಆಡಳಿತ, ಜನವಿರೋಧಿ ಪ್ರವೃತ್ತಿಯಿಂದ ಇಂದು ಬೆಲೆ ಏರಿಕೆ ಆಗಿದೆ. ಇದೇ ಕಾರಣಕ್ಕೆ ಪ್ರಧಾನಿ ಅವರ ಜನಪ್ರಿಯತೆ ಶೇ.64ರಿಂದ ಶೇ.24ಕ್ಕೆ ಕುಸಿದಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.