ETV Bharat / city

ಐದು ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಪೂರ್ಣ: ಡಿಸಿಎಂ ಕಾರಜೋಳ

author img

By

Published : Mar 18, 2021, 3:54 PM IST

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಕಾಮಗಾರಿ ಆರಂಭದಲ್ಲಿ 735 ಕೋಟಿ‌ ಹಣವನ್ನು ಬಿಜೆಪಿ ಸರ್ಕಾರ ಖರ್ಚು ಮಾಡಿತ್ತು. ನಂತರ ಬಂದ ಸಿದ್ದರಾಮಯ್ಯ ಸರ್ಕಾರ 7600 ಕೋಟಿ ರೂ. ವೆಚ್ಚ, ಕುಮಾರಸ್ವಾಮಿ ಸರ್ಕಾರ 1346 ಕೋಟಿ ರೂ. ಖರ್ಚು ಮಾಡಿದ್ದು, ಈಗ ಯಡಿಯೂರಪ್ಪ ಸರ್ಕಾರ 3000 ಕೋಟಿ ಖರ್ಚು ಮಾಡಿದೆ. ಈ ಬಾರಿಯ ಬಜೆಟ್​ನಲ್ಲಿ 5600 ಕೋಟಿ ಇಟ್ಟಿದ್ದಾರೆ, ಇನ್ನೂ ಹೆಚ್ಚಿನ ಅನುದಾನದ ಅಪೇಕ್ಷೆ ಇದೆ ಎಂದು ಕಾರಜೋಳ ಹೇಳಿದರು.

upper-krishna-project-stage-3-work-will-finish-in-five-year
ವಿಧಾನ ಪರಿಷತ್

ಬೆಂಗಳೂರು: ಐದು ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಮುಗಿಸಲು ಪ್ರಯತ್ನಿಸುತ್ತಿದ್ದು, ಇದನ್ನು ರಾಷ್ಟ್ರೀಯ ಯೋಜನೆ ಎಂದು‌ ಘೋಷಿಸಲು ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಕಾಮಗಾರಿ ನ್ಯಾಯಾಧಿಕರಣ ತೀರ್ಪು ಬಂದ‌ ನಂತರ ಯೋಜನೆ ಕೈಗೆತ್ತಿಕೊಳ್ಳಲು 2012-13ರಲ್ಲಿ 17,207 ಕೋಟಿ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ನಂತರ ಸರ್ಕಾರ ಬದಲಾವಣೆಯಾಯಿತು.

ಆರಂಭದಲ್ಲಿ 735 ಕೋಟಿ‌ ಹಣವನ್ನು ಬಿಜೆಪಿ ಸರ್ಕಾರ ಖರ್ಚು ಮಾಡಿತ್ತು. ನಂತರ ಬಂದ ಸಿದ್ದರಾಮಯ್ಯ ಸರ್ಕಾರ 7600 ಕೋಟಿ ರೂ. ವೆಚ್ಚ, ಕುಮಾರಸ್ವಾಮಿ ಸರ್ಕಾರ 1346 ಕೋಟಿ ರೂ. ಖರ್ಚು ಮಾಡಿದ್ದು, ಈಗ ಯಡಿಯೂರಪ್ಪ ಸರ್ಕಾರ 3000 ಕೋಟಿ ಖರ್ಚು ಮಾಡಿದೆ. ಈ ಬಾರಿಯ ಬಜೆಟ್​ನಲ್ಲಿ 5600 ಕೋಟಿ ಇಟ್ಟಿದ್ದಾರೆ. ಇನ್ನೂ ಹೆಚ್ಚಿನ ಅನುದಾನದ ಅಪೇಕ್ಷೆ ಇದೆ. ಅದಕ್ಕೆ ಪ್ರಯತ್ನ ಮಾಡಲಿದ್ದೇವೆ ಎಂದರು.

ಹೆಚ್​ಡಿಕೆ, ಬಿಎಸ್​​ವೈ ಮೈತ್ರಿ ಸರ್ಕಾರದ ವೇಳೆ ಕೆರೆ ತುಂಬುವ ಯೋಜನೆಗೆ ಚಾಲನೆ ಕೊಡಲಾಗಿತ್ತು. ಆಗ ಈಶ್ವರಪ್ಪ ಜಲಸಂಪನ್ಮೂಲ ಸಚಿವರಾಗಿದ್ದರು, ನಂತರ ಬೊಮ್ಮಾಯಿ ಆ ಯೋಜನೆಗಳನ್ನು ಮುಂದುವರೆಸಿಕೊಂಡು ಬಂದಿದ್ದರು. ವಿಜಯಪುರದಲ್ಲಿ ಯಾವುದೇ ಕರೆ ತುಂಬುವುದು ಬಾಕಿ ಇದ್ದರೆ, ಅರ್ಧ ಕಾಮಗಾರಿ ಆಗಿದ್ದರೆ ಗಮನಕ್ಕೆ ತನ್ನಿ, ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, 5600 ಕೋಟಿ ಸಾಲಲ್ಲ, ಲಕ್ಷ ಕೋಟಿಯ ಯೋಜನೆ ಇದು. ಅನುದಾನ ಹೆಚ್ಚಿಸಬೇಕು, ಕಳೆದ ವರ್ಷವೂ ಸರಿಯಾದ ಅನುದಾನ ಸಿಗಲಿಲ್ಲ. ಏಳು ಜಿಲ್ಲೆಗಳಿಗೆ ಉಪಯೋಗವಾಗುವ ಯೋಜನೆ ಇದು. ಉತ್ತರ ಕರ್ನಾಟಕ ತುಂಬಿ ತುಳುಕುವ ಮಹತ್ತರ ಯೋಜನೆ ಇದು. ಆದ್ಯತೆ ಮೇಲೆ ಪರಿಗಣಿಸಿ ಮೂರನೇ ಹಂತದ ಯೋಜನೆ ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಡಿಸಿಎಂ ಕಾರಜೋಳ, ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭದಲ್ಲಿ 17,207 ಕೋಟಿ ಇದ್ದದ್ದು 51,148 ಕೋಟಿಗೆ ಪರಿಷ್ಕೃತ ಆಯಿತು. 35 ಸಾವಿರ ಕೋಟಿ (ಆರ್.ಅಂಡ್ ಆರ್,) ಮುಳುಗಡೆ ಪ್ರದೇಶದ ಜನರಿಗೆ ಪರಿಹಾರ ನೀಡಲು ಆಗಲಿದೆ. ಸಿವಿಲ್ ಕಾಮಗಾರಿಗೆ 16 ಸಾವಿರ ಕೋಟಿ ಬೇಕು, ಪ್ರತಿ ವರ್ಷ ಶೇ. 10 ಕೋಟಿ ಯೋಜನಾ ವೆಚ್ಚದಲ್ಲಿ ಹೆಚ್ಚಾಗಲಿದೆ. ವಿಜಯಪುರಕ್ಕೆ ಹೆಚ್ಚಿನ ಅನುಕೂಲ, ಇತರ ಆರು ಜಿಲ್ಲೆಗೂ ಉಪಯೋಗ ಆಗಲಿದೆ. ಹಾಗಾಗಿ ಯಾವುದೇ ಪರಿಸ್ಥಿತಿಯಲ್ಲೂ ಐದು ವರ್ಷದಲ್ಲಿ ಯೋಜನೆ ಮುಗಿಸಲು ಪ್ರಯತ್ನಿಸಲಾಗುತ್ತದೆ. ರಾಷ್ಟ್ರೀಯ ಯೋಜನೆ ಎಂದು‌ ಘೋಷಿಸಲು ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ. ಪತ್ರ ವ್ಯವಹಾರವೂ ನಡೆಯುತ್ತಿದೆ. ನಮ್ಮ ಪಾಲಿನ ನೀರನ್ನ ಸಂಪೂರ್ಣ ಉಪಯೋಗ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.