ETV Bharat / city

ಕನ್ನಡ ಪಠ್ಯದಲ್ಲಿ ಸ್ವಾತಂತ್ರ್ಯ ಹೋರಾಟ, ವ್ಯಕ್ತಿಗಳ ಸಾಧನೆ, ಪ್ರೇಕ್ಷಣೀಯ ಸ್ಥಳ ಅಗತ್ಯವೇ?: ಟಿ.ಎಸ್​​ ನಾಗಾಭರಣ

author img

By

Published : Jun 1, 2022, 7:06 AM IST

ಕನ್ನಡ ಪಠ್ಯಕ್ರಮದಲ್ಲಿ ಕನ್ನಡವನ್ನು ಸಮರ್ಪಕವಾಗಿ ಕಲಿಸಲಾಗುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್ ನಾಗಾಭರಣ ಪಠ್ಯಕ್ರಮದ ಬಗ್ಗೆ ಅಪಸ್ವರ ಎತ್ತಿದ್ದಾರೆ.

Kannada Development Authority chairman T S Nagabharana
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್ ನಾಗಾಭರಣ

ಬೆಂಗಳೂರು: ಒಂದರಿಂದ ಹತ್ತನೇ ತರಗತಿ ಕನ್ನಡ ಪದ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ವ್ಯಕ್ತಿಗಳ ಸಾಧನೆ ಪರಿಚಯ, ಪ್ರೇಕ್ಷಣೀಯ ಸ್ಥಳಗಳ ಮಾಹಿತಿ, ನೀತಿ ಪಾಠಗಳು, ಕಥೆ, ಕವನ, ನಾಟಕಗಳು ಅಗತ್ಯವೇ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್ ನಾಗಾಭರಣ ಪ್ರಶ್ನಿಸಿದ್ದಾರೆ.

ಪಠ್ಯ ಪುಸ್ತಕ ವಿವಾದ ಹಾಗೂ ಪರಸ್ಪರರ ಕೆಸರೆರಚಾಟದ ಬಗ್ಗೆ ಕಳವಳ ವ್ಯಕ್ತಪಡಿಸಿ ನೀಡಿರುವ ಮಾಧ್ಯಮ ಹೇಳಿಕೆಯಲ್ಲಿ ಅವರು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದ ಕನ್ನಡ ಪಠ್ಯದಲ್ಲಿ ಕನ್ನಡ ಭಾಷೆಯನ್ನು ಸಮರ್ಪಕವಾಗಿ ಕಲಿಸುವಂತೆ ಕನ್ನಡ ಪಠ್ಯವನ್ನು ಸಿದ್ಧ ಪಡಿಸಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲೆಗಳಲ್ಲಿ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಇತ್ಯಾದಿ ವಿಷಯಗಳನ್ನು ಕಲಿಸಲಾಗುತ್ತದೆ. ವಿಜ್ಞಾನದ ಪಠ್ಯಕ್ರಮದಲ್ಲಿ ವಿಜ್ಞಾನವನ್ನು, ಸಮಾಜ ವಿಜ್ಞಾನದ ಪಠ್ಯಕ್ರಮದಲ್ಲಿ ಸಮಾಜ ವಿಜ್ಞಾನವನ್ನು, ಗಣಿತದಲ್ಲಿ ಗಣಿತವನ್ನೇ ಕಲಿಸಲಾಗುತ್ತದೆ. ಆದರೆ, ಕನ್ನಡ ಪಠ್ಯಕ್ರಮದಲ್ಲಿ ಕನ್ನಡವನ್ನು ಮಾತ್ರ ಸಮರ್ಪಕವಾಗಿ ಕಲಿಸಲಾಗುತ್ತಿಲ್ಲ ಎಂದು ನಾಗಾಭರಣ ಪಠ್ಯಕ್ರಮದ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಕನ್ನಡ ಭಾಷೆ ಕಲಿಯುವುದು ಯಾವಾಗ?: ಕನ್ನಡ ಭಾಷಾ ಪಠ್ಯಗಳ ತುಂಬ ಸ್ವಾತಂತ್ರ್ಯ ಹೋರಾಟ, ಮಹಾನ್ ವ್ಯಕ್ತಿಗಳು, ಪ್ರೇಕ್ಷಣಿಯ ಸ್ಥಳಗಳು, ನೀತಿ ಪಾಠಗಳು, ಪ್ರಬಂಧ, ಕಥೆ, ನಾಟಕ, ಗದ್ಯ ಮತ್ತು ಹಲವಾರು ಪದ್ಯಗಳು ಇರುತ್ತವೆ. ಇವುಗಳ ನಡುವೆ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕಲಿಯುವುದು ಯಾವಾಗ ಮತ್ತು ಎಲ್ಲಿ ಎಂದು ಅವರು ಪ್ರಶ್ನಿಸಿದ್ದಾರೆ.

ಒಂದರಿಂದ ಹತ್ತನೇ ತರಗತಿಯವರೆಗೆ ಇರುವ ಸಾರ್ವತ್ರಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಮತ್ತು ಸಂವಹನ ಕೌಶಲ್ಯಗಳನ್ನು ಮಕ್ಕಳಿಗೆ ಕಲಿಸಿಕೊಟ್ಟರೆ, ನಂತರ ಆಡಳಿತ, ನ್ಯಾಯಾಂಗ, ವಾಣಿಜ್ಯ, ಮಾಧ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ಕನ್ನಡ ಬಳಸುವುದು ವಿಶೇಷ ಸಮಸ್ಯೆ ಆಗುತ್ತಿರಲಿಲ್ಲ.

ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ಕನ್ನಡ ಎಂಬ ಪಠ್ಯಪುಸ್ತಕದಲ್ಲಿಯೂ ಕನ್ನಡವನ್ನು ಕಲಿಸುವ ಉದ್ದೇಶ ಇಟ್ಟುಕೊಳ್ಳದಿರುವುದು ಪ್ರಾಧಿಕಾರದ ಆತಂಕವಾಗಿದೆ ಎಂದು ಟಿ.ಎಸ್.ನಾಗಾಭರಣ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಮಕ್ಕಳು, ಪೋಷಕರ ಪ್ರಾತಿನಿಧ್ಯ ಮುಖ್ಯ: ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಕನ್ನಡಕ್ಕೆ ಧಕ್ಕಬೇಕಾದ ಆದ್ಯತೆ ಇನ್ನೂ ದೊರೆತಿಲ್ಲ. ಈ ಸನ್ನಿವೇಶದಲ್ಲಿ ನಾಡಿನ ಪ್ರಜ್ಞಾವಂತರು ಪಠ್ಯಪುಸ್ತಕದ ಬಗ್ಗೆ ಪರ - ವಿರೋಧದ ಬಣಗಳಾಗಿ ಶತ್ರುಗಳಂತೆ ನಡೆದುಕೊಳ್ಳುತ್ತಿರುವುದು ಸಾಂಸ್ಕೃತಿಕ ಲೋಕವನ್ನು ಇನ್ನಷ್ಟು ಕಲುಷಿತಗೊಳಿಸುತ್ತದೆ.

ಪಠ್ಯವನ್ನು ಅಂತಿಮವಾಗಿ ಗುರಿ ಮುಟ್ಟಿಸುವವರು ಶಿಕ್ಷಕರು ಇದರ ಪ್ರಯೋಜನಾರ್ಥಿಗಳು ಮಕ್ಕಳು ಮತ್ತು ಪೋಷಕರು. ಪರಿಷ್ಕರಣ ಸಮಿತಿಯಲ್ಲಿ ಇವರ ಪ್ರಾತಿನಿಧ್ಯ ಬಹಳ ಮುಖ್ಯ ಎಂಬುದು ಎಲ್ಲರ ಅರಿವಿನಲ್ಲಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು: ಈಗ ಪಠ್ಯಕ್ರಮದ ಪರಿಷ್ಕರಣೆಯಲ್ಲಿ ಯಾವುದು ಇರಬೇಕು ಇರಬಾರದು ಎನ್ನುವ ಕುರಿತು ವ್ಯಾಪಕವಾದ ಚರ್ಚೆ ನಡೆದಿರುವುದು ವಸ್ತು ವಿಷಯದ ಬಗ್ಗೆ. ಆದರೆ, ಭಾಷಾ ಕೌಶಲಾಭಿವೃದ್ಧಿ ಕುರಿತು ಈಗಲೂ ಯಾರೂ ಮಾತಾಡುತ್ತಿಲ್ಲ ಎಂದು ನಾಗಾಭರಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಪಠ್ಯಕ್ರಮದಲ್ಲಿ ಪ್ರಮುಖವಾಗಿ ಆಗಬೇಕಾಗಿರುವುದು ವಸ್ತುವಿಷಯದ ಕುರಿತು ಚರ್ಚೆಯಲ್ಲ, ಕನ್ನಡ ಪಠ್ಯಕ್ರಮದಲ್ಲಿ ಕನ್ನಡ ಭಾಷಾ ಕೌಶಲಗಳನ್ನು ಕಲಿಸಿಕೊಡುವುದು ಹೇಗೆ?, ಅದಕ್ಕೆ ತಕ್ಕ ಹಾಗೆ ವಿವಿಧ ಹಂತದ ವಿವಾದಗಳಿಂದಾಗಿ ಕನ್ನಡ ಭಾಷೆ ಹಾಗೂ ವಿದ್ಯಾರ್ಥಿ ಮತ್ತು ಪೋಷಕರು ಬಡವಾಗುತ್ತಿದ್ದಾರೆ.

ಈ ಬಗ್ಗೆ ತುರ್ತಾಗಿ ಎಲ್ಲರೂ ಅಗತ್ಯಕ್ರಮ ವಹಿಸಲೇಬೇಕಾದ ಅನಿವಾರ್ಯತೆ ಇದೆ. ಮುಖ್ಯಮಂತ್ರಿಗಳು ಈ ಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಮುಂದಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರಾರ್ಥಿಸುತ್ತದೆ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ : ಶಿಕ್ಷಣ ಸಚಿವರ ವರದಿ ಆಧಾರದ ಮೇಲೆ ಕ್ರಮ.. ಸಿಎಂ ಬೊಮ್ಮಾಯಿ

ಪಠ್ಯಪುಸ್ತಕಗಳು ಹೇಗಿರಬೇಕು ಇತ್ಯಾದಿ ಕುರಿತು ಬಹಳ ಗಹನವಾದ ಚರ್ಚೆ, ಕಾರ್ಯಾಚರಣೆ, ಅನುಷ್ಠಾನ ಆಗಬೇಕಾಗಿದೆ. ಇದು ಪ್ರಾಧಿಕಾರಕ್ಕೆ ಇರುವ ಪ್ರಮುಖ ಕಾಳಜಿಯಾಗಿದೆ. ಪರಿಷ್ಕೃತ ಪಠ್ಯ ಪುಸ್ತಕಗಳ ಬಗ್ಗೆ ನಡೆಯುತ್ತಿರುವ ವಾದ - ವಿವಾದಗಳು, ಪರಸ್ಪರ ಕೆಸರೆರಚಾಟ ಸುಸಂಸ್ಕೃತ ಸಮಾಜದ ಘನತೆಗೆ ಚ್ಯುತಿ ತರುವುದಾಗಿದೆ.

'ಅಪ್ಪ ಅಮ್ಮನ ಜಗಳದ ನಡುವೆ ಕೂಸು ಬಡವಾಯಿತು' ಎನ್ನುವಂತೆ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗುತ್ತಿದೆ ಎಂಬ ಭಾವ ನಾಗರಿಕರನ್ನು, ಪೋಷಕರನ್ನು ಕಾಡುತ್ತಿದೆ. ಪರಿಷ್ಕೃತ ಪಠ್ಯದ ಚರ್ಚೆ ವಿದ್ಯಾರ್ಥಿಗಳ, ಕನ್ನಡ ಶಾಲೆಗಳ ಭವಿಷ್ಯಕ್ಕೆ ಚ್ಯುತಿ ತರಬಾರದು ಎಂದು ಟಿ.ಎಸ್ ನಾಗಾಭರಣ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಆದ್ಯತೆ ಮೇರೆಗೆ MRPL ನಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವಂತೆ ಸೂಚನೆ: ಟಿ.ಎಸ್ ನಾಗಾಭರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.