ETV Bharat / city

ಇನಾಂ ಅಬಾಲಿಷನ್, ಇತರೆ ಕಾನೂನು (ತಿದ್ದುಪಡಿ) ವಿಧೇಯಕ-2021ಕ್ಕೆ ಸಚಿವ ಸಂಪುಟ ಸಭೆ ಅಸ್ತು

author img

By

Published : Dec 9, 2021, 7:12 PM IST

ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯು ಕರ್ನಾಟಕ ಕೆಲವು ಇನಾಂ ಅಬಾಲಿಷನ್ ಮತ್ತು ಕೆಲ ಇತರ ಕಾನೂನು (ತಿದ್ದುಪಡಿ) ವಿಧೇಯಕ-2021ಕ್ಕೆ ಅಸ್ತು ಎಂದಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಕ್ಕೂ ಅವಕಾಶ ಮಾಡಿಕೊಂಡಿದೆ.

today-karnataka-cabinet-meeting-decisions-report
ಸಚಿವ ಸಂಪುಟ ಸಭೆ

ಬೆಂಗಳೂರು : ಇನಾಂ ಅಬಾಲಿಷನ್ ಮತ್ತು ಕೆಲವು ಇತರೆ ಕಾನೂನು (ತಿದ್ದುಪಡಿ) ವಿಧೇಯಕ-2021ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ತಲೆ ತಲಾಂತರದಿಂದ ಇನಾಂ ಭೂಮಿ ಉಳುಮೆ ಮಾಡುತ್ತಿದ್ದವರ ವೇದನೆಗೆ ಸರ್ಕಾರ ಸ್ಪಂದಿಸಿ, ಇನಾಂ ಭೂಮಿ ಮರು ಮಂಜೂರು ವಂಚಿತರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯು 'ಕರ್ನಾಟಕ ಕೆಲವು ಇನಾಂ ಅಬಾಲಿಷನ್ ಮತ್ತು ಕೆಲ ಇತರೆ ಕಾನೂನು (ತಿದ್ದುಪಡಿ) ವಿಧೇಯಕ-2021ಕ್ಕೆ ಅಸ್ತು ಎಂದಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಕ್ಕೂ ಅವಕಾಶ ಮಾಡಿಕೊಂಡಿದೆ. ಉಭಯ ಸದನಗಳು ಚರ್ಚಿಸಿ ಒಪ್ಪಿಗೆ ನೀಡಿದ ಬಳಿಕ ರಾಜ್ಯಪಾಲರಿಗೆ ಸರ್ಕಾರ ಶಿಫಾರಸು ಮಾಡಲಿದೆ. ಅಧಿಕೃತ ಅಧಿಸೂಚನೆ ಪ್ರಕಟವಾದ ದಿನದಿಂದ ಒಂದು ವರ್ಷದವರೆಗೆ ಇನಾಂ ಭೂಮಿ ಸಾಗುವಳಿ ಮಾಡುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಅಂಶವನ್ನು ಈ ವಿಧೇಯಕದಲ್ಲಿ ಸೇರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇನಾಂ ಭೂಮಿ ಸಾಗುವಳಿದಾರರಿಗೆ ಮಂಜೂರು ಮಾಡಲೆಂದು ಈ ಹಿಂದೆ ಅರ್ಜಿ ಕರೆಯಲಾಗಿತ್ತು. ಆದರೆ ಕುಗ್ರಾಮಗಳಲ್ಲಿ ವಾಸಿಸುವ ರೈತರು ಮತ್ತು ಮುಗ್ಧ ಉಳುಮೆದಾರರಿಗೆ ಮಾಹಿತಿ ಸಿಗದೆ ಅರ್ಜಿ ಸಲ್ಲಿಕೆಯಿಂದ ವಂಚಿತರಾಗಿದ್ದಾರೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 30,000 ಎಕರೆ ಇನಾಂ ಭೂಮಿಯಿದೆ. ಕಾಯ್ದೆಗೆ ತಿದ್ದುಪಡಿಯಿಂದ ಒಟ್ಟು ಒಂದು ಲಕ್ಷ ಎಕರೆಯಲ್ಲಿ ಉಳುಮೆದಾರರಿಗೆ ಅನುಕೂಲವಾಗುವ ಅಂದಾಜಿದೆ.

ಇನಾಂ ಭೂಮಿ ತಮ್ಮ ಸ್ವಾಧೀನದಲ್ಲಿಟ್ಟುಕೊಂಡು ಉಳುಮೆ ಮಾಡುತ್ತಿದ್ದಾರೆ. ಸರ್ಕಾರ ಕೊಟ್ಟಿದ್ದ ಅವಕಾಶ ಬಳಸಿಕೊಳ್ಳಲಾಗದೆ ಜಮೀನಿನ ಒಡೆತನ ತಮ್ಮ ಹೆಸರಿಗೆ ಮಾಡಿಕೊಂಡಿಲ್ಲ. ಹೀಗಾಗಿ ಕೃಷಿಗೆ ಬ್ಯಾಂಕ್‌ನಿಂದ ಸಾಲ-ಸವಲತ್ತು ಪಡೆಯಲಾಗುತ್ತಿಲ್ಲ. ಅನ್ಯ ಕೆಲಸಗಳಿಂದಲೂ ವಂಚಿತರಾಗಿದ್ದಾರೆ. ಇಷ್ಟೇ ಅಲ್ಲದೆ, ನಕಲಿ ದಾಖಲೆ ಸೃಷ್ಟಿಸಿ ಇಂತಹ ಭೂಮಿಯನ್ನು ಒಳಗಿಂದೊಳಗೆ ತಮ್ಮ ಹೆಸರಿಗೆ ಮಾಡಿಕೊಳ್ಳುವ ವಂಚಕರ ಹಾವಳಿ ಹೆಚ್ಚಿದೆ.

ಇನಾಂ ಭೂಮಿ ಮರು ಮಂಜೂರಿಗೆ ಮತ್ತೊಂದು ಅವಕಾಶ ನೀಡಿದರೆ ಹಲವಾರು ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಲು ಸಾಧ್ಯವಿದೆ ಎಂಬ ಕಾರಣಕ್ಕೆ ತಿದ್ದುಪಡಿ ವಿಧೇಯಕ ರೂಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಸರ್ಕಾರಿ ಭೂ ಮಾಪಕರಿಗೂ ಅನುಮತಿ : ಜಮೀನು ಗುರುತಿಸಲು ಅಗತ್ಯವಿರುವ ವಿವರಣೆ ಹಾಗೂ ಭೂ ಸಮೀಕ್ಷೆ ನಕ್ಷೆ ಅಥವಾ ಭೂ ಮಾಪನ ನಕ್ಷೆ (ನಿಗದಿತ ಅರ್ಜಿ ನಮೂನೆ-11ಇ) ಯನ್ನು ಇನ್ಮುಂದೆ ಸರ್ಕಾರಿ ಭೂಮಾಪಕರು ನೀಡಲು ಅವಕಾಶ ಕಲ್ಪಿಸಲಾಗಿದೆ.

ಈವರೆಗೆ ಪರವಾನಗಿ ಪಡೆದ ಭೂಮಾಪಕರು ಮಾತ್ರ 11ಇ ಸ್ಕೆಚ್ ನೀಡಬಹುದಾಗಿತ್ತು. ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮೂಲಕ ಅನುಮತಿ ನೀಡಿದ್ದು, ಸಂಬಂಧಿಸಿದ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.

ಮುಂಬರುವ ವಿಧಾನ ಮಂಡಲದ ಅಧಿವೇಶನದಲ್ಲಿ ಎರಡೂ ವಿಧೇಯಕಗಳನ್ನು ಮಂಡಿಸಿ ಉಭಯ ಸದನಗಳ ಅನುಮೋದನೆ ಪಡೆದು, ಕಾಯ್ದೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ಸಭೆಯಲ್ಲಿ ಕೈಗೊಂಡಿರುವ ಇತರ ನಿರ್ಧಾರಗಳು : ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 152.87 ಕೋಟಿ ವೆಚ್ಚದಲ್ಲಿ ಉಚಿತ ಪಠ್ಯ ಪುಸ್ತಕಗಳನ್ನು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲು ಅನುಮೋದನೆ ದೊರೆತಿದೆ ಎನ್ನಲಾಗುತ್ತಿದೆ.

ಕೃಷಿ ವಿಜ್ಞಾನಗಳ ವಿವಿ (ತಿದ್ದುಪಡಿ) ವಿಧೇಯಕ 2021 ಕ್ಕೆ ಅನುಮೋದನೆ, ಕರ್ನಾಟಕ ರಾಜ್ಯ ಆಯುಷ್‌ ವಿಶ್ವ ವಿದ್ಯಾಲಯ ವಿಧೇಯಕ 2021 ಕ್ಕೆ ತಿದ್ದುಪಡಿ ಮತ್ತು ನಿಬಂಧನೆ ಸೇರ್ಪಡೆ ಕುರಿತಾದ ನಿರ್ಧಾರ ಮಾಡಲಾಗಿದ್ದು, ಕರ್ನಾಟಕ ಮಹಾನಗರಪಾಲಿಕೆಗಳು ಮತ್ತು ಇತರೆ ಕಾನೂನು ( ಮೂರನೇ ತಿದ್ದುಪಡಿ) ವಿಧೇಯಕ 2021 ಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.