ETV Bharat / city

ಬಿಜೆಪಿಯ ಪಂಚ ಪ್ರಶ್ನೆಗೆ ದಶಪ್ರಶ್ನೆ ಮೂಲಕ ಉತ್ತರಿಸಿದ ಸಿದ್ದರಾಮಯ್ಯ...

author img

By

Published : Apr 21, 2021, 9:19 PM IST

ಕೊರೊನಾ ಎರಡನೇ ಅಲೆಯಿಂದ ತತ್ತರಿಸಿಹೋಗಿರುವ ಜನತೆ ಪ್ರಶ್ನಿಸುತ್ತಿರುವುದು ಆಡಳಿತವಪಕ್ಷವನ್ನು, ವಿರೋಧಪಕ್ಷವನ್ನು ಅಲ್ಲ ಎನ್ನುವುದು ನೆನಪಿರಲಿ. ಸೌಜನ್ಯಪೂರ್ವಕವಾಗಿ ನೆರವು ನೀಡಿ ಎಂದು ಪ್ರಧಾನಿಯವರನ್ನು ಕೋರಿದ್ದೆ. ಅಂತಹ ಸೌಜನ್ಯಪೂರಿತ ನಡವಳಿಕೆಗೆ ನೀವು ಯೋಗ್ಯರಲ್ಲ. ನೆರವು ನೀಡಲು ನೀವು ದಾನಿಗಳಲ್ಲ, ಪಡೆಯಲು ನಾವು ನಿಮ್ಮ ಮನೆಮುಂದೆ ನಿಂತ ಭಿಕ್ಷುಕರೂ ಅಲ್ಲ. ಆರೂವರೆ ಕೋಟಿ ಜನ ಬೆವರಗಳಿಕೆಯಲ್ಲಿ ಪಾವತಿಸಿರುವ ತೆರಿಗೆ ಹಣದಲ್ಲಿ ಕರ್ನಾಟಕದ ಪಾಲು ಕೇಳುತ್ತಿದ್ದೇವೆ ಎಂದು ಸಿದ್ದರಾಮಯ್ಯ ಬಿಜೆಪಿಗೆ ಟಾಂಗ್​ ಕೊಟ್ಟಿದ್ದಾರೆ.

Siddaramaiah  Answer to BJP's five Questions
ಬಿಜೆಪಿಯ ಪಂಚ ಪ್ರಶ್ನೆಗೆ ದಶಪ್ರಶ್ನೆ ಮೂಲಕ ಉತ್ತರಿಸಿದ ಸಿದ್ದರಾಮಯ್ಯ

ಬೆಂಗಳೂರು: ಆಡಳಿತ ಪಕ್ಷ ಬಿಜೆಪಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷ ತನಗೆ ಕೇಳಿರುವ ಐದು ಪ್ರಶ್ನೆಗಳಿಗೆ 10 ಪ್ರಶ್ನೆಗಳು ಮೂಲಕ ಕೊಟ್ಟಿರುವ ಸಿದ್ದರಾಮಯ್ಯ ಬಿಜೆಪಿ ಕೇಳಿದ ಪ್ರಶ್ನೆಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಆಡಳಿತ ನಡೆಸುವವರ ಕೆಲಸ ಪ್ರಶ್ನೆ ಕೇಳುವುದಲ್ಲ, ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದು ಅವರ ಕರ್ತವ್ಯ. ತಮ್ಮದು ವಿರೋಧ ಪಕ್ಷ ಅಲ್ಲ, ಆಡಳಿತಾರೂಢ ಪಕ್ಷ ಎನ್ನುವುದನ್ನು ರಾಜ್ಯ ಬಿಜೆಪಿ ಏನಾದರೂ ಮರೆತು ಬಿಟ್ಟಿದೆಯಾ ಹೇಗೆ? ಪ್ರಶ್ನೆ ಕೇಳುವ ಅಷ್ಟೊಂದು ಹುಚ್ಚಿದ್ದರೆ‌ ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ವಿರೋಧ ಪಕ್ಷದಲ್ಲಿ ಕೂತುಕೊಂಡು ಪ್ರಶ್ನೆ ಕೇಳಿ, ನಾವು ಉತ್ತರಿಸುತ್ತೇವೆ ಎಂದು ಕೇಸರಿ ಪಕ್ಷಕ್ಕೆ ಭರ್ಜರಿ ಟಾಂಗ್​ ಕೊಟ್ಟಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ಬೆಳಗ್ಗೆ ಎದ್ದು ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡರೆ ಅವರಿಗೂ ಹಿತ, ರಾಜ್ಯಕ್ಕೂ ಹಿತ. ಕೊರೊನಾ ಎರಡನೇ ಅಲೆಯಿಂದ ತತ್ತರಿಸಿಹೋಗಿರುವ ಜನತೆ ಪ್ರಶ್ನಿಸುತ್ತಿರುವುದು ಆಡಳಿತ ಪಕ್ಷವನ್ನು, ವಿರೋಧ ಪಕ್ಷವನ್ನು ಅಲ್ಲ ಎನ್ನುವುದು ನೆನಪಿರಲಿ. ಸೌಜನ್ಯ ಪೂರ್ವಕವಾಗಿ ನೆರವು ನೀಡಿ ಎಂದು ಪ್ರಧಾನಿಯವರನ್ನು ಕೋರಿದ್ದೆ. ಅಂತಹ ಸೌಜನ್ಯಪೂರಿತ ನಡವಳಿಕೆಗೆ ನೀವು ಯೋಗ್ಯರಲ್ಲ. ನೆರವು ನೀಡಲು ನೀವು ದಾನಿಗಳಲ್ಲ, ಪಡೆಯಲು ನಾವು ನಿಮ್ಮ ಮನೆ ಮುಂದೆ ನಿಂತ ಭಿಕ್ಷುಕರೂ ಅಲ್ಲ. ಆರೂವರೆ ಕೋಟಿ ಜನ ಬೆವರಗಳಿಕೆಯಲ್ಲಿ ಪಾವತಿಸಿರುವ ತೆರಿಗೆಹಣದಲ್ಲಿ ಕರ್ನಾಟಕದ ಪಾಲು ಕೇಳುತ್ತಿದ್ದೇವೆ ಎಂದಿದ್ದಾರೆ.


ಬಿಜೆಪಿ ಪ್ರಶ್ನೆ ಏನಿತ್ತು?
ನಮ್ಮ ಪಂಚ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರುವಿರಾ ಸಿದ್ದರಾಮಯ್ಯ ಎಂದು ಕೇಳಿದ್ದ ಬಿಜೆಪಿ, ಕಡಿಮೆ ದರದಲ್ಲಿ ಲಸಿಕೆ ಪೂರೈಕೆ ನೆರವಿನ ಹಸ್ತವಲ್ಲವೇ? ದೇಶಾದ್ಯಂತ ಕೋವಿಡ್ ಲ್ಯಾಬ್ ವ್ಯವಸ್ಥೆ ಮಾಡುತ್ತಿರುವುದು ನೆರವಿನ ಹಸ್ತವಲ್ಲವೇ? ಕೋವಿಡ್ ಸಂದರ್ಭದಲ್ಲೂ ಆರ್ಥಿಕ ಸ್ಥಿತಿ ಪಾತಾಳ ಸೇರದಂತೆ ನೋಡಿದ್ದು ನೆರವಿನ ಹಸ್ತವಲ್ಲವೇ? ದೇಶಾದ್ಯಂತ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಸುಧಾರಣೆ ಆರಂಭಿಸಿದ್ದು ನೆರವಿನ ಹಸ್ತವಲ್ಲವೇ? ದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು ನೆರವಿನ ಹಸ್ತವಲ್ಲವೇ? ಎಂದು ಕೇಳಿದ್ದ ಬಿಜೆಪಿ, ಲಸಿಕೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದೇ ಕಾಂಗ್ರೆಸ್‌ ನೀಡಿದ ನೆರವಿನ ಹಸ್ತ, ಜನರನ್ನು ತಪ್ಪುದಾರಿಗೆಳೆದದ್ದೇ ಕಾಂಗ್ರೆಸ್ ಸಾಧನೆ!!! ಎಂದಿದ್ದು ಬುರುಡೆರಾಮಯ್ಯ ಎಂದು ಲೇವಡಿ ಮಾಡಿತ್ತು.

  • ಈ ಎಲ್ಲ ಪ್ರಶ್ನೆಗಳಿಗೆ ಸಿದ್ದರಾಮಯ್ಯ 10 ಉತ್ತರಗಳ ಮೂಲಕ ತಿರುಗೇಟು ನೀಡಿದ್ದಾರೆ.
    ಸಿದ್ದರಾಮಯ್ಯ ಅವರ ದಶ ಉತ್ತರಗಳು ಹೀಗಿವೆ!
    ಸಿದ್ದರಾಮಯ್ಯ ನಿಮ್ಮ ಪಂಚ ಪ್ರಶ್ನೆಗೆ ನನ್ನ ಮೊದಲ ಕಂತಿನ ದಶ ಪ್ರಶ್ನೆಗಳೇ ಉತ್ತರ ಎಂದು ತಿಳಿಸಿದ್ದಾರೆ.
    1. ಕರ್ನಾಟಕದಿಂದ ಪಿಎಂ ಕೇರ್ ನಿಧಿಗೆ ಸಂಗ್ರಹವಾಗಿರುವ ಹಣ ಎಷ್ಟು?
    2. ಪಿಎಂ ಕೇರ್ ನಿಧಿಯಿಂದ ಇಲ್ಲಿಯ ವರೆಗೆ ಕರ್ನಾಟಕಕ್ಕೆ ಕೊರೊನಾ ನಿರ್ವಹಣೆಗಾಗಿ ನೀಡಿರುವ ದುಡ್ಡು ಎಷ್ಟು?
    3. 50,000 ವೆಂಟಿಲೇಟರ್ ತಯಾರಿಕೆಗೆ ಪಿಎಂ ಕೇರ್ ನಿಧಿಯಿಂದ ರೂ.2000 ಕೋಟಿ ನೀಡಲಾಗಿದೆ. ಅದರಲ್ಲಿ ಕರ್ನಾಟಕಕ್ಕೆ ನೀಡಿದ್ದು ಕೇವಲ 90 ವೆಂಟಿಲೇಟರ್ ಮಾತ್ರ ಎಂದು ಪಿಐಬಿ ಪ್ರಕಟಣೆ ತಿಳಿಸಿದೆ. ನಮ್ಮ ರಾಜ್ಯಕ್ಕೆ‌ ಮಾತ್ರ ಈ ಅನ್ಯಾಯ ಏಕೆ?
    4. ಕೊರೊನಾ ಸೋಂಕಿನ‌ ಪರಿಣಾಮವಾಗಿ ಲಾಕ್ ಡೌನ್ ಹೇರಿದ ನಂತರ ಬೀದಿಗೆ ಬಿದ್ದ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಪಿಎಂ ಕೇರ್ ನಿಧಿಯಿಂದ ಬಿಡುಗಡೆಯಾಗಿದ್ದೇ ರೂ.1000 ಕೋಟಿ. ಅದರಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ ರೂ.30 ಕೋಟಿ ಮಾತ್ರ. ಈ ಅನ್ಯಾಯಕ್ಕೆ ಯಾರು ಹೊಣೆ?
    5. ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರು ಸಾಯುತ್ತಿರುವುದು ನಿಜವಲ್ಲವೇ ಬಿಜೆಪಿ ನಾಯಕರೇ? ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೇಡಿಕೆ ಎಷ್ಟು? ಪೂರೈಕೆಯಾಗುತ್ತಿರುವುದು ಎಷ್ಟು? ಕೇಂದ್ರ ಸರ್ಕಾರ ನೀಡಿರುವುದು ಎಷ್ಟು?
    6. ಪ್ರಪಂಚದಲ್ಲಿ ಅತಿಹೆಚ್ಚು ಆಕ್ಸಿಜನ್ ಉತ್ಪಾದಿಸುವ ದೇಶ ಭಾರತವಾಗಿದ್ದರೂ, ದೇಶದಲ್ಲಿ ಕೊರೊನಾ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವುದು ಯಾಕೆ?
    7. ಭಾರತದಲ್ಲಿ 2019-20ಕ್ಕೆ ಹೋಲಿಸಿದರೆ 2020-21ರಲ್ಲಿ ಆಕ್ಸಿಜನ್ ಉತ್ಪಾದನೆ ದುಪ್ಪಟ್ಟಾಗಿದ್ದರೂ ಈಗಿನ‌ ಆಕ್ಸಿಜನ್ ಕೊರತೆಗೆ ಕಾರಣ ಏನು? ಹೊಣೆ ಯಾರು?
    8. ಒಂದು ವರ್ಷದ ಹಿಂದೆಯೇ ಕೊರೊನಾ ಕಾಣಿಸಿಕೊಂಡಾಗಲೇ ಆಕ್ಸಿಜನ್ ಅವಶ್ಯಕತೆ ಬಗ್ಗೆ ತಜ್ಞರು ಎಚ್ಚರಿಸಿದ್ದರೂ ಹಿಂದಿನ ವರ್ಷಕ್ಕಿಂತ ಆಕ್ಸಿಜನ್ ರಫ್ತಿನ ಪ್ರಮಾಣ ದುಪ್ಪಟ್ಟುಗೊಳಿಸಿದ್ದು ಯಾಕೆ?
    9. ನಮ್ಮ ದೇಶದ ಜನಸಂಖ್ಯಾ ಪ್ರಮಾಣಕ್ಕೆ ಹೋಲಿಸಿದರೆ ಈ ವರೆಗೆ ಕಡಿಮೆ ಪ್ರಮಾಣದಲ್ಲಿ‌‌ ಕೊರೊನಾ ಲಸಿಕೆ ನೀಡಿರುವುದು ಭಾರತದಲ್ಲಿ (10% ಗಿಂತ ಕಡಿಮೆ). ಈ ಹಿಂದುಳಿಯುವಿಕೆಗೆ ಯಾರು ಕಾರಣ?
    10. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ಸುಧಾರಣೆಯಾಗಿದ್ದರೆ ಕೊರೊನಾ ರೋಗಿಗಳು ಚಿಕಿತ್ಸೆ ಇಲ್ಲದೇ ಸಾಯುತ್ತಿರುವುದು ಯಾಕೆ?
  • ಈ ರೀತಿ 10 ಉತ್ತರಗಳನ್ನು ನೀಡಿರುವ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಗಳ ಮುಂದೆ ಕ್ಯೂ ನಿಂತಿರುವುದು ಯಾಕೆ? ಎಂದು ಕೇಳಿದ್ದು, ಪ್ರಶ್ನೆಗಳು ಮುಂದುವರಿಯುವುದು ಎಂದೂ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.