ETV Bharat / city

ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿದ್ರೆ ಸೂಕ್ತ ಕ್ರಮ: ಕಮಲ್ ಪಂತ್

author img

By

Published : Sep 26, 2021, 8:57 AM IST

ಶನಿವಾರ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಮಾಸಿಕ ಜನಸಂಪರ್ಕ ಸಭೆ ನಡೆಯಿತು. ಕೋರಮಂಗಲದ 1, 5 ಮತ್ತು 8ನೇ ಬ್ಲಾಕ್ ನಿವಾಸಿಗಳು ಸಭೆಯಲ್ಲಿ ಪಾಲ್ಗೊಂಡು ಪೊಲೀಸ್​​ ಆಯುಕ್ತರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

Public Relations Meeting at koramangala police station
ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಮಾಸಿಕ ಜನಸಂಪರ್ಕ ಸಭೆ

ಬೆಂಗಳೂರು: ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿ ಹೋಗುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ಅಡಚಣೆಯಾಗುವ ರೀತಿ ವಾಹನ ನಿಲ್ಲಿಸಿರುವುದು ಕಂಡುಬಂದರೆ ಅಂತಹ ವಾಹನಗಳನ್ನು ಟೋಯಿಂಗ್ ಮಾಡಿ ದಂಡ ವಿಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನಡೆದ ಮಾಸಿಕ ಜನಸಂಪರ್ಕ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋರಮಂಗಲದ 1, 5 ಮತ್ತು 8ನೇ ಬ್ಲಾಕ್ ನಿವಾಸಿಗಳು ಸಭೆಯಲ್ಲಿ ಪಾಲ್ಗೊಂಡು ಆಯುಕ್ತರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದುಕೊಂಡರು.

ಸಾರ್ವಜನಿಕ ಸ್ಥಳಗಳು ಹಾಗೂ ಪಾದಚಾರಿ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಪ್ರತಿಯೊಬ್ಬ ನಾಗರಿಕರೂ ಇತರರಿಗೆ ತೊಂದರೆ ನೀಡದಂತೆ ವಾಹನ ಪಾರ್ಕಿಂಗ್ ಮಾಡಬೇಕು ಎಂದು ಸಾರ್ವಜನಿಗರಿಗೆ ಸಲಹೆ ನೀಡಿದರು.

ವಾಹನಗಳ ಮೂಲಕ ಹೆಚ್ಚು ಶಬ್ಧ ಮಾಡುವವರ ವಿರುದ್ಧ ಕ್ರಮ:

ರಾತ್ರಿ 11 ಗಂಟೆ ನಂತರ ಯುವಕರು ಹೆಚ್ಚಿನ ಶಬ್ದ ಬರುವ ಹಾರ್ನ್ ಹಾಗೂ ಸೈಲೆನ್ಸರ್ ಹಾಕಿಕೊಂಡು ತಿರುಗುತ್ತಾ ಶಾಂತಿಭಂಗ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ಮಾತಿಗೆ ಉತ್ತರಿಸಿದ ಪೊಲೀಸ್​​ ಆಯುಕ್ತರು, ಯಾವ ಪ್ರದೇಶದಲ್ಲಿ ಯುವಕರು ಆ ರೀತಿ ಬೈಕ್ ಚಲಾಯಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದರೆ ಕೂಡಲೇ ಅಂತಹವರ ವಾಹನಗಳನ್ನು ಸೀಜ್ ಮಾಡಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಅಂತಹ ಕಡೆಗಳಲ್ಲಿ ಹೆಚ್ಚು ಗಸ್ತು ತಿರುಗುವಂತೆ ಪೊಲೀಸರಿಗೆ ಸ್ಥಳದಲ್ಲಿಯೇ ಸೂಚಿಸಿದರು.

ಮಕ್ಕಳ ಅಪಹರಣ ಬಗ್ಗೆ ಎಚ್ಚರ:

ಕೋರಮಂಗಲದ ಒಂದನೇ ಹಂತದ ಉದ್ಯಾನದಲ್ಲಿ ಮಕ್ಕಳು ಆಟವಾಡುವಾಗ ದುಷ್ಕರ್ಮಿಗಳು ಆಮಿಷವೊಡ್ಡಿ ಅಪಹರಿಸಲು ಯತ್ನಿಸುತ್ತಾರೆ ಎಂದು ನಿವಾಸಿಯೊಬ್ಬರು ಸಭೆಯಲ್ಲಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿ, ಈವರೆಗೂ ಯಾವುದೇ ಮಗು ಅಪಹರಣವಾಗಿಲ್ಲ. ಆದರೆ, ಮಕ್ಕಳ ಅಪಹರಣ ವಿಚಾರದಲ್ಲಿ ತುಂಬಾ ಜಾಗೃತರಾಗಿದ್ದೇವೆ. ಮುಂದೆಯೂ ಯಾವುದೇ ಅಹಿತಕರ ಘಟನೆಯಾಗದಂತೆ ಎಚ್ಚರ ವಹಿಸಲಾಗುವುದು. ಉದ್ಯಾನಗಳಿರುವ ಸ್ಥಳಗಳಲ್ಲಿ ಸಬ್ ಇನ್ಸ್​​ಪೆಕ್ಟರ್ ನೇತೃತ್ವದಲ್ಲಿ ಗಸ್ತು ಹೆಚ್ಚಿಸಲಾಗುವುದು ಎಂದರು.

ಅವೈಜ್ಞಾನಿಕ ರಸ್ತೆ ಉಬ್ಬು:

ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಲು ರಸ್ತೆ ಗುಂಡಿ ಹಾಗೂ ಅವೈಜ್ಞಾನಿಕ ರಸ್ತೆ ಉಬ್ಬುಗಳೇ ಕಾರಣ ಎಂದು ಸಾರ್ವಜನಿಕರು ದೂರಿದರು. ಇದಕ್ಕೆ ಉತ್ತರಿಸಿದ ಪೊಲೀಸ್​ ಆಯುಕರು, ಕೆಲ ರಸ್ತೆಯಲ್ಲಿ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಹಾಗಾಗಿ, ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಯಾವ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಉಬ್ಬುಗಳಿವೆಯೋ ಅವುಗಳನ್ನು ಸಂಚಾರ ಪೊಲೀಸರು ಪರಿಶೀಲಿಸಿ ತೆರವುಗೊಳಿಸಲಿದ್ದಾರೆ ಎಂದು ಹೇಳಿದರು.

ಪೊಲೀಸ್ ಚೌಕಿ ನಿರ್ಮಿಸಿ:

ಕೋರಮಂಗಲದ ಯೂನಿಯನ್ ಬ್ಯಾಂಕ್ ಬಳಿ ಯಾವುದೇ ಪೊಲೀಸ್ ಚೌಕಿ ಇಲ್ಲ. ಸಿಬ್ಬಂದಿ ಬಿಸಿಲಿನಲ್ಲಿ ನಿಂತು ಕರ್ತವ್ಯ ನಿರ್ವಹಿಸಬೇಕು. ಹೀಗಾಗಿ, ಪೊಲೀಸ್ ಚೌಕಿ ನಿರ್ಮಿಸುವಂತೆ ಸಾರ್ವಜನಿಕರು ಮನವಿ ಮಾಡಿದರು. ಶೀಘ್ರದಲ್ಲೇ ಚೌಕಿ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಪಂತ್​ ಭರವಸೆ ನೀಡಿದರು.

ಎಲ್ಲೆಂದರಲ್ಲಿ ವಾಹನಗಳ ಟೋಯಿಂಗ್ ಮಾಡುತ್ತಾರೆ:

ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸುವುದೇ ತಡ, ಟೋಯಿಂಗ್ ಸಿಬ್ಬಂದಿ ವಾಹನಗಳನ್ನು ಟೋಯಿಂಗ್ ಮಾಡುತ್ತಾರೆ. ಕೇವಲ ಐದು ಅಥವಾ ಹತ್ತು ನಿಮಿಷದ ಕೆಲಸಕ್ಕಾಗಿ ವಾಹನ ನಿಲ್ಲಿಸಿ ಕಚೇರಿಯೊಳಗೆ ಹೋಗಿ ಬರುವಷ್ಟರಲ್ಲೇ ವಾಹನ ಟೋಯಿಂಗ್ ಮಾಡಿರುತ್ತಾರೆ. ಇದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.

ಪ್ರಶ್ನೆಗೆ ಉತ್ತರಿಸಿದ ಪಂತ್​, ಸಂಚಾರ ನಿಯಮ ಉಲ್ಲಂಘಿಸಿ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ವಾಹನ ಟೋಯಿಂಗ್ ಮಾಡುತ್ತಾರೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಂಚಾರ ನಿಯಮ ಮಾಡಲಾಗಿದೆ. ಹೀಗಾಗಿ, ರಸ್ತೆಯಲ್ಲಿ ನಡೆದು ಹೋಗುವವರಿಗೆ, ಸಂಚರಿಸುವವರಿಗೆ ತೊಂದರೆಯಾಗುವಂತೆ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು ತಪ್ಪು. ಆದರೆ, ನಿಯಮ ಪಾಲಿಸುವ ಮೂಲಕವೇ ವಾಹನಗಳನ್ನು ಟೋಯಿಂಗ್ ಮಾಡಬೇಕು ಎಂದು ಪೊಲೀಸರಿಗೆ ಸೂಚಿಸಿದರು.

ಮತ್ತೊಂದು ಜನ ಸಂಪರ್ಕ ಸಭೆ:

ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಕೂಡ ಜನಸಂಪರ್ಕ ಸಭೆ ನಡೆಯಿತು. ಈ ಸಭೆಯಲ್ಲಿ 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ಪೊಲೀಸ್ ಅಧಿಕಾರಿಗಳ ಮುಂದೆ ಹೇಳಿಕೊಂಡು ಉತ್ತರ ಪಡೆದುಕೊಂಡರು.

ಇದನ್ನೂ ಓದಿ: ಭಾರತ್ ಬಂದ್ : ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ವ್ಯವಸ್ಥೆ

ಮಾದಕ ವಸ್ತು ಸರಬರಾಜು ಹಾಗೂ ಸಾರ್ವಜನಿಕರ ಮೇಲೆ ಪುಂಡಾಟಿಕೆ ನಡೆಸುವವರು ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರ ಭದ್ರತೆಗೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹರೀಶ್ ಪಾಂಡೆ ಸಭೆಯಲ್ಲಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.