ETV Bharat / city

ಕೆಎಸ್ಆರ್‌ಟಿಸಿ ಖಾಸಗೀಕರಣ ಮಾಡುವ ಪ್ರಸ್ತಾಪವಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

author img

By

Published : Dec 24, 2021, 12:50 PM IST

ಕಳೆದ ಐದು ವರ್ಷದಲ್ಲಿ ಸಾರಿಗೆ ನಿಗಮ ₹233.10 ಕೋಟಿ ಸಾಲ ಮಾಡಿದೆ. ಅದರಲ್ಲಿ 195 ಕೋಟಿ ಸಾಲ ಮರುಪಾವತಿ ಮಾಡಲಾಗಿದೆ. ಸಾಮಾನ್ಯ ಬಸ್​ಗಳು‌ 8.5 ಲಕ್ಷ ಕಿಲೋಮೀಟರ್ ಸಂಚರಿಸಿದರೆ ಅಥವಾ 11 ವರ್ಷವಾದಲ್ಲಿ ಅಂತಹ ಬಸ್​ಗಳ ಮಾರಾಟ ಇಲ್ಲವೇ ವಿಲೇವಾರಿ ಮಾಡಲಾಗುತ್ತದೆ..

Kota Srinivas Poojary
ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು : ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಯಾದ ಕೆಎಸ್ಆರ್‌ಟಿಸಿ ಖಾಸಗೀಕರಣ ಮಾಡುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ನಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಇದೊಂದು ಸೇವೆ ನೀಡುವ ಸಂಸ್ಥೆಯಾಗಿದೆ. ಹಾಗಾಗಿ, ಲಾಭ-ನಷ್ಟವನ್ನು ಗಮನಿಸದೆ ರಾಜ್ಯದಲ್ಲಿ ಸಾರಿಗೆ ಸೇವೆ ಒದಗಿಸಲಿದೆ ಎಂದು ತಿಳಿಸಿದರು.

ರಾಜ್ಯ ಸಾರಿಗೆ ಖಾಸಗೀಕರಣದ ಕುರಿತಂತೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿರುವುದು..

ಕಳೆದ ಐದು ವರ್ಷದಲ್ಲಿ ಸಾರಿಗೆ ನಿಗಮ ₹233.10 ಕೋಟಿ ಸಾಲ ಮಾಡಿದೆ. ಅದರಲ್ಲಿ 195 ಕೋಟಿ ಸಾಲ ಮರುಪಾವತಿ ಮಾಡಲಾಗಿದೆ. ಸಾಮಾನ್ಯ ಬಸ್​ಗಳು‌ 8.5 ಲಕ್ಷ ಕಿಲೋಮೀಟರ್ ಸಂಚರಿಸಿದರೆ ಅಥವಾ 11 ವರ್ಷವಾದಲ್ಲಿ ಅಂತಹ ಬಸ್​ಗಳ ಮಾರಾಟ ಇಲ್ಲವೇ ವಿಲೇವಾರಿ ಮಾಡಲಾಗುತ್ತದೆ.

ಅದೇ ರೀತಿ ವೋಲ್ವೋ ಬಸ್​​ಗಳು 10 ಲಕ್ಷ ಕಿಲೋಮೀಟರ್ ಸಂಚರಿಸಿದರೆ ಅಥವಾ 15 ವರ್ಷವಾದಲ್ಲಿ ಯಾವುದು ಮೊದಲಾಗುತ್ತದೆಯೋ ಅದರ ಆಧಾರದಂತೆ ಅಂತಹ ಬಸ್‌ಗಳ ಮಾರಾಟ ಅಥವಾ ವಿಲೇವಾರಿ ಮಾಡುವ ನಿಯಮವಿದೆ.

ಆ ನಿಯಮದಂತೆ ಹಳೇ ಬಸ್​ಗಳ ವಿಲೇವಾರಿ ಮಾಡಲಾಗುತ್ತಿದೆ. ಸುಸ್ಥಿತಿಯ ಬಸ್​ಗಳ ವಿಲೇವಾರಿ ಮಾಡಿ ಸಂಸ್ಥೆಗೆ ನಷ್ಟ ಮಾಡುತ್ತಿಲ್ಲ, ಇರುವ ನಿಯಮ ಪಾಲನೆ ಮಾಡಲಾಗುತ್ತದೆ ಎಂದರು. ಹಳೇ ಬಸ್​ಗಳನ್ನು ಸಿಎನ್‌ಜಿ ಚಾಲಿತ ವಾಹನಗಳಾಗಿ ಪರಿವರ್ತನೆ ಮಾಡಿ ಬಳಸಲು ಸದಸ್ಯರು ಸಲಹೆ ನೀಡಿದ್ದಾರೆ. ಈ ಸಲಹೆ ಕುರಿತು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.