ETV Bharat / city

ಎಲ್ಲಿದೆ ಡಬಲ್ ಇಂಜಿನ್ ಸರ್ಕಾರ? ರಾಜ್ಯದ ಈ ಯೋಜನೆಗಳಿಗೆ ಬಿಡಿಗಾಸೂ ಕೊಡದ ಕೇಂದ್ರ

author img

By

Published : Aug 14, 2022, 9:17 AM IST

Updated : Aug 14, 2022, 2:29 PM IST

12 ವಿವಿಧ ಇಲಾಖೆಗಳಲ್ಲಿನ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಇದರಿಂದ ಪ್ರಗತಿ ಕುಂಠಿತವಾಗಿದೆ.

Etv Bharat ಕೇಂದ್ರದ ಅನುದಾನ
Etv Bharat ಕೇಂದ್ರದ ಅನುದಾನ

ಬೆಂಗಳೂರು: ನಮ್ಮದು ಡಬಲ್ ಇಂಜಿನ್ ಸರ್ಕಾರ ಅಂತ ಬೊಮ್ಮಾಯಿ ಬೆನ್ನು ತಟ್ಟುಕೊಳ್ಳುತ್ತಲೇ ಇರುತ್ತಾರೆ. ಆದರೆ ಅನುದಾನ ಬಿಡುಗಡೆ ವಿಚಾರದಲ್ಲಿ ಮಾತ್ರ ಕೇಂದ್ರದ ಇಂಜಿನ್ ಕೈ‌ಕೊಟ್ಟಂತೆ ಕಾಣುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಮೊದಲ ತ್ರೈಮಾಸಿಕದಲ್ಲಿ ಅನುದಾನ ಬಿಡುಗಡೆ ಅಂಕಿಅಂಶ ನೋಡಿದರೆ ನಿಜಕ್ಕೂ ಡಬಲ್ ಇಂಜಿನ್ ಸರ್ಕಾರ ಇದೆಯೇ? ಎಂಬ ಅನುಮಾನ ಮೂಡುತ್ತದೆ.

ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ ಎಂಬುದು ಇದರ ಹಿಂದಿನ ವಾದ. ರಾಜ್ಯಕ್ಕೆ ಬರಬೇಕಾದ ಅನುದಾನ, ಕೇಂದ್ರದ ನೆರವು ಸುಲಭವಾಗಿ ಸಿಗಲಿದೆ ಎಂಬುದು ಇದರ ಒಳಾರ್ಥ.

ರಾಜ್ಯದಲ್ಲಿ ಅನೇಕ ಕೇಂದ್ರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿವೆ. ಇದಕ್ಕೆ ಬಹುಪಾಲು ಅನುದಾನ ಕೇಂದ್ರ ಸರ್ಕಾರದ್ದೇ ಆಗಿದೆ. ಸುಮಾರು 20 ಇಲಾಖೆಗಳಲ್ಲಿ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿವೆ. 2022-23 ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗೆ ಬಿಡುಗಡೆಯಾದ ಅನುದಾನ ನೋಡಿದರೆ ನಿರಾಶೆಯಾಗುತ್ತದೆ.

12 ಯೋಜನೆಗಳಿಗೆ ಅನುದಾನವಿಲ್ಲ: ರಾಜ್ಯದಲ್ಲಿ ಸುಮಾರು 20 ವಿವಿಧ ಇಲಾಖೆಗಳಡಿ ಕೇಂದ್ರ ಪುರಸ್ಕೃತ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಅದಕ್ಕಾಗಿ ಕೇಂದ್ರ 19,357.34 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಆದರೆ ಇದರಲ್ಲಿ ಬಹುತೇಕ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಸಾಂಖ್ಯಿಕ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಮೊದಲ ತ್ರೈಮಾಸಿಕದಲ್ಲಿ 12 ಇಲಾಖೆಗಳಲ್ಲಿನ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ.

ಮೊದಲ ತ್ರೈಮಾಸಿಕದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೇವಲ 2,629.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ತನ್ನ ಪಾಲಿನ ಅನುದಾನದಲ್ಲಿ 3,417.66 ಕೋಟಿ ರೂ. ಬಿಡುಗಡೆ ಮಾಡಿದೆ.

ಯಾವೆಲ್ಲಾ ಇಲಾಖೆಗಳಿಗೆ ಶೂನ್ಯ ಅನುದಾನ?: ಮೊದಲ ತ್ರೈಮಾಸಿಕದಲ್ಲಿ ಒಟ್ಟು 12 ವಿವಿಧ ಇಲಾಖೆಗಳಲ್ಲಿನ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದ ತನ್ನ ಪಾಲಿನ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಕಂದಾಯ, ನಗರಾಭಿವೃದ್ಧಿ, ವಸತಿ, ಕೃಷಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಜಲಸಂಪನ್ಮೂಲ, ಅರಣ್ಯ, ರೇಷ್ಮೆ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿನ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದಿಂದ ಬಿಡಿಗಾಸು ಅನುದಾನ ಬಿಡುಗಡೆಯಾಗಿಲ್ಲ.

ಪ್ರಮುಖವಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಕೃಷಿ ಯಾಂತ್ರಿಕತೆ ಅಭಿಯಾನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಪೋಷಣ ಅಭಿಯಾನ, ಮಾತೃ ವಂದನಾ ಸೇರಿದಂತೆ ಕೆಲ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗದೆ ಪ್ರಗತಿ ಕುಂಠಿತವಾಗಿದೆ ಎಂದು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾವ ಇಲಾಖೆಗಳಿಗೆ ಅನುದಾನ ಬಿಡುಗಡೆ?: ಮೊದಲ ತ್ರೈಮಾಸಿಕದಲ್ಲಿ ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿನ ಕೇಂದ್ರ ಪುರಸ್ಕೃತ ಯೋಜನೆಗೆ 2,322.17 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಯೋಜನೆಗೆ ಕೇಂದ್ರ ಸರ್ಕಾರ 128 ಕೋಟಿ ರೂ. ಬಿಡಗಡೆ ಮಾಡಿದೆ. ಅಲ್ಪಸಂಖ್ಯಾತ ಇಲಾಖೆಯಲ್ಲಿನ ಯೋಜನೆಗೆ 75 ಕೋಟಿ ರೂ. ಬಿಡುಗಡೆ ಮಾಡಿದೆ. ಎಸ್​ಟಿ ಕಲ್ಯಾಣ ಇಲಾಖೆಗೆ 21.40 ಕೋಟಿ ರೂ., ಕೌಶಲ್ಯಾಭಿವೃದ್ಧಿ ಯೋಜನೆಗೆ 54.30 ಕೋಟಿ ರೂ. ಬಿಡುಗಡೆ ಮಾಡಿದೆ. ಮೀನುಗಾರಿಕೆ ಇಲಾಖೆಯಲ್ಲಿನ ಕೇಂದ್ರ ಪುರಸ್ಕೃತ ಯೋಜನೆಗೆ ಕೇಂದ್ರ ಸರ್ಕಾರ 24.16 ಕೋಟಿ ರೂ. ಬಿಡುಗಡೆ ಮಾಡಿದೆ. ಒಟ್ಟು ಹಂಚಿಕೆ ಎದುರು ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಮೊದಲ ತ್ರೈಮಾಸಿಕದಲ್ಲಿ ಕೇವಲ ಶೇ.14.25 ಮಾತ್ರ ಪ್ರಗತಿ ಕಂಡಿದೆ.

ಇದನ್ನೂ ಓದಿ: ಆರಾಧನಾ ಯೋಜನೆ ಕಾರ್ಯಕ್ರಮಗಳಿಗಾಗಿ 49.74 ಕೋಟಿ ರೂ. ಅನುದಾನ ಬಿಡುಗಡೆ

Last Updated : Aug 14, 2022, 2:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.