ETV Bharat / city

ಬೆಂಗಳೂರು: ಹೆಂಡ್ತಿ ಕೊಲ್ಲಲು ಬಂದು ನಶೆಯಲ್ಲಿ ಅತ್ತೆಗೆ ಹೊಡೆದು ಕೊಂದ!

author img

By

Published : Jul 19, 2022, 11:21 AM IST

Updated : Jul 19, 2022, 1:44 PM IST

ತನ್ನ ಅತ್ತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ನನ್ನ ಹೆಂಡತಿಯನ್ನು ಕೊಲ್ಲುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕುಡಿದ ಮತ್ತಿನಲ್ಲಿ ಯಾರು ಅನ್ನೋದೇ ಗೊತ್ತಾಗಿಲ್ಲ. ಹೆಂಡತಿ ಅಂತಾ ಅತ್ತೆಗೆ ಹೊಡೆದುಬಿಟ್ಟೆ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.

Bengaluru murder
ಬೆಂಗಳೂರು ಕೊಲೆ

ಬೆಂಗಳೂರು: ಗಂಡ-ಹೆಂಡತಿ ಜಗಳದಲ್ಲಿ ಅತ್ತೆ ಬಲಿಯಾಗಿದ್ದಾರೆ. ಕುಡಿದ ಅಮಲಿನಲ್ಲಿ ಅಳಿಯನೋರ್ವ ಹೆಣ್ಣು ಕೊಟ್ಟ ಅತ್ತೆಯನ್ನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿ ನಾಗರಾಜ್​ನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಮಾರತ್ ಹಳ್ಳಿಯ ಸಂಜಯನಗರ ನಿವಾಸಿ ಸೌಭಾಗ್ಯ ಕೊಲೆಯಾದವರು.

ಕಳೆದ‌ 6 ವರ್ಷದ ಹಿಂದೆ ನಾಗರಾಜ(35) ಮತ್ತು ಭವ್ಯಶ್ರೀ ಮದುವೆಯಾಗಿತ್ತು.‌ ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ 5 ವರ್ಷದ ಮಗುವಿದೆ. ವೃತ್ತಿಯಲ್ಲಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ ಕುಡಿತದ ಚಟಕ್ಕೆ ಬಿದ್ದಿದ್ದ. ಹಾಗಾಗಿ ಆಗಾಗ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ಗಂಡನ ಕಾಟ ತಾಳಲಾರದೆ ಮೂರು ವರ್ಷಗಳಿಂದ ಸಂಜಯನಗರ ತಾಯಿ ಮನೆಗೆ ಭವಶ್ರೀ ಬಂದಿದ್ದಳು. ವಿಚ್ಛೇದನಕ್ಕಾಗಿ ತಯಾರಿ ನಡೆಯುತ್ತಿತ್ತು. ಈ ನಡುವೆ ಕುಡಿದ ಅಮಲಿನಲ್ಲಿದ್ದ ನಾಗರಾಜ ಪತ್ನಿ ಇದ್ದ ಮನೆಗೆ ಜುಲೈ 12ರಂದು ಆಗಮಿಸಿ ಗಲಾಟೆ ಮಾಡಿದ್ದ. ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸಿಕೊಡುವಂತೆ ಒತ್ತಾಯಿಸಿದ್ದ. ಈ ವೇಳೆ ಅತ್ತೆ ಸೌಭಾಗ್ಯ ಬುದ್ಧಿ ಹೇಳಿ ಕಳಿಸಿದ್ದರು.

ಇದರಿಂದ ಅಸಮಾಧಾನಗೊಂಡಿದ್ದ ನಾಗರಾಜ್, ಅತ್ತೆಗೆ ಬುದ್ಧಿ ಕಲಿಸಲು ತೀರ್ಮಾನಿಸಿದ್ದ. ಮತ್ತೆ ಕಂಠಪೂರ್ತಿ ಕುಡಿದು ಜುಲೈ 13 ರಂದು ಸಂಜೆ ಸುತ್ತಿಗೆ ತೆಗೆದುಕೊಂಡು ಸಂಜಯನಗರದಲ್ಲಿ ಸೊಪ್ಪು ವ್ಯಾಪಾರ ಮಾಡುತ್ತಿದ್ದ ಅತ್ತೆಗೆ ಸುತ್ತಿಗೆಯಿಂದ ಐದಾರು ಹೊಡೆದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಅತ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.

ಘಟನೆ ಸಂಬಂಧ ಹೆಚ್ಎಎಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿ ನಾಗರಾಜ್​ನನ್ನ ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, "ನನ್ನ ಅತ್ತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ನನ್ನ ಹೆಂಡತಿಯನ್ನು ಕೊಲ್ಲುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕುಡಿದ ಮತ್ತಿನಲ್ಲಿ ಯಾರು ಅನ್ನೋದೆ ಗೊತ್ತಾಗಿಲ್ಲ. ಹೆಂಡತಿ ಅಂತಾ ಅತ್ತೆಗೆ ಹೊಡೆದುಬಿಟ್ಟೆ" ಎಂದು ಆರೋಪಿ ಅಳಲು ತೋಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾದ ಪತಿ ಪರಲೋಕಕ್ಕೆ ಕಳುಹಿಸಿದ ಪತ್ನಿ!

Last Updated : Jul 19, 2022, 1:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.