ETV Bharat / city

ವಿಧಾನಪರಿಷತ್ ಚುನಾವಣೆ: ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿಗಳು

author img

By

Published : May 24, 2022, 4:06 PM IST

ವಿಧಾನಪರಿಷತ್​ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಎಂ. ನಾಗರಾಜ್ ಯಾದವ್ ಹಾಗೂ ಕೆ. ಅಬ್ದುಲ್ ಜಬ್ಬಾರ್ ಅವರು ಇಂದು ನಾಮಪತ್ರ ಸಲ್ಲಿಸಿದರು.

mlc-election-nomination
ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿಗಳು

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಎಂ. ನಾಗರಾಜ್ ಯಾದವ್ ಹಾಗೂ ಕೆ. ಅಬ್ದುಲ್ ಜಬ್ಬಾರ್ ಅವರು ಇಂದು ನಾಮಪತ್ರ ಸಲ್ಲಿಸಿದರು. ವಿಧಾನಸೌಧದಲ್ಲಿ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಅಭ್ಯರ್ಥಿಗಳಿಬ್ಬರು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ‌ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಮುಖಂಡರಾದ ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕರ್ತರಿಗೆ ಟಿಕೆಟ್​: ಈ ವೇಳೆ, ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್​ನಿಂದ ಇಬ್ಬರು ಕಾರ್ಯಕರ್ತರಿಗೆ ಟಿಕೆಟ್​ ಕೊಟ್ಟಿದ್ದೇವೆ. ಇನ್ನೂ ಹಲವು ಕಾರ್ಯಕರ್ತರು ಇದ್ದರು. ಅವರಿಗೆ ಅಸಮಾಧಾನ ಆಗಿದೆ. ಕೇವಲ ಎರಡೇ ಸ್ಥಾನ ನಮಗೆ ಇತ್ತು. ಹಾಗಾಗಿ ಪಕ್ಷ ಇವರನ್ನು ಗುರುತಿಸಿದೆ. ಮುಂದೆ ಕಾರ್ಯಕರ್ತರ ಗುರುತಿಸುವ ಕೆಲಸ ಪಕ್ಷ ಮಾಡುತ್ತದೆ ಎಂದು ಹೇಳಿದರು.

ಮಹಿಳೆಯರಿಗೆ ಟಿಕೆಟ್ ಕೈತಪ್ಪಿದೆ. ಎಸ್​ಸಿ ಮತ್ತು ಲಿಂಗಾಯತ ಸಮುದಾಯಕ್ಕೆ ಕೂಡ ಟಿಕೆಟ್ ತಪ್ಪಿದೆ. ಎರಡು ಸ್ಥಾನ ಇದ್ದ ಕಾರಣದಿಂದ ಸ್ವಲ್ಪ ಹಿನ್ನಡೆ ಆಗಿದೆ. ಮುಂದೆ ಎಲ್ಲ ಸರಿ ಮಾಡೋಣ ಎಂದು ಭರವಸೆ ನೀಡಿದರು.

ಅವಿರೋಧ ಆಯ್ಕೆ ಆಗ್ತಾರೆ: ಮಾಜಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿದೆ. ನಾಗರಾಜ್ ಯಾದವ್ ಅವರ ನಾಮಪತ್ರಕ್ಕೆ ಡಿ.ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೂಚಕರಾಗಿದ್ದಾರೆ. ಅಬ್ದುಲ್‌ ಜಬ್ಬಾರ್ ಅವರ ನಾಮಪತ್ರಕ್ಕೆ ನಾನು‌ ಹಾಗೂ ದೇಶಪಾಂಡೆ ಸೂಚಕರಾಗಿದ್ದೇವೆ. ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗುತ್ತಾರೆ ಎಂಬ ವಿಶ್ವಾಸ ಇದೆ. ಚುನಾವಣೆ ನಡೆದರೆ ಅವಶ್ಯಕತೆಗಿಂತಲೂ ಜಾಸ್ತಿ ಮತ ಪಡೆಯುತ್ತಾರೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ ಬಳಿಕ ಅಭ್ಯರ್ಥಿ ಅಬ್ದುಲ್ ಜಬ್ಬಾರ್ ಮಾತನಾಡಿ, ಜಮೀರ್ ಅಹಮದ್ ಹಾಗೂ ನನ್ನ ನಡುವೆ ಯಾವುದೇ ಅಸಮಾಧಾನ ಇಲ್ಲ. ಜಮೀರ್ ಅವರ ಜೊತೆ ಬೆಳಗ್ಗೆ ಮಾತನಾಡಿದ್ದೇನೆ. ಅವರು ಬೆಂಗಳೂರಿನಲ್ಲಿ ಇಲ್ಲ. ಹಾಗಾಗಿ ನಾಮಪತ್ರ ಸಲ್ಲಿಸುವ ವೇಳೆ ಬಂದಿಲ್ಲ. ಬೆಂಗಳೂರಿಗೆ ಬಂದ ಬಳಿಕ ಅವರನ್ನು ಭೇಟಿ‌ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಮತ್ತೊಬ್ಬ ಅಭ್ಯರ್ಥಿ ನಾಗರಾಜ್ ಯಾದವ್ ಮಾತನಾಡಿ, ನಾನು ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದ್ದೆ. ಬಿಎಂಟಿಸಿಗೂ ಅವಕಾಶ ಕೊಟ್ಟಿದ್ದರು. ಪಕ್ಷ ನನಗೆ ಬೇರೆ ಬೇರೆ ಜವಾಬ್ದಾರಿ ಕೊಟ್ಟಿದೆ. ಆ ಜವಾಬ್ದಾರಿಯನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದರು.

ಓದಿ: ಕೊನೆ ಕ್ಷಣದಲ್ಲಿ ಸಿಕ್ಕ ಟಿಕೆಟ್ : ಅಭ್ಯರ್ಥಿಗೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.