ETV Bharat / city

ಬಗರ್​ಹುಕುಂ ಸಾಗುವಳಿ ಭೂಮಿ ರೈತರ ಒಡೆತನಕ್ಕೆ: ಸಚಿವ ಆರ್​. ಅಶೋಕ್​

author img

By

Published : May 4, 2022, 10:50 PM IST

ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಯ ವಶಕ್ಕೆ ಬರುವ 6 ಲಕ್ಷ ಹೆಕ್ಟೇರ್ ಭೂಮಿಯನ್ನು ಅಗತ್ಯಕ್ಕೆ ಬೇಕಾದಷ್ಟು ಹೊರತುಪಡಿಸಿ ಉಳಿದ 5 ಲಕ್ಷ ಹೆಕ್ಟೇರ್​ಗೂ ಹೆಚ್ಚಿನ ಭೂಮಿಯನ್ನು ರೈತರಿಗೆ ಹಂಚಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

minister-r-ashok
ಸಚಿವ ಆರ್​. ಅಶೋಕ್​

ಬೆಂಗಳೂರು: ತನ್ನ ವಶದಲ್ಲಿರುವ 6 ಲಕ್ಷ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆ ಕಂದಾಯ ಇಲಾಖೆಗೆ ಹಿಂತಿರುಗಿಸಲಿದ್ದು, ಈ ಹಿನ್ನೆಲೆಯಲ್ಲಿ ತನ್ನ ಅಗತ್ಯಕ್ಕೆ ಬೇಕಾದ ಭೂಮಿಯನ್ನು ಹೊರತುಪಡಿಸಿ ಉಳಿದ 5 ಲಕ್ಷ ಹೆಕ್ಟೇರ್ ಗೂ ಹೆಚ್ಚಿನ ಭೂಮಿಯನ್ನು ರೈತರಿಗೆ ಹಂಚಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಮೈಸೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ತೆರೆ ಬೀಳಲಿದೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್.ಅಶೋಕ್, ಅರಣ್ಯ ಇಲಾಖೆಯ ವಶದಲ್ಲಿ 6 ಲಕ್ಷ ಹೆಕ್ಟೇರ್​ನಷ್ಟು ಭೂಮಿ ಡೀಮ್ಡ್ ಅರಣ್ಯ ಪ್ರದೇಶವೆಂದು ಗುರುತಿಸಲಾಗಿದ್ದು, ಮೂಲತಃ ಇದು ಕಂದಾಯ ಇಲಾಖೆಗೆ ಸೇರಿದೆ. ಈಗ ಈ ಭೂಮಿಯನ್ನು ಅರಣ್ಯ ಇಲಾಖೆ ಕಂದಾಯ ಇಲಾಖೆಗೆ ಹಸ್ತಾಂತರಿಸಲಿದ್ದು, ಭೂಮಿಯನ್ನು ರೈತರಿಗೆ ಹಂಚಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆಗೆ ಮರಳಿ ಬರಲಿರುವ ಭೂಮಿಯ ಪೈಕಿ ಎಷ್ಟು ಪ್ರಮಾಣದ ಭೂಮಿ ಸರ್ಕಾರದ ಅಗತ್ಯಕ್ಕೆ ಬೇಕು ಎಂದು ಗುರುತಿಸಲಾಗುತ್ತಿದ್ದು, ಆಸ್ಪತ್ರೆಯಿಂದ ಹಿಡಿದು ಹಲವು ಸಾರ್ವಜನಿಕ ಕೆಲಸಗಳಿಗಾಗಿ ಇದು ಬಳಕೆಯಾಗಲಿದೆ. ಉಳಿದಂತೆ ಐದು ಲಕ್ಷ ಹೆಕ್ಟೇರ್​ನಷ್ಟು ಭೂಮಿಯನ್ನು ರೈತರಿಗೆ ಹಂಚಲಾಗುವುದು. ಇದರಿಂದಾಗಿ ದಶಕಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ಹೇಳಿದರು.

ಈ ಮಧ್ಯೆ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ 90 ಸಾವಿರ ಎಕರೆಗೂ ಹೆಚ್ಚು ಭೂಮಿ ಒತ್ತುವರಿಯಾಗಿದ್ದು, ಹೀಗೆ ಒತ್ತುವರಿಯಾದ ಜಮೀನನ್ನು ಒತ್ತುವರಿದಾರರಿಗೇ ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 12 ಸಾವಿರ ಎಕರೆ ಭೂಮಿ, ಹಾಸನದಲ್ಲಿ 30 ಸಾವಿರ ಎಕರೆ ಭೂಮಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 45 ಸಾವಿರ ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ವಿವರ ನೀಡಿದರು.

ಒತ್ತುವರಿಯಾದ ಭೂಮಿಯಲ್ಲಿ ಕಾಫಿ, ಏಲಕ್ಕಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಈ ಭೂಮಿಯನ್ನು 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಒತ್ತುವರಿದಾರರಿಗೇ ನೀಡಲಾಗುವುದು ಎಂದು ಹೇಳಿದರು.

ಓದಿ: ಪಿಎಸ್​ಐ ಪರೀಕ್ಷಾ ಹಗರಣದಲ್ಲಿ ಕಾಂಗ್ರೆಸ್​ನಿಂದ ಅಶ್ವತ್ಥ್​ ನಾರಾಯಣ ಟಾರ್ಗೆಟ್​: ಪ್ರತಾಪ್ ಸಿಂಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.