ETV Bharat / city

ಗೋ ಹತ್ಯೆ ನಿಷೇಧ.. ಕಾರ್ಯಕರ್ತರೊಂದಿಗೆ ಸಂಭ್ರಮಿಸಿದ ಸಚಿವ ಬೈರತಿ ಬಸವರಾಜ್‌

author img

By

Published : Dec 10, 2020, 3:25 PM IST

ಶಕ್ತಿಯನ್ನು ಕಳೆದುಕೊಳ್ಳುವ ಹಾಗೂ ವಯಸ್ಸಾದ ಹಸುಗಳ ರಕ್ಷಣೆಗಾಗಿ ಸರ್ಕಾರದಿಂದಲೇ ಗೋ ಶಾಲೆ ತೆರೆದು ಅದರ ನಿರ್ವಹಣೆ ಮಾಡುವ ಚಿಂತನೆ ನಡೆಸಲಾಗುತ್ತಿದೆ..

ಸಂಭ್ರಮಾಚರಣೆ
ಸಂಭ್ರಮಾಚರಣೆ

ಕೆಆರ್‌ಪುರ (ಬೆಂಗಳೂರು) : ಕರ್ನಾಟಕ ರಾಜ್ಯ ಸರ್ಕಾರ ವಿಧಾನ ಮಂಡಲ ಅಧಿವೇಶನದಲ್ಲಿ ಗೋಹತ್ಯೆ‌ ನಿಷೇಧ ಕಾಯ್ದೆ ಜಾರಿಗೆ ತಂದ ಹಿನ್ನೆಲೆ‌ ಬೆಂಗಳೂರು ಉತ್ತರ ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಾಕ್ಸರ್ ನಾಗರಾಜ್ ನೇತೃತ್ವದಲ್ಲಿ ಕೆಆರ್‌ಪುರ ವಿಧಾನಸಭಾ ಕ್ಷೇತ್ರದ ರಾಮಮೂರ್ತಿನಗರದ ಯರ್ಯನಪಾಳ್ಯದಲ್ಲಿ ಗೋವುಗಳಿಗೆ ಪೂಜೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಗೋವುಗಳಿಗೆ ವಿಶೇಷ ಪೂಜೆ ಮಾಡಿ, ಬಾಳೆ ಹಣ್ಣು, ಬೆಲ್ಲ, ಅವಲಕ್ಕಿ ತಿನ್ನಿಸುವ ಮೂಲಕ ಸಂಭ್ರಮಾಚರಣೆಗೆ ಚಾಲನೆ ನೀಡಿದರು.

ಸಚಿವ ಬೈರತಿ ಬಸವರಾಜ್‌ ಗೋವುಗಳಿಗೆ ಪೂಜಿಸಿ ಸಂಭ್ರಮಾಚರಣೆ

ಬಳಿಕ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಇಡೀ ಭಾರತಕ್ಕೆ ಹೆಮ್ಮೆ ತರುವ ವಿಷಯ, ಹಸುಗಳು ದೇವರ ಸಮಾನ, ಮನೆಗೊಂದು ಹಸು ಸಾಕಿದರೆ ಆ ಮನೆಯ ನಿರ್ವಹಣೆಯ ಜವಾಬ್ದಾರಿಯ ಹೊರೆ ಕಡಿಮೆ ಮಾಡುತ್ತೆ. ಆದ್ದರಿಂದ ಇಂತಹ ಹಸುಗಳ‌ ರಕ್ಷಣೆಗಾಗಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ತಂದಿರುವುದಕ್ಕೆ ನಮ್ಮ ಕ್ಷೇತ್ರದ ಪ್ರತಿಯೊಂದು ವಾರ್ಡ್​ನಲ್ಲಿ ಪೂಜೆ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಶಕ್ತಿಯನ್ನು ಕಳೆದುಕೊಳ್ಳುವ ಹಾಗೂ ವಯಸ್ಸಾದ ಹಸುಗಳ ರಕ್ಷಣೆಗಾಗಿ ಸರ್ಕಾರದಿಂದಲೇ ಗೋ ಶಾಲೆ ತೆರೆದು ಅದರ ನಿರ್ವಹಣೆ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದರು.

ಎಸ್‌ಟಿ ಮೋರ್ಚಾ ಉತ್ತರ ಜಿಲ್ಲಾಧ್ಯಕ್ಷ ಬಾಕ್ಸರ್ ನಾಗರಾಜ್ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವುದು ರಾಜ್ಯದಲ್ಲಿ ಹಬ್ಬದ ರೀತಿ ಆಚರಣೆ ಮಾಡಲಾಗುತ್ತಿದೆ. ಯಾವುದೇ ಸರ್ಕಾರಗಳು ಬಂದರೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರಲಿಲ್ಲ, ಯಡಿಯೂರಪ್ಪನವರ ಸರ್ಕಾರ ಈ ಕಾಯ್ದೆ ತರುವ ಮೂಲಕ ಕರ್ನಾಟಕ ಜನತೆಯ ಮನ ಗೆದ್ದಿದ್ದಾರೆ. ಆದರಿಂದ ಕರ್ನಾಟಕ‌ ಸರ್ಕಾರಕ್ಕೆ ಹಾಗೂ ಸಚಿವರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ತಿಳಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.