ETV Bharat / city

ಮೇಕೆದಾಟು ವಿಚಾರ.. ಕೇಂದ್ರದಿಂದ ಕೂಡಲೇ ಅನುಮತಿ ಪಡೆಯುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

author img

By

Published : Mar 21, 2022, 6:13 PM IST

ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರುದ್ಧ ನಿರ್ಣಯ ಕೈಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ರಾಜ್ಯದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದಿಂದ ಕ್ಲಿಯರೆನ್ಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.

mekedatu-scheme-tamilnadu-and-karnataka-conflict
ಮೇಕೆದಾಟು ವಿಚಾರದಲ್ಲಿ ಬಿಜೆಪಿಯಿಂದ ಓಟ್ ಬ್ಯಾಂಕ್ ನಾಟಕ, ಕೂಡಲೇ ಕೇಂದ್ರದಿಂದ ಅನುಮತಿ ಪಡೆಯಲು ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರುದ್ಧ ನಿರ್ಣಯ ಕೈಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಪಾಲನೆ ಮಾಡಬೇಕು ಜೊತೆಗೆ ರಾಜ್ಯದ ಬಿಜೆಪಿ ನಾಯಕರು ಈ ಕೂಡಲೇ ಕೇಂದ್ರದಿಂದ ಕ್ಲಿಯರೆನ್ಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 16/02/2018 ರಲ್ಲಿ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿದೆ. ಒಂದು ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ನೀರು ತಮಿಳುನಾಡಿಗೆ ಬಿಡುವಂತೆ ಆದೇಶ ಮಾಡಿದೆ. ಇದರ ನಿರ್ವಹಣೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಸ್ತಿತ್ವದಲ್ಲಿದೆ. ಇಷ್ಟು ಪ್ರಮಾಣದ ನೀರು ಪಡೆಯುವುದು ಮಾತ್ರ ತಮಿಳುನಾಡಿಗಿರುವ ಹಕ್ಕು. ಈ ತೀರ್ಪು ಬಂದ ಮೇಲೆ ಸುಮಾರು 400 ಟಿ.ಎಂ.ಸಿ ಗೂ ಅಧಿಕ ನೀರು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿದು ಹೋಗಿದೆ. ಹಾಗಾಗಿ ಕೇಂದ್ರ ಸರ್ಕಾರ ಈ ಕೂಡಲೇ ಕ್ಲಿಯರೆನ್ಸ್ ನೀಡಬೇಕು ಎಂದು ಹೇಳಿದ್ದಾರೆ.

ನಮ್ಮ ಪಾಲಿನ ನೀರು, ವ್ಯರ್ಥವಾಗಿ ತಮಿಳುನಾಡಿಗೆ ಹೋಗುತ್ತಿದೆ. ‌ತಮಿಳುನಾಡು ಮತ್ತು ಕರ್ನಾಟಕದ ನಡುವೆ ವಿವಾದವೇ ಇಲ್ಲ. ಈ ವಿಚಾರ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥವಾಗಿದೆ. ಕೇಂದ್ರ ಸರ್ಕಾರ ಇಚ್ಛಾಶಕ್ತಿ ಮತ್ತು ಒಕ್ಕೂಟ ಧರ್ಮದ ಪಾಲನೆ ಮಾಡಬೇಕು. ಬಹಳ ಹಿಂದೆಯೇ ಕ್ಲಿಯರೆನ್ಸ್ ನೀಡಬೇಕಿತ್ತು. ಅಂತೆಯೇ ಈ ಕೆಲಸ ಮಾಡಿ ಎಂದು ಮೊನ್ನೆ ಮುಖ್ಯಮಂತ್ರಿಗಳು ನಡೆಸಿದ ಸರ್ವ ಪಕ್ಷ ಸಭೆಯಲ್ಲಿ ಹೇಳಿದ್ದೇವೆ. ಅವರು ಕೂಡ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಜಾರಿಯಾಗಬಾರದು ಎಂದು ಧರಣಿ ಕುಳಿತಿದ್ದರು. ಬಿಜೆಪಿಯವರು ತಮ್ಮ ಮತ ಕ್ರೋಢೀಕರಣಕ್ಕಾಗಿ ಪರಿಸರ ಅನುಮತಿ ನೀಡದೆ ನಾಟಕವಾಡುತ್ತಿದ್ದಾರೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಈ ಬಗ್ಗೆ ಅನುಮತಿ ತೆಗೆದುಕೊಳ್ಳಲಿಲ್ಲ ಎಂದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂಬ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ಕ್ಯಾತೆ ತೆಗೆಯುತ್ತಿದೆ, ತಮಿಳುನಾಡಿನ ಕ್ಯಾತೆಗೆ ಸೊಪ್ಪು ಹಾಕುವ ಅವಶ್ಯಕತೆ ಇಲ್ಲ, ಕೇಂದ್ರಕ್ಕೆ ರಾಜಕೀಯ ಇಚ್ಛಾಶಕ್ತಿ ಇರಬೇಕು ಅಷ್ಟೆ. ಈ ಹಿಂದೆಯೇ ನಮಗೆ ಅನುಮತಿ ಕೊಡಬೇಕಿತ್ತು, ಆದರೆ ಕೊಟ್ಟಿಲ್ಲ. ಸಮಸ್ಯೆ ಜಟಿಲವಾಗುವ ಮೊದಲೇ ಅನುಮತಿ ಕೊಡಬೇಕು, ಈ ವಿಚಾರದಲ್ಲಿ ಬಿಜೆಪಿ ವೋಟ್ ಬ್ಯಾಂಕ್ ಕಾರಣಕ್ಕೆ ನಾಟಕವಾಡುತ್ತಿದೆ. ರಾಜ್ಯದ ಬಿಜೆಪಿ ನಾಯಕರು ಕೂಡಲೇ ಕೇಂದ್ರದಿಂದ ಕ್ಲಿಯರೆನ್ಸ್ ಪಡೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಓದಿ : ಉತ್ತರಾಖಂಡ್​ ಮುಖ್ಯಮಂತ್ರಿ ಆಯ್ಕೆ: ಚುನಾವಣೆಯಲ್ಲಿ ಸೋತರೂ ಪುಷ್ಕರ್​ಗೆ ಪಟ್ಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.