ETV Bharat / city

ಮೈಸೂರು ರೇಸ್ ಕ್ಲಬ್​​​ಗೆ ಸರ್ಕಾರಿ ಭೂಮಿ ಗುತ್ತಿಗೆ: ಆದೇಶ ಹಿಂಪಡೆಯಲು ಸರ್ಕಾರಕ್ಕೆ ಕೊನೆಯ ಅವಕಾಶ

author img

By

Published : Apr 7, 2021, 6:43 PM IST

ಮೈಸೂರಿನ ಕುರುಬರಹಳ್ಳಿಯಲ್ಲಿ 139 ಎಕರೆ ಸರ್ಕಾರಿ ಭೂಮಿಯನ್ನು 30 ವರ್ಷಗಳವರೆಗೆ ಅವೈಜ್ಞಾನಿಕವಾಗಿ ಗುತ್ತಿಗೆ ನೀಡಲಾಗಿದೆ ಎಂಬ ಆರೋಪದ ಅರ್ಜಿಯನ್ನು ಹೈಕೋರ್ಟ್​ ವಿಚಾರಣೆ ನಡೆಸಿದೆ.

Land Lease To Mysore Race Club: last chance to government to withdrawn order
ಮೈಸೂರು ರೇಸ್ ಕ್ಲಬ್​​​ಗೆ ಸರ್ಕಾರಿ ಭೂಮಿ ಗುತ್ತಿಗೆ : ಆದೇಶ ಹಿಂಪಡೆಯಲು ಸರ್ಕಾರಕ್ಕೆ ಕೊನೆಯ ಅವಕಾಶ

ಬೆಂಗಳೂರು: ಮೈಸೂರು ರೇಸ್ ಕ್ಲಬ್ ಲಿಮಿಟೆಡ್‌ಗೆ 139 ಎಕರೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡಿರುವ ಆದೇಶವನ್ನು ವಾಪಸ್ ಪಡೆಯುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಅಂತಿಮ ಅವಕಾಶ ನೀಡಿದೆ.

ರೇಸ್ ಕ್ಲಬ್​​​ಗೆ ಮೈಸೂರಿನ ಕುರುಬರಹಳ್ಳಿಯಲ್ಲಿ 139 ಎಕರೆ ಸರ್ಕಾರಿ ಭೂಮಿಯನ್ನು 30 ವರ್ಷಗಳವರೆಗೆ ಅವೈಜ್ಞಾನಿಕವಾಗಿ ಗುತ್ತಿಗೆ ನೀಡಲಾಗಿದೆ ಎಂದು ಆಕ್ಷೇಪಿಸಿ ವಕೀಲ ಉಮಾಪತಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಪೀಠಕ್ಕೆ ಮನವಿ ಮಾಡಿ, ರೇಸ್ ಕ್ಲಬ್ ಗುತ್ತಿಗೆ ನೀಡಿರುವ ಜಮೀನು ಹಿಂಪಡೆಯುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಈ ಕುರಿತು ಅಧಿಕೃತ ನಿರ್ಧಾರ ಕೈಗೊಳ್ಳಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದನ್ನೂ ಓದಿ: ವಿರೋಧದ ನಡುವೆ ಪ್ರೇಮ ವಿವಾಹ: ಹುಡುಗನ ಮನೆಗೆ ಬೆಂಕಿ ಹಚ್ಚಿದ ಯುವತಿ ಪೋಷಕರು!

ಇದಕ್ಕೆ ಆಕ್ಷೇಪಿಸಿದ ಪೀಠ, ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವುದಕ್ಕಾಗಿಯೇ ನ್ಯಾಯಾಲಯವು ಕಳೆದ ಬಾರಿ ಸರ್ಕಾರಕ್ಕೆ ಕಾಲಾವಾಶ ನೀಡಿತ್ತು. ಅದರಂತೆ ಇಂದು ಸರ್ಕಾರ ತನ್ನ ಅಂತಿಮ ತೀರ್ಮಾನ ತಿಳಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿತು. ಅಲ್ಲದೇ, ಜಮೀನು ಹಿಂಪಡೆಯುವ ಬಗ್ಗೆ ಸರ್ಕಾರ ಶೀಘ್ರವಾಗಿ ನಿರ್ಣಯ ತೆಗೆದುಕೊಳ್ಳಬೇಕು. ಅದಕ್ಕಾಗಿ ಕೊನೆಯ ಬಾರಿ ಕಾಲಾವಕಾಶ ನೀಡಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಏ.15ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ

ಮೈಸೂರಿನ ಕುರುಬರಹಳ್ಳಿಯ ಸರ್ವೇ ನಂ.5 ಮತ್ತು 74ರಲ್ಲಿನ 139 ಎಕರೆ 39 ಗುಂಟೆ ಸರ್ಕಾರಿ ಭೂಮಿಯನ್ನು ಮೈಸೂರು ರೇಸ್ ಕ್ಲಬ್ ಲಿಮಿಟೆಡ್‌ಗೆ 1970ರಲ್ಲಿ ಲೋಕೋಪಯೋಗಿ ಇಲಾಖೆ ಗುತ್ತಿಗೆ ನೀಡಿದೆ. ಆ ಗುತ್ತಿಗೆ ಅವಧಿ 2016ರಲ್ಲಿ ಮುಕ್ತಾಯವಾಗಿದ್ದು, 2046ರವರೆಗೆ ಗುತ್ತಿಗೆ ಮಂಜೂರು ಮಾಡಿ 2020ರ ಜನವರಿಯಲ್ಲಿ ಆದೇಶಿಸಿದೆ.

ಮುಖ್ಯವಾಗಿ ಕಂದಾಯ ಇಲಾಖೆ ಅಧೀನದಲ್ಲಿರುವ ಈ ಭೂಮಿಯನ್ನು ಅನಧಿಕೃತವಾಗಿ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಎಂಜಿನಿಯರ್ ಕ್ಲಬ್‌ಗೆ ಗುತ್ತಿಗೆ ಒಪ್ಪಂದ ಮಾಡಿಕೊಟ್ಟಿದ್ದಾರೆ. ಇದು ಕಾನೂನು ಬಾಹಿರ ಒಪ್ಪಂದವಾಗಿದ್ದು, ಸರ್ಕಾರಿ ಭೂಮಿ ದುರುಪಯೋಗವಾಗುವುದನ್ನು ತಡೆಯಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.