ETV Bharat / city

ಜನಸಂಖ್ಯೆ ನಿಯಂತ್ರಣದಲ್ಲಿ ರಾಜ್ಯ ಮುಂಚೂಣಿ : ಜನಸಂಖ್ಯೆ  ಕುಸಿತದ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ ಆತಂಕ!

author img

By

Published : Jul 11, 2022, 7:41 PM IST

ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣ ಭಾರತ ರಾಜ್ಯಗಳು ಮುಂಚೂಣಿಯಲ್ಲಿವೆ. ಅದರಲ್ಲೂ ಕರ್ನಾಟಕ ಅಗ್ರಗಣ್ಯ ರಾಜ್ಯವಾಗಿದೆ.

State front line in population control
ಜನಸಂಖ್ಯೆ ನಿಯಂತ್ರಣದಲ್ಲಿ ರಾಜ್ಯ ಮುಂಚೂಣಿ

ಬೆಂಗಳೂರು : ಇಂದು ವಿಶ್ವ ಜನಸಂಖ್ಯಾ ದಿನ. ಜನಸಂಖ್ಯೆ ಸಮಸ್ಯೆ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 11ರಂದು ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಇತ್ತ ಜನಸಂಖ್ಯೆ ನಿಯಂತ್ರಣದಲ್ಲಿ ಕರ್ನಾಟಕ ಅಗ್ರಗಣ್ಯ ರಾಜ್ಯವಾಗಿದೆ.‌ ಇದರ ಜೊತೆಗೆ ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಜನಸಂಖ್ಯಾ ನೀತಿ ಜಾರಿಗೆ ತರುವ ಒತ್ತಾಯ ಕೇಳಿ ಬರುತ್ತಿದೆ.

ನಾವಿಬ್ಬರು ನಮಗಿಬ್ಬರು ಎಂಬ ಘೋಷ ವಾಕ್ಯದೊಂದಿಗೆ ಸರ್ಕಾರ ಕುಟುಂಬ ಯೋಜನೆಯ ಬಗ್ಗೆ ಜನಜಾಗೃತಿ ಮೂಡಿಸುತ್ತಲೇ ಬರುತ್ತಿದೆ. ಆ ಮೂಲಕ ದೇಶದ ಅತಿದೊಡ್ಡ ಸಮಸ್ಯೆಯಾದ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವುದು ಮೂಲ ಉದ್ದೇಶವಾಗಿದೆ. 1976ರ ತುರ್ತು ಪರಿಸ್ಥಿತಿ ಸಂದರ್ಭ ಸಂವಿಧಾನದ 42ನೇ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯಲ್ಲಿ ಜನಸಂಖ್ಯೆ ನಿಯಂತ್ರಣ ಹಾಗೂ ಫ್ಯಾಮಿಲಿ ಪ್ಲಾನಿಂಗ್​​ ಸೇರಿಸಲಾಯಿತು. ಅಂದಿನ ಸರ್ಕಾರ ಜನಸಂಖ್ಯೆ ವೃದ್ಧಿಗೆ ಕಡಿವಾಣ ಹಾಕುವ ಅಗತ್ಯತೆ ಮನಗಂಡು ಸಂವಿಧಾನದ 42ನೇ ತಿದ್ದುಪಡಿ ತಂದಿತ್ತು. ಅಲ್ಲಿಂದೀಚೆಗೆ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಗಂಭೀರವಾಗಿ ಅಳವಡಿಸಲಾಗುತ್ತಿದೆ.

ಜನಸಂಖ್ಯೆ ನಿಯಂತ್ರಣದಲ್ಲಿ ಕರ್ನಾಟಕ ಅಗ್ರಗಣ್ಯ: ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸರಾಸರಿ ಹೆರುವ ಮಕ್ಕಳ ಸಂಖ್ಯೆಯನ್ನು ಒಟ್ಟು ಫಲವತ್ತತೆ ದರ ಎಂದು ಕರೆಯಲಾಗುತ್ತದೆ. ದೇಶದ ಫಲವತ್ತತೆ ದರ 2.1ರಷ್ಟುಇರಬೇಕು ಎಂದು ಕೇಂದ್ರ ಸರ್ಕಾರ ಬಹಳ ಹಿಂದೆ ಗುರಿ ನಿಗದಿಪಡಿಸಿತ್ತು. ಕರ್ನಾಟಕದಲ್ಲಿ ಇದು 1.7 ರಷ್ಟಿದೆ.

ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆಯಲ್ಲಿ ಕರ್ನಾಟಕ ಜನಸಂಖ್ಯೆ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದೆ. 1992-93ರಲ್ಲಿ ದೇಶದ ಫಲವತ್ತತೆ ದರ (Total Fertility Rate) 3.4 ಇದ್ದರೆ ರಾಜ್ಯದ ಟಿಎಫ್ಆರ್ 2.65 ಇತ್ತು. 1998-99ರಲ್ಲಿ ದೇಶದ ಫಲವತ್ತತೆ ದರ 2.85 ಇದ್ದರೆ, ರಾಜ್ಯದ ದರ 2.13 ಇತ್ತು. 2005-06ರಲ್ಲಿ ರಾಜ್ಯದ ಫಲವತ್ತತೆ ದರ 2.1ಗೆ ಇಳಿಕೆ ಕಂಡಿತು. 2015-16ರಲ್ಲಿ ಇದು ಮತ್ತೆ 1.8ಕ್ಕೆ ಇಳಿಕೆ ಕಂಡಿತು. 2019-21ರ ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ-5 ವರದಿಯಂತೆ ರಾಜ್ಯ ಫಲವತ್ತತೆ ದರ 1.7ಕ್ಕೆ ಇಳಿಕೆಯಾಗಿದೆ.

ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ-5 ರಂತೆ ದಕ್ಷಿಣ ರಾಜ್ಯಗಳಲ್ಲಿ ತಮಿಳುನಾಡಿನ ಫಲವತ್ತತೆ ದರ 1.8, ಕೇರಳ 1.8, ಆಂಧ್ರಪ್ರದೇಶ 1.7, ತೆಲಂಗಾಣ 1.8 ಮತ್ತು ಮಹಾರಾಷ್ಟ್ರದಲ್ಲಿ 1.7 ಇದೆ.

ಯುಪಿಯಂತೆ ಇಲ್ಲೂ ಜನಸಂಖ್ಯಾ ನಿಯಂತ್ರಣ ಕಾನೂನು?: ಯುಪಿ ಮಾದರಿಯಲ್ಲಿ ರಾಜ್ಯದಲ್ಲೂ ಜನಸಂಖ್ಯೆ ನಿಯಂತ್ರಣ ನೀತಿ ಜಾರಿಗೆ ತರಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆದರಲ್ಲೂ ಬಿಜೆಪಿ ನಾಯಕರೇ ಜನಸಂಖ್ಯೆ ನಿಯಂತ್ರಣ ನೀತಿ ಜಾರಿಗೆ ತರುವ ಬಗ್ಗೆ ಒತ್ತಾಯಿಸುತ್ತಿದ್ದಾರೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಉತ್ತರ ಪ್ರದೇಶ ಮುಖ್ಯ ಮುಂತ್ರಿ ಯೋಗಿ ಆದಿತ್ಯನಾಥ್ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಜಾರಿಗೆ ತಂದಿದ್ದರು. 2021-2030ರ ವರೆಗೆ ಜಾರಿಯಲ್ಲಿರುವ ಈ ನೀತಿ ಮೂಲಕ ಜನನ ಪ್ರಮಾಣವನ್ನು 2.1 ರಿಂದ 1.9ಕ್ಕೆ ಕಡಿಮೆಗೊಳಿಸುವುದು ಉದ್ದೇಶವಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾನೂನು ತರುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ ಸೇರಿ ಹಲವು ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ.

ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಆಕ್ಷೇಪ: ರಾಜ್ಯದಲ್ಲಿ ಯುಪಿ ಮಾದರಿಯಂತೆ ಜನಸಂಖ್ಯೆ ನಿಯಂತ್ರಣ ಕಾನೂನು ತರಲು ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯ ಈಗಾಗಲೇ ಜನಸಂಖ್ಯೆ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದೆ. ರಾಷ್ಟ್ರೀಯ ಫಲವತ್ತತೆ ದರಕ್ಕಿಂತ ಕಡಿಮೆ ದರ ರಾಜ್ಯದ್ದಾಗಿದೆ. ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳಿಂದ ಜನನ ಪ್ರಮಾಣ ವರ್ಷಂ ಪ್ರತಿ ಕಡಿಮೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣ ನೀತಿ ಜಾರಿಗೊಳಿಸಿ ಮತ್ತಷ್ಟು ನಿಯಂತ್ರಣ ತಂದರೆ ದೊಡ್ಡ ವಿಪತ್ತು ಎದುರಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಆತಂಕ: 2021-22ರ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲೇ ಕುಸಿಯುತ್ತಿರುವ ಜನಸಂಖ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಅದರಂತೆ 2030ರಲ್ಲಿ ರಾಜ್ಯದಲ್ಲಿನ ವಾಸ್ತವ ಜನನ ಸಂಖ್ಯೆ 10.2 ಲಕ್ಷ ಇರಬಹುದು. ಅದೇ 2030ಕ್ಕೆ ರಾಜ್ಯದ ಮರಣ ಸಂಖ್ಯೆ 12 ಲಕ್ಷ ತಲುಪಲಿದೆ ಎಂದು ಎಚ್ಚರಿಕೆ ನೀಡಿದೆ. ಜನನಕ್ಕಿಂತ ಮರಣವೇ ಹೆಚ್ಚುವುದರಿಂದ ರಾಜ್ಯದ ಜನಸಂಖ್ಯೆ ಇಳಿಕೆಯಾಗಲಿದೆ. ಹೀಗಾಗಿ ರಾಜ್ಯದ ಜನಸಂಖ್ಯಾ ಸಂಕ್ಷಿಪ್ತ ಚಿತ್ರಣವನ್ನು ಸೃಷ್ಟಿಸಲು 2030ರವರೆಗೆ ವಿಸ್ತೃತ ವಿಶ್ಲೇಷಣೆ ಮಾಡುವ ಅಗತ್ಯ ಇದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣದ ರಾಜ್ಯಗಳ ಮುಂಚೂಣಿ : ಉತ್ತರ ಭಾರತ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ಹಿಂದೆ ಬಿದ್ದಿದೆ. ಆದರೆ, ದಕ್ಷಿಣ ಭಾರತ ರಾಜ್ಯಗಳು ಮುಂಚೂಣಿಯಲ್ಲಿವೆ. ಅದರಲ್ಲೂ ಕರ್ನಾಟಕ ಅಗ್ರಗಣ್ಯ ರಾಜ್ಯವಾಗಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಗೊಳಿಸಿದರೆ ದೊಡ್ಡ ಕಂಟಕ ಎದುರಾಗಲಿದೆ ಎಂದು ಹಲವರು ಭೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜೀವದ ಉಳಿವಿಗೆ ಜೀರೋ ಟ್ರಾಫಿಕ್​.. ಮುಸ್ಲಿಂ ಯುವಕನ ಹೃದಯ ಬಡಿತಕ್ಕೆ ಚಾಲನೆ ನೀಡಿದ ಹಿಂದೂ ಬಾಲಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.