ETV Bharat / city

ದೇಶದಲ್ಲೇ ಹೆಚ್ಚು ಭೌಗೋಳಿಕ ಸೂಚ್ಯಂಕ ಉತ್ಪನ್ನ ಉತ್ಪಾದಿಸುವ ರಾಜ್ಯ ಕರ್ನಾಟಕ

author img

By

Published : Jan 29, 2021, 8:56 PM IST

Updated : Jan 29, 2021, 9:41 PM IST

ಸರಕುಗಳ ಭೌಗೋಳಿಕ ಸೂಚ್ಯಂಕಗಳ ಕಾಯ್ದೆಯಡಿ (ನೋಂದಣಿ ಹಾಗೂ ರಕ್ಷಣೆ)-1999 ಪ್ರಕಾರ, ಕರ್ನಾಟಕದಿಂದ ನೋಂದಾಯಿತ ಭೌಗೋಳಿಕ ಸೂಚ್ಯಂಕಗಳ ಸಂಖ್ಯೆ 42 ಇದೆ. ಇದು ದೇಶದಲ್ಲೇ ಹೆಚ್ಚು ಎಂದು ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು..

Karnataka has the highest 42 GI tagged products in the country
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

ಬೆಂಗಳೂರು : ದೇಶದಲ್ಲೇ ಕರ್ನಾಟಕವು ಅತಿಹೆಚ್ಚು 42 ಭೌಗೋಳಿಕ ಸೂಚ್ಯಂಕ (ಜಿಯೋಗ್ರಾಫಿಕಲ್​ ಇಂಡಿಕೇಷನ್-ಜಿಐ​) ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಅವುಗಳನ್ನು ಜನಪ್ರಿಯಗೊಳಿಸಲು ಮತ್ತು ಮಾರಾಟ ಮಾಡಲು ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಮಳಿಗೆಗಳನ್ನು ತೆರೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಭೌಗೋಳಿಕ ಕುರುಹು (ಜಿಐ)ಎಂಬುದು ಒಂದು ವಸ್ತುವಿನ ಅಥವಾ ಸಾಮಗ್ರಿಯ ಮೂಲವನ್ನು ನಿರ್ದಿಷ್ಟವಾಗಿ ಒಂದು ಭೌಗೋಳಿಕ ಸ್ಥಳಕ್ಕೆ (ಕ್ಷೇತ್ರ, ಜಾಗ, ಊರು, ದೇಶ) ಗುರುತಿಸುವ ವಿಧಾನ. ಸರಕುಗಳ ಭೌಗೋಳಿಕ ಸೂಚ್ಯಂಕಗಳ ಕಾಯ್ದೆಯಡಿ (ನೋಂದಣಿ ಹಾಗೂ ರಕ್ಷಣೆ)-1999 ಪ್ರಕಾರ, ಕರ್ನಾಟಕದಿಂದ ನೋಂದಾಯಿತ ಭೌಗೋಳಿಕ ಸೂಚ್ಯಂಕಗಳ ಸಂಖ್ಯೆ 42 ಇದೆ ಎಂದರು.

ವಿಧಾನಸಭಾ ಅಧಿವೇಶನದ ಪ್ರಶ್ನಾವಳಿ ಅವಧಿಯಲ್ಲಿ ಕಾಂಗ್ರೆಸ್​ ಶಾಸಕ ಅಬ್ಬಯ್ಯ ಪ್ರಸಾದ್​ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ಸುಮಾರು 370 ಜಿಐ ಉತ್ಪನ್ನಗಳು ನೋಂದಣಿಯಾಗಿವೆ. ಅದರಲ್ಲಿ ಕರ್ನಾಟಕ 42 ಸೇರಿವೆ. ಇದು ದೇಶದಲ್ಲೇ ಹೆಚ್ಚು. ಮೈಸೂರು ಸಿಲ್ಕ್, ಮೈಸೂರು ಅಗರಬತ್ತಿ, ಚನ್ನಪಟ್ಟಣದ ಬೊಂಬೆಗಳು, ಮೈಸೂರು ಗಂಧದ ಎಣ್ಣೆ, ಮೈಸೂರು ಸ್ಯಾಂಡಲ್​ ಸೋಪ್​, ನಂಜನಗೂಡು ಬಾಳೆಹಣ್ಣು ಸೇರಿ ಹಲವು ಇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ...ಬಂಡವಾಳ ಹೂಡುವ ಉದ್ಯಮಿಗಳಿಗೆ ನೆರವು ನೀಡಲು ಸರ್ಕಾರ ಸಿದ್ದ: ಸಚಿವ ಶೆಟ್ಟರ್

ಈ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ವಿಮಾನ ನಿಲ್ದಾಣ (ಅಂತಾರಾಷ್ಟ್ರೀಯ ಕೂಡ), ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರತ್ಯೇಕ ಮಳಿಗೆಗಳನ್ನು ತೆರೆಯಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದೇವೆ. ಕಾಯ್ದೆಯ ರಾಜ್ಯ ಭೌಗೋಳಿಕ ಸೂಚ್ಯಂಕ ನೀತಿ ಪ್ರಕಾರ, ಈ ಉತ್ಪನ್ನಗಳ ಪ್ರಚಾರ, ಜಾಗೃತಿ ಕಾರ್ಯಕ್ರಮ, ಕುಶಲಕರ್ಮಿಗಳ ನೋಂದಣಿ ಕುರಿತು ಅಧ್ಯಯನ ಕೈಗೊಳ್ಳಲು 2019ರಲ್ಲಿ ಘೋಷಿಸಲಾಗಿತ್ತು ಎಂದರು.

398 ಕುಶಲಕರ್ಮಿಗಳು ಅಧಿಕೃತ ಬಳಕೆದಾರರಾಗಿ ನೋಂದಾಯಿಸಿಕೊಂಡಿದ್ದಾರೆ. 14 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 7 ಅಧ್ಯಯನ ವರದಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಉತ್ಪನ್ನಗಳ ಪ್ರಚಾರಕ್ಕಾಗಿ ವ್ಯಾಪಾರ ಮೇಳಗಳಲ್ಲಿ ಕುಶಲಕರ್ಮಿಗಳಿಗೆ ಜಾಗವನ್ನೂ ನಿಗದಿಪಡಿಸಲಾಗಿದೆ. ಇ-ಕಾಮರ್ಸ್ (ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್) ಮೂಲಕ ಮಾರುಕಟ್ಟೆ ಬೆಂಬಲ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಭೌಗೋಳಿಕ ಸೂಚ್ಯಂಕಗಳು : ಕಸ್ತೂರಿ ನೂಲಿನ ಕಲೆ, ಮೈಸೂರು ಕುಂಚಕಲೆ, ಮೈಸೂರು ವಿಳ್ಯದ ಎಲೆ, ಮೈಸೂರು ಮಲ್ಲಿಗೆ, ಉಡುಪಿ ಮಲ್ಲಿಗೆ, ಹಡಗಲಿ ಮಲ್ಲಿಗೆ, ಮೈಸೂರು ರೇಷ್ಮೆ, ಇಳಕಲ್ ಸೀರೆಗಳು, ಮೈಸೂರು ಪಾಕ್​, ಕೊಡಗಿನ ಕಿತ್ತಳೆ, ಉಡುಪಿ ಸೀರೆಗಳು, ನವಲಗುಂದ ದೂರಿಸ್​, ಮೈಸೂರು ಅಗರಬತ್ತಿ, ಚನ್ನಪಟ್ಟಣದ ಬೊಂಬೆಗಳು, ಮೈಸೂರು ಗಂಧದ ಎಣ್ಣೆ, ಮೈಸೂರು ಸ್ಯಾಂಡಲ್​ ಸೋಪ್​, ನಂಜನಗೂಡು ಬಾಳೆಹಣ್ಣು ಹೀಗೆ 42 ಇವೆ.

Last Updated : Jan 29, 2021, 9:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.