ETV Bharat / city

ಹೊಸ ದತ್ತಾಂಶ ಕೇಂದ್ರ ನೀತಿಗೆ ಸಂಪುಟ ಅಸ್ತು.. 10 ಸಾವಿರ ಕೋಟಿ ರೂ. ಹೂಡಿಕೆ ಅಕರ್ಷಿಸುವ ಗುರಿ

author img

By

Published : Apr 19, 2022, 8:45 AM IST

ಕರ್ನಾಟಕ ದತ್ತಾಂಶ ಕೇಂದ್ರ ನೀತಿ-2022 ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 100 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಹೊಸ ನೀತಿಯ ಅನ್ವಯ ಪ್ರೋತ್ಸಾಹ ಮತ್ತು ಸಬ್ಸಿಡಿ ನೀಡಲಾಗುತ್ತದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

Minister J.C Madhuswamy
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ

ಬೆಂಗಳೂರು: 2025ರ ವೇಳೆಗೆ ದತ್ತಾಂಶ ಕೇಂದ್ರ ಉದ್ಯಮದಲ್ಲಿ 10 ಸಾವಿರ ಕೋಟಿ ರೂ. ಹೂಡಿಕೆಯನ್ನು ಅಕರ್ಷಿಸುವ ಗುರಿ ಹೊಂದಿರುವ ಹೊಸ ದತ್ತಾಂಶ ಕೇಂದ್ರ ನೀತಿಗೆ (ಡಾಟಾ ಸೆಂಟರ್ ಪಾಲಿಸಿ) ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಕರ್ನಾಟಕ ದತ್ತಾಂಶ ಕೇಂದ್ರ ನೀತಿ-2022 ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 100 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಹೊಸ ನೀತಿಯ ಅನ್ವಯ ಪ್ರೋತ್ಸಾಹ ಮತ್ತು ಸಬ್ಸಿಡಿ ನೀಡಲಾಗುತ್ತದೆ ಎಂದು ಹೇಳಿದರು.

ಕರ್ನಾಟಕ ದತ್ತಾಂಶ ಕೇಂದ್ರ ನೀತಿ-2022 ಜಾರಿಗೆ ತರಲು ತೀರ್ಮಾನ: ರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ

ದೇಶದಲ್ಲಿ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ಪ್ರಸ್ತುತ ದೇಶದಲ್ಲಿ ದತ್ತಾಂಶ ಕೇಂದ್ರದ ಉದ್ಯಮಕ್ಕೆ ಅಗ್ರ ಐದು ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ರಾಜ್ಯವು 8 ದತ್ತಾಂಶ ಕೇಂದ್ರಗಳಿಗೆ ನೆಲೆಯಾಗಿದೆ. ರಿಲಯನ್ಸ್, ಸಿಫಿ, ಎನ್‌ಟಿಟಿ, ನೆಕ್ಸ್ಟ್ ಜೆನ್, ಟ್ರೈಮ್ಯಾಕ್ಸ್, ಏರ್‌ಟೆಲ್, ಎಸ್‌ಟಿಟಿ ಪ್ರಮುಖವಾಗಿವೆ. ನೀತಿಯು 2025 ರ ವೇಳೆಗೆ ರಾಜ್ಯದಲ್ಲಿ 200 ಮೆಗಾವ್ಯಾಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ದತ್ತಾಂಶ ಕೇಂದ್ರ ಉದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶ ಇದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ದತ್ತಾಂಶ ಕೇಂದ್ರ ನೀತಿಯು ರಾಜ್ಯದಲ್ಲಿ ದತ್ತಾಂಶ ಕೇಂದ್ರಗಳ ಬೆಳವಣಿಗೆಗೆ ದೃಢವಾದ ಮತ್ತು ಉತ್ತಮ ಸಂಪರ್ಕ ಹೊಂದಿದ ಪರಿಸರ ವ್ಯವಸ್ಥೆಯನ್ನು ಒದಗಿಸುವ ಮೂಲಕ ದತ್ತಾಂಶ ಕೇಂದ್ರಗಳಿಗೆ ಬೇಡಿಕೆ ಮತ್ತು ಮೌಲ್ಯವನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಬೆಂಗಳೂರಿನ ಹೊರಗೆ ದತ್ತಾಂಶ ಶೇಖರಣಾ ಮೂಲಸೌಕರ್ಯವನ್ನು ಸ್ಥಾಪಿಸಲು ವಿಶೇಷ ಪ್ರೋತ್ಸಾಹವನ್ನು ನೀಡಲಾಗುತ್ತದೆ. 10 ಕೋಟಿ ರೂ.ವರೆಗೆ ಬಂಡವಾಳ ಸಬ್ಸಿಡಿ, 3 ಕೋಟಿ ರೂ. ವರೆಗೆ ಶೇ.10ರಷ್ಟು ಭೂ ಸಬ್ಸಿಡಿ, 10 ಎಕರೆವರೆಗೆ ಶೇ.100 ರಷ್ಟು ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ, ನೋಂದಣಿ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಜನತಾ ಆಶ್ರಯ ಮನೆಗಳಿಗೆ ಹೊಸದಾಗಿ ಅರ್ಜಿ : ರಾಜ್ಯದ ಹಲವೆಡೆ ಜನತಾ, ಆಶ್ರಯ ಯೋಜನೆಯ ಮನೆಗಳು ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಹೊಸದಾಗಿ ಅರ್ಜಿ ಕರೆಯಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಜನತಾ ಆಶ್ರಯ ಯೋಜನೆಯಡಿ ಮಂಜೂರಾದ ಮನೆಗಳನ್ನು ಫಲಾನುಭವಿಗಳು ರಾಜ್ಯದ ಹಲವೆಡೆ ನಿರ್ಮಿಸದಿರುವುದು, ಅಪೂರ್ಣಗೊಂಡಿರುವುದು ಇದೆ. ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸದಿರುವ ಕಾರಣ ಅದನ್ನು ರದ್ದುಗೊಳಿಸಿ ಮತ್ತೊಮ್ಮೆ ಹೊಸದಾಗಿ ಅರ್ಜಿ ಕರೆದು ಯೋಜನೆಯನ್ನು ಪುನರಾರಂಭಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿ : ಠೇವಣಿದಾರರನ್ನು ವಂಚಿಸುವ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆಗಳ ವಿರುದ್ಧ ದಾಖಲಾಗುವ ಹಲವು ಪ್ರಕರಣಗಳನ್ನು ಒಂದೆಡೆ ಕ್ರೋಢೀಕರಿಸಿ ಒಂದೇ ಪ್ರಕರಣವೆಂದು ಪರಿಗಣಿಸಿ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಮನವಿ ಮಾಡುವ ಸಂಬಂಧ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿ ತರಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಹೆಚ್ಚಿನ ಹಣದ ಆಸೆ ತೋರಿಸಿ ಠೇವಣಿದಾರರನ್ನು ವಂಚಿಸುವ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯ್ದೆಯು ಜಾರಿಯಲ್ಲಿದೆ. ಆದರೆ, ಹಲವು ಕಡೆಗಳಲ್ಲಿ ಎಫ್‌ಐಆರ್ ದಾಖಲಾಗಿ ಪ್ರತ್ಯೇಕ ವಿಚಾರಣೆ ನಡೆಯುತ್ತದೆ. ಇದು ಹಲವು ಗೊಂದಲಗಳಿಗೆ ಕಾರಣವಾಗಲಿರುವ ಹಿನ್ನೆಲೆ ಒಂದೆಡೆ ಎಲ್ಲವನ್ನೂ ಕ್ರೋಢೀಕರಿಸಿ ವಿಚಾರಣೆ ನಡೆಸುವುದು ಉತ್ತಮ. ಹೀಗಾಗಿ ನ್ಯಾಯಾಲಯಕ್ಕೆ ಮನವಿ ಮಾಡುವ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಇದರಿಂದ ಒಂದೇ ಪ್ರಕರಣವೆಂದೇ ಪರಿಗಣಿಸಿ ವಿಚಾರಣೆ ನಡೆಸಲು ಸಹಕಾರಿಯಾಗಲಿದೆ ಎಂದರು.

ಎಲೆವೇಟೆಡ್ ಕಾರಿಡಾರ್ ಕಾಮಗಾರಿಗೆ ಮರು ಟೆಂಡರ್: ನಗರದ ಕೋರಮಂಗಲದಲ್ಲಿನ ಸೋನಿವರ್ಲ್ಡ್ ಜಂಕ್ಷನ್‌ನಲ್ಲಿ ಸ್ಥಗಿತಗೊಂಡಿರುವ ಎಲೆವೇಟೆಡ್ ಕಾರಿಡಾರ್ ಕಾಮಗಾರಿ ಪುನರ್ ಆರಂಭಿಸುವ ಸಂಬಂಧ ಮರುಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು. ಕೋರಮಂಗಲದ ಸೋನಿವರ್ಲ್ಡ್ ಜಂಕ್ಷನ್ ಬಳಿಯ ಸುತ್ತಮುತ್ತ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಗುತ್ತಿಗೆ ನೀಡಿದ್ದ ಕಂಪನಿಯು ಕಾಮಗಾರಿಯನ್ನು ಸರಿಯಾಗಿ ಮಾಡದಿರುವ ಹಿನ್ನೆಲೆ ಟೆಂಡರ್ ರದ್ದುಪಡಿಸಲಾಗಿತ್ತು. ಇದೀಗ ಮರುಟೆಂಡರ್ ಕರೆದು ಕಾಮಗಾರಿಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

2017ರಲ್ಲಿ ಆರಂಭವಾದ ಕಾಮಗಾರಿಯು 2019ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಪ್ರಾರಂಭವಾಗಿ ನಾಲ್ಕು ವರ್ಷವಾದರೂ ಅರ್ಧದಷ್ಟು ಕಾಮಗಾರಿಯಾಗಿರಲಿಲ್ಲ. ಹೀಗಾಗಿ ಕಂಪನಿಯೊಂದಕ್ಕೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಲಾಗಿತ್ತು. ಕಾಮಗಾರಿ ಪೂರ್ಣಕ್ಕೆ ವಿಧಿಸಿದ್ದ ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಶೀಘ್ರದಲ್ಲಿಯೇ ಮರುಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಇದನ್ನೂ ಓದಿ: ಕಬ್ಬಿಣದ ಅದಿರು ರಫ್ತು ರದ್ದು ನೀತಿ ಮುಂದುವರಿಸಲು ಸಚಿವ ಸಂಪುಟ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.