ETV Bharat / city

ಅಮಿತ್‌ ಶಾ ರಾಜ್ಯ ಪ್ರವಾಸ: ಇಂದು ಮಹತ್ವದ ಕೋರ್‌ ಕಮಿಟಿ ಸಭೆ

author img

By

Published : Apr 1, 2022, 6:53 AM IST

Updated : Apr 1, 2022, 7:48 AM IST

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳು, ಪಕ್ಷ, ಸರ್ಕಾರದಲ್ಲಿ ಆಗಬೇಕಿರುವ ಬದಲಾವಣೆಗಳ ಕುರಿತಂತೆ ಚರ್ಚೆ ನಡೆಯಲಿದೆ. ಈ ವೇಳೆ, ಕೇಂದ್ರದ ವರಿಷ್ಠ ನಾಯಕ ಅಮಿತ್‌ ಶಾ ರಾಜ್ಯ ನಾಯಕರಿಗೆ ನಿರ್ದಿಷ್ಟ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Bjp core committee meeting today with amit sha
ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯ ನಂತರ ದಕ್ಷಿಣದತ್ತ ಪಕ್ಷದ ಕೇಂದ್ರೀಯ ನಾಯಕರ ಚಿತ್ತ ಇರುವ ಕಾರಣ ವರಿಷ್ಠ ನಾಯಕನ ರಾಜ್ಯ ಪ್ರವಾಸ, ಪಕ್ಷ ಹಾಗೂ ಸರ್ಕಾರದಲ್ಲಿ ಬದಲಾವಣೆಗೆ ಕಾರಣವಾಗುತ್ತಾ? ಅನ್ನೋದನ್ನು ಕಾದು ನೋಡಬೇಕು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳ ಬೆಂಗಳೂರು ಭೇಟಿಗೆ ಆಗಮಿಸಿದ ಅಮಿತ್ ಶಾ ಅವರನ್ನು ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಆರಗ ಜ್ಞಾನೇಂದ್ರ, ವಿ.ಸೋಮಣ್ಣ, ಶ್ರೀರಾಮುಲು, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಬೈರತಿ ಬಸವರಾಜ್​, ಆನಂದ್ ಸಿಂಗ್, ಶಂಕರ ಪಾಟೀಲ್ ಬಿ.ಮುನೇನಕೊಪ್ಪ, ಸಿ.ಸಿ.ಪಾಟೀಲ್, ಸಂಸದರಾದ ಪಿ.ಸಿ.ಮೋಹನ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟಿಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ

ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ, ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್​ಗೆ ತೆರಳಿದ್ದು, ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇಂದು ಸರ್ಕಾರಿ ಕಾರ್ಯಕ್ರಮಗಳ ಜೊತೆ ಪಕ್ಷದ ಚಟುವಟಿಕೆಯಲ್ಲಿಯೂ ಭಾಗಿಯಾಗುತ್ತಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸಂಜೆ 6 ಗಂಟೆಗೆ ನಡೆಯುವ ರಾಜ್ಯ ಕೋರ್ ಕಮಿಟಿ ಸಭೆ ಮಹತ್ವ ಪಡೆದುಕೊಂಡಿದೆ. ಈ ಸಭೆಯಲ್ಲಿ ಅಮಿತ್ ಶಾ, ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳ ಜೊತೆಗೆ ಪಕ್ಷ ಹಾಗೂ ಸರ್ಕಾರದಲ್ಲಿ ಆಗಬೇಕಿರುವ ಬದಲಾವಣೆಗಳ ಕುರಿತಂತೆಯೂ ಏನಾದರೂ ನಿರ್ದಿಷ್ಟ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಎಲ್ಲ ನಾಯಕರಲ್ಲಿ ಕುತೂಹಲದ ಜೊತೆಗೆ ಆತಂಕವೂ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈಗಾಗಲೇ ಪಂಚರಾಜ್ಯಗಳ ಚುನಾವಣೆ ಹಾಗೂ ರಾಜ್ಯ ವಿಧಾನಮಂಡಲ ಅಧಿವೇಶನ ಎಲ್ಲವೂ ಮುಕ್ತಾಯವಾಗಿದ್ದರಿಂದ ಸಂಪುಟ ಪುನಾರಚನೆ ಮುಂದೂಡಲು ಯಾವುದೇ ಸಕಾರಣವಿಲ್ಲದಿರುವುದರಿಂದ ಯುಗಾದಿ ನಂತರ ಶುಭ ಸುದ್ದಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸಾಕಷ್ಟು ಸಚಿವಾಕಾಂಕ್ಷಿಗಳು ಕಾಯುತ್ತಿದ್ದಾರೆ. ಈ ಕುರಿತು ಇಂದಿನ ಸಭೆಯಲ್ಲಿ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಪಷ್ಟ ಸೂಚನೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಶಾ ಅವರು ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ. ಏಪ್ರಿಲ್ 2ನೇ ವಾರದಲ್ಲಿ ರಾಜ್ಯ ನಾಯಕರು ರಾಜ್ಯ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ಪ್ರವಾಸದ ವೇಳೆ, ಪಕ್ಷದ ಸಂಘಟನೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳ ಕುರಿತಂತೆಯೂ ಜನರಿಗೆ ತಲುಪಿಸುವ ಕುರಿತು ಅಮಿತ್ ಶಾ ಕೆಲವು ಸಲಹೆ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಿಎಂ, ಅರುಣ್ ಸಿಂಗ್ ಸಭೆ: ಅಮಿತ್ ಶಾ ಆಗಮನಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪಿಸಲು ಉದ್ದೇಶಿಸಿರುವ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.

ಅಮಿತ್ ಶಾ ಭೇಟಿಯಾದ ಬೆಲ್ಲದ್: ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ನವದೆಹಲಿಯಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದರೂ ಅದರ ಮುನ್ನಾ ದಿನ ದೆಹಲಿಗೆ ಹೋಗಿ ಭೇಟಿ ಮಾಡಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಅಕ್ರಮ ಡಿನೋಟಿಫಿಕೇಶನ್​ ಆರೋಪ ಪ್ರಕರಣ.. ಬಿಎಸ್​ವೈ ವಿರುದ್ಧ ಕ್ರಿಮಿನಲ್‌ ಕೇಸ್​ ದಾಖಲಿಸುವಂತೆ ಕೋರ್ಟ್​ ಆದೇಶ

Last Updated : Apr 1, 2022, 7:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.