ETV Bharat / city

ಕ.ಸಾ.ಪ ಚುನಾವಣೆಗೆ ಮತದಾನ ಆರಂಭ: ಸಂಜೆಯೊಳಗೆ ಜಿಲ್ಲಾ ಘಟಕಾಧ್ಯಕ್ಷರ ಹೆಸರು ಘೋಷಣೆ

author img

By

Published : Nov 21, 2021, 11:01 AM IST

Updated : Nov 21, 2021, 11:20 AM IST

ಕನ್ನಡ ಸಾಹಿತ್ಯ ಪರಿಷತ್​ನ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ನೂತನ ಅಧ್ಯಕ್ಷ ಸ್ಥಾನಕ್ಕೆ ರಾಜ್ಯಾದ್ಯಂತ ಇಂದು ಬೆಳಗ್ಗೆ 8 ಗಂಟೆಯಿಂದ ಚುನಾವಣೆ ಆರಂಭವಾಗಿದೆ.

kannada-sahitya-parishat-voting-start-across-karnataka
ಕನ್ನಡ ಸಾಹಿತ್ಯ ಪರಿಷತ್​

ಬೆಂಗಳೂರು: ಕನ್ನಡದ, ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಸಂಸ್ಥೆ ಎನಿಸಿದ ಕನ್ನಡ ಸಾಹಿತ್ಯ ಪರಿಷತ್​ನ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ನೂತನ ಅಧ್ಯಕ್ಷ ಸ್ಥಾನಕ್ಕೆ ರಾಜ್ಯಾದ್ಯಂತ ಮತದಾನ ಶುರುವಾಗಿದೆ.

ಐದು ವರ್ಷಗಳಿಗೊಮ್ಮೆ ನಡೆಯುವ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆಯು ಆಯಾ ತಾಲೂಕುಗಳ ತಹಶೀಲ್ದಾರರ ನೇತೃತ್ವದಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಬಿಳಿ ಹಾಗೂ ಗುಲಾಬಿ ಬಣ್ಣದ ಮತಪತ್ರಗಳ ಮೂಲಕ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರ ಆಯ್ಕೆಗೆ 3 ಲಕ್ಷ 10 ಸಾವಿರ ಮಂದಿ ಮತದಾನ ಮಾಡಲಿದ್ದಾರೆ. ಮತಪತ್ರಗಳಲ್ಲಿ ಈ ಬಾರಿ ಅಭ್ಯರ್ಥಿಗಳ ಫೋಟೋಗಳನ್ನೂ ಅಳವಡಿಸಲಾಗಿದೆ.

ಬೆಂಗಳೂರಿನಲ್ಲಿ 36,389 ಮಂದಿ ಮತದಾನ ಮಾಡಲಿದ್ದು, ಈ ಬಾರಿ 28 ವಿಧಾನಸಭಾ ಕ್ಷೇತ್ರಗಳಲ್ಲೂ ಒಟ್ಟು 42 ಮತಗಟ್ಟೆಗಳನ್ನು ಆರಂಭಿಸಿರುವುದರಿಂದ ಗುಂಪು ಸೇರದೆ ಸಲೀಸಾಗಿ ಮತದಾನ ಮಾಡಲು ಸಾಧ್ಯವಾಗಿದೆ. ಈ ಹಿಂದಿನ ವರ್ಷಗಳಲ್ಲಿ ನ್ಯಾಷನಲ್ ಕಾಲೇಜು ಬಸವನಗುಡಿ ಒಂದೇ ಮತಗಟ್ಟೆ ಆಗಿದ್ದ ಕಾರಣ ಜನ ಗುಂಪುಗುಂಪಾಗಿ ಸೇರುತ್ತಿದ್ದರು. ಆದರೆ ಈ ಬಾರಿ ಯಾವುದೇ ಗೊಂದಲ ಇಲ್ಲದೆ ಶಾಂತಿಯುತವಾಗಿ ಚುನಾವಣೆ ಆರಂಭವಾಗಿದೆ ಎಂದು ವಿಶೇಷ ಚುನಾವಣಾಧಿಕಾರಿ ಎಸ್.ಟಿ.ಮೋಹನ್ ರಾಜು ತಿಳಿಸಿದರು.


ಚುನಾವಣಾ ಆ್ಯಪ್​​​​:

ರಾಜ್ಯ ಅಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳು, 30 ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ 223 ಅಭ್ಯರ್ಥಿಗಳು ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ 16 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ 11 ಮಂದಿ ಅಭ್ಯರ್ಥಿಗಳಿದ್ದಾರೆ. ಮತದಾರರಿಗೆ ಗೊಂದಲ ಆಗುವುದನ್ನು ತಪ್ಪಿಸಲು ಚುನಾವಣಾ ಆ್ಯಪ್ ಆರಂಭಿಸಲಾಗಿದ್ದು, ಮತದಾರರ ವಿಳಾಸ, ಮತಗಟ್ಟೆಗಳ ವಿವರವನ್ನು ನೀಡಲಾಗಿದೆ.

ಸಂಜೆ ಜಿಲ್ಲಾ ಘಟಕದ ಅಧ್ಯಕ್ಷರುಗಳ ಹೆಸರು ಘೋಷಣೆ:

ಕ.ಸಾ.ಪ ಚುನಾವಣೆಗೆ ಮತದಾನ ಆರಂಭ

ಗಡಿನಾಡು ಹಾಗೂ ಹೊರನಾಡಿನಲ್ಲಿರುವ ಮತದಾರರಿಗೆ ಹದಿನೈದು ದಿನಗಳ ಮೊದಲೇ ಪೋಸ್ಟಲ್ ಮೂಲಕ ಮತಪತ್ರಗಳನ್ನು ರವಾನಿಸಲಾಗಿದೆ. ಶೇ.70ರಷ್ಟು ಮಂದಿ ಅಂಚೆ ಮೂಲಕ ಮತದಾನ ಕೂಡಾ ಮಾಡಿದ್ದಾರೆ. ಇಂದು ಸಂಜೆ 4 ಗಂಟೆಗೆ ಮತದಾನ ಮುಗಿದ ಕೂಡಲೇ ಅದೇ ಸ್ಥಳದಲ್ಲಿ ಸಿಬ್ಬಂದಿ ಮತ ಎಣಿಕೆ ಕಾರ್ಯ ಮಾಡಲಿದ್ದಾರೆ. ಸಂಜೆ 6 ಗಂಟೆಯೊಳಗೆ ಜಿಲ್ಲಾ ಘಟಕದ ಅಧ್ಯಕ್ಷರ ಹೆಸರು ಘೋಷಣೆ ಆಗಲಿದೆ. ಅದರಂತೆ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆಯ ಮತಪತ್ರಗಳನ್ನು ವಿಧಾನಸೌಧದ ರಾಜ್ಯ ಹುಜೂರ್ ಖಜಾನೆಗೆ ತಂದು ಮತ ಎಣಿಕೆ ಮಾಡಲಾಗುತ್ತದೆ. 24 ರಂದು ರಾಜ್ಯಾಧ್ಯಕ್ಷರ ಘೋಷಣೆ ಆಗಲಿದೆ ಎಂದರು.

ಹೆಚ್ಚಿನ ಮತದಾನ ಸಾಧ್ಯತೆ:

ಹಿಂದಿನ ವರ್ಷಗಳಲ್ಲಿ ಶೇ 55, 60ರಷ್ಟು ಮಾತ್ರ ಮತದಾನ ಆಗುತ್ತಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವ ಸಾಧ್ಯತೆ ಇದೆ ಎಂದು ಎಸ್.ಟಿ.ಮೋಹನ್ ರಾಜು ತಿಳಿಸಿದರು.

Last Updated : Nov 21, 2021, 11:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.