ETV Bharat / city

ಲಾಕ್​ಡೌನ್ ವೇಳೆ ಹೆಚ್ಚಾಯ್ತು ಕೌಟುಂಬಿಕ ಕಲಹ: ಕ್ಷುಲ್ಲಕ ಕಾರಣಗಳಿಗೆ ಮನಸ್ತಾಪ, ಗಲಾಟೆ

author img

By

Published : Jul 2, 2021, 4:57 PM IST

Updated : Jul 2, 2021, 5:23 PM IST

ಕೋವಿಡ್​19 ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳು ಲಾಕ್​ಡೌನ್​ ಜಾರಿಗೊಳಿಸಲಾಗಿತ್ತು. ಲಾಕ್​ಡೌನ್​ನಿಂದಾಗಿ ಮನೆಯಲ್ಲೇ‌ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದರಿಂದ ಕೌಟುಂಬಿಕ ಕಲಹ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ವನಿತಾ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ರಾಣಿ ಶೆಟ್ಟಿ ತಿಳಿಸಿದ್ದಾರೆ.

Family conflict
Family conflict

ಬೆಂಗಳೂರು: ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳು ರಾಜ್ಯದಲ್ಲಿ ಲಾಕ್​ಡೌನ್‌ ವಿಧಿಸಲಾಗಿತ್ತು. ಈ ವೇಳೆ‌ ಕೌಟುಂಬಿಕ ಕಲಹ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವುದು ಬೆಳಕಿಗೆ ಬಂದಿದೆ.

ಲಾಕ್​ಡೌನ್​ನಿಂದಾಗಿ ಮನೆಯಲ್ಲೇ‌ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದರಿಂದ ಗಂಡ-ಹೆಂಡತಿ ಜಗಳ, ಮಕ್ಕಳಿಗಾಗಿ ವಿಚ್ಛೇದನ ಪಡೆದ ದಂಪತಿ ಗಲಾಟೆ, ಅಡುಗೆ‌ ಮಾಡಿಲ್ಲ ಎಂಬ ಕಾರಣಕ್ಕಾಗಿ ಮಹಿಳೆಯರ ಮೇಲೆ ಹಲ್ಲೆ ಸೇರಿದಂತೆ ವಿವಿಧ ರೀತಿಯ ಕೌಟುಂಬಿಕ ಕಲಹ‌ ಪ್ರಕರಣಗಳು ವರದಿಯಾಗಿವೆ. ಕಿರುಕುಳ ತಾಳಲಾರದೆ ಲಾಕ್​ಡೌನ್ ವೇಳೆ‌ ವನಿತಾ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ನೊಂದ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೌಟುಂಬಿಕ ಕಲಹ ಪ್ರಕರಣಗಳ ಕುರಿತು ಮಾಹಿತಿ ನೀಡಿದ ರಾಣಿ ಶೆಟ್ಟಿ

ಮಲ್ಲೇಶ್ವರ ಠಾಣೆಯಲ್ಲಿರುವ ವನಿತಾ ಸಹಾಯವಾಣಿ ಕೇಂದ್ರಕ್ಕೆ ಸಾಮಾನ್ಯ ದಿನಗಳಲ್ಲಿ ಅನ್ಯಾಯಕ್ಕೆ, ಶೋಷಣೆಗೆ ಒಳಗಾದವರು ಹೋಗಿ ದೂರು ನೀಡುತ್ತಿದ್ದರು. ಆದರೆ ಲಾಕ್​ಡೌನ್ ವೇಳೆ ನೊಂದ ಮಹಿಳೆಯರು ಫೋನ್​ ಮೂಲಕವೇ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ‌ಲಾಕ್​ಡೌನ್‌ ಸಮಯದಲ್ಲಿ ಪ್ರತಿದಿನ 20 ಕ್ಕೂ ಹೆಚ್ಚು ಕರೆಗಳು ಬರುತ್ತಿತ್ತು. ಕಳೆದ‌ ಏಪ್ರಿಲ್‌-ಮೇ ತಿಂಗಳಲ್ಲಿ 210 ದೂರುಗಳು ದಾಖಲಾಗಿವೆ. ಈ ಪೈಕಿ ಬಹುತೇಕ ದೂರುಗಳನ್ನು ಫೋನ್‌‌ ಮುಖಾಂತರ ಕೌನ್ಸಿಲಿಂಗ್ ಮಾಡಿಸಿ ಇತ್ಯರ್ಥ ಪಡಿಸಲಾಗಿದೆ‌ ಎಂದು ಪರಿಹಾರ ಕೇಂದ್ರದ ಮುಖ್ಯಸ್ಥೆ ರಾಣಿ ಶೆಟ್ಟಿ ತಿಳಿಸಿದ್ದಾರೆ.

ಕೌಟುಂಬಿಕ ಕಲಹಗಳಲ್ಲಿ ಹೆಂಡತಿಯರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳೇ ಹೆಚ್ಚಾಗಿವೆ. ಸಣ್ಣ-ಪುಟ್ಟ ವಿಚಾರಕ್ಕೆ ಪತ್ನಿಯರ ಮೇಲೆ‌ ಮಾರಣಾಂತಿಕ ಹಲ್ಲೆ ಆಗಿರುವುದು ಕೂಡ ವರದಿಯಾಗಿದೆ.

- ಹೇಳಿದ ಅಡುಗೆ ಮಾಡಲಿಲ್ಲವೆಂದು ಪತ್ನಿಗೆ ಮನಬಂದಂತೆ ಪತಿ ಥಳಿತ

- ಗಂಡನ ಭಯಕ್ಕೆ ಪಕ್ಕದ ಹೋಟೆಲ್​ವೊಂದರಲ್ಲಿ ಎರಡು ದಿನ ಮಗುವಿನ ಸಮೇತ ಅವಿತು ಕುಳಿತ ಪತ್ನಿ

- ತಂದೆ ಮನೆಯಲ್ಲಿ ಮಗುವನ್ನು ಕಳಿಸುವಂತೆ‌ ಪತ್ನಿ ಕಿರಿಕ್

- ಪತ್ನಿಯ ಮನೆಯಲ್ಲಿರುವ ಮಗು ಕಳಿಸುವಂತೆ ಪತಿಯ ಗಲಾಟೆ

ವಿಚಿತ್ರ ಪ್ರಕರಣಗಳ ಕರೆಗೆ ಬೇಸತ್ತ ಸಿಬ್ಬಂದಿ:

ಸಹಾಯವಾಣಿ ಕೇಂದ್ರಕ್ಕೆ ವಿಚಿತ್ರ ರೀತಿಯ ದೂರುಗಳು ಸಹ ಬಂದಿತ್ತು. ಕುಟುಂಬಸ್ಥರ ಮಾತು ಕೇಳಿ ಶೀಲ ಶಂಕಿಸಿ, ಗ್ಯಾಸ್ ಓಪನ್ ಮಾಡಿ ಕುಡಿದ ಮತ್ತಿನಲ್ಲಿ ಪತ್ನಿಯ ಕೈಯನ್ನು ಪತಿ ಕತ್ತರಿಸಿದ್ದಾನೆ. ಈ ಸಂಬಂಧ‌ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ತಪ್ಪಿತಸ್ಥರ ಮೇಲೆ ಕಾನೂ‌ನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.

ಮಹಿಳೆಯರ ಹಾಗೂ‌ ಮಕ್ಕಳ‌‌‌ ಮೇಲೆ‌‌ ಶೋಷಣೆ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. ಕುಡಿದು ಗಲಾಟೆ ಮಾಡುವುದು, ಸಾಲ ಹಾಗೂ ಉದ್ಯೋಗವಿಲ್ಲದ ಕಾರಣಕ್ಕಾಗಿಯೇ ಕೌಟುಂಬಿಕ ವಾತಾವರಣದಲ್ಲಿ ಭಿನ್ನಮತ ಮೂಡಲು ಕಾರಣವಾಗಿದೆ. ಮಾನಸಿಕ ಹಿಂಸೆ ಮತ್ತು ದೈಹಿಕ ಹಲ್ಲೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ರಜೆ ದಿನಗಳಲ್ಲಿ ಕೇಂದ್ರದ ಮಹಿಳಾ ಆಪ್ತ ಸಮಾಲೋಚಕರು ಬಿಡುವಿಲ್ಲದೆ ಫೋನ್ ಮುಖಾಂತರವೇ ಕೌನ್ಸಿಲಿಂಗ್ ಮಾಡಿದ್ದಾರೆ ಎಂದು ರಾಣಿಶೆಟ್ಟಿ ಈಟಿವಿ ಭಾರತಕ್ಕೆ ತಿಳಿಸಿದರು.

Last Updated : Jul 2, 2021, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.