ETV Bharat / city

ವಿಶ್ವ ಸ್ತನ್ಯಪಾನ ಸಪ್ತಾಹ: ಹೇಗಿದೆ ವಾಣಿ ವಿಲಾಸ ಆಸ್ಪತ್ರೆಯ ರಾಜ್ಯದ ಮೊದಲ ಹ್ಯೂಮನ್ ಮಿಲ್ಕ್ ಬ್ಯಾಂಕ್ ?

author img

By

Published : Aug 1, 2022, 7:11 AM IST

ಹುಟ್ಟುವಾಗಲೇ ತಾಯಿ ಕಳೆದುಕೊಂಡ ಹಾಗೂ ಎದೆ ಹಾಲು ಕೊರತೆಯಿಂದ ಮಕ್ಕಳು ಸಾವಿಗೀಡಾಗುವುದನ್ನು ತಪ್ಪಿಸಲು ಮೊದಲ ಬಾರಿಗೆ ರಾಜ್ಯದಲ್ಲಿ ನವಜಾತ ಶಿಶುಗಳಿಗಾಗಿ ನಗರದ ಸರ್ಕಾರಿ ವಾಣಿ ವಿಲಾಸ ಆಸ್ಪತ್ರೆಯಲ್ಲಿ 'ಅಮೃತಧಾರೆ'( ಹ್ಯೂಮನ್ ಮಿಲ್ಕ್ ಬ್ಯಾಂಕ್) ನಡೆಸಲಾಗುತ್ತಿದೆ.

Vani Vilas Hospital
ವಾಣಿ ವಿಲಾಸ ಆಸ್ಪತ್ರೆ

ಬೆಂಗಳೂರು: ಆಗಸ್ಟ್ 1 ರಿಂದ 7ನೇ ತಾರೀಖಿನವರೆಗೆ ಸ್ತನ್ಯಪಾನ ಸಪ್ತಾಹ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸ್ತನ್ಯಪಾನದ ಮಹತ್ವವನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ವರ್ಲ್ಡ್ ಅಲಿಯನ್ಸ್ ಫಾರ್ ಬ್ರೆಸ್ಟ್ ಫೀಡೀಂಗ್ ಆ್ಯಕ್ಷನ್ 1992 ರಿಂದ ಈ ಸಪ್ತಾಹವನ್ನು ಆಚರಿಸುತ್ತಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನಿಸೆಫ್ ಕೈಜೋಡಿಸಿವೆ.

ಕೋವಿಡ್‌ ಸೇರಿದಂತೆ ಹಲವು ಕಾರಣಗಳಿಂದ ವಿಳಂಬವಾಗಿದ್ದ 'ತಾಯಂದಿರ ಎದೆ ಹಾಲಿನ ಬ್ಯಾಂಕ್‌' ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದ್ದು. ನೂರಾರು ನವಜಾತ ಶಿಶುಗಳಿಗೆ ವರದಾನವಾಗಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ 'ತಾಯಂದಿರ ಎದೆ ಹಾಲಿನ ಬ್ಯಾಂಕ್‌' ನಿರ್ಮಾಣ ಮಾಡಲಾಗಿದೆ ಪ್ರತಿ ದಿನ 20 ರಿಂದ 30 ತಾಯಂದಿರಿಗೆ ಎದೆ ಹಾಲನ್ನು ನೀಡಲಾಗುತ್ತಿದೆ.

Vani Vilas Hospital
ವಾಣಿ ವಿಲಾಸ ಆಸ್ಪತ್ರೆಯಲ್ಲಿರುವ ಸೌಲಭ್ಯಗಳು

ಶಿಶುಗಳ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ಸೋಂಕು ತಡೆಗಟ್ಟಲು ತಾಯಿಯ ಎದೆ ಹಾಲು ಅತ್ಯಗತ್ಯ. ಇದು ಮಗುವಿನ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಮಿಲ್ಕ್ ಬ್ಯಾಂಕ್ ನಿರ್ಮಿಸಲಾಗಿದೆ.

ವಾರದಲ್ಲಿ 4 ರಿಂದ 6 ಲೀಟರ್‌ ಹಾಲು ಸಂಗ್ರಹ: ವಾರದಲ್ಲಿ 4 ರಿಂದ 6 ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು, ದಿನವೊಂದಕ್ಕೆ 500 ಎಂ.ಎಲ್‌ ಹಾಲು ಬೇಡಿಕೆಯನ್ನು ಪೂರೈಸಲಾಗುತ್ತಿದೆ. ದಿನದಿಂದ ದಿನಕ್ಕೆ ಹಾಲಿನ ಬೇಡಿಕೆ ಹೆಚ್ಚುತ್ತಿದೆ. ಸದ್ಯಕ್ಕೆ ರಾಜ್ಯದಲ್ಲಿರುವ ಏಕೈಕ ಎದೆ ಹಾಲಿನ ಕೇಂದ್ರ ಎನ್ನುವ ಹೆಗ್ಗಳಿಕೆಗೆ ವಾಣಿ ವಿಲಾಸ್ ಆಸ್ಪತ್ರೆ ಪಾತ್ರವಾಗಿದೆ. ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲೂ ಈ ರೀತಿಯ ಕೇಂದ್ರ ಆರಂಭಿಸಿದಲ್ಲಿ ಇನ್ನಷ್ಟು ಅನುಕೂಲವಾಗಲಿದೆ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Vani Vilas Hospital
ವಾಣಿ ವಿಲಾಸ ಆಸ್ಪತ್ರೆಯಲ್ಲಿರುವ ಸೌಲಭ್ಯಗಳು

ಜೀವಾಮೃತವಾದ ಅಮೃತಧಾರೆ: ಇಲ್ಲಿ ಅಕಾಲಿಕವಾಗಿ ಜನಿಸಿದ ಶಿಶುಗಳು, ಸಾಕಷ್ಟು ದೇಹದ ತೂಕವಿಲ್ಲದೇ ಜನಿಸಿದ ಶಿಶುಗಳು, ಅನೇಕ ಕಾರಣದಿಂದ ಸಾಕಷ್ಟು ಎದೆ ಹಾಲು ಉತ್ಪಾದಿಸಲಾಗದ ತಾಯಂದಿರ ಶಿಶುಗಳು, ವಿವಿಧ ಕಾರಣಗಳಿಗಾಗಿ ತಾಯಂದಿರಿಂದ ದೂರ ಉಳಿದಿರುವ ಶಿಶುಗಳಿಗೆ ಅಮೃತಧಾರೆ ಜೀವಾಮೃತವಾಗಿ ಪರಿಣಮಿಸಿದೆ.

ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 1,500ಕ್ಕೂ ಅಧಿಕ ಹೆರಿಗೆ: ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 1,500ಕ್ಕೂ ಅಧಿಕ ಹೆರಿಗೆಗಳಾಗುತ್ತವೆ. ಪ್ರತಿ ತಿಂಗಳು ಜನಿಸುವ ಮಕ್ಕಳಲ್ಲಿ ಕನಿಷ್ಠ 150 ಶಿಶುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಎದೆ ಹಾಲು ಅಗತ್ಯವಿರುತ್ತದೆ. ಈ ಹಿಂದೆ ತುರ್ತು ಅವಶ್ಯಕತೆಗಳಿಗೆ ನಗರದ ಖಾಸಗಿ ಮಿಲ್ಕ್ ಬ್ಯಾಂಕ್‌ ನಿಂದ ನವಜಾತ ಶಿಶುಗಳಿಗೆ ಅಗತ್ಯವಿರುವ ಎದೆ ಹಾಲು ತರಲಾಗುತ್ತಿತ್ತು.

ರಾಜ್ಯದಲ್ಲಿ ಮುಂದಿನ ದಿನದಲ್ಲಿ ಕಲಬುರಗಿ, ಬೆಳಗಾವಿ, ಮಂಗಳೂರು ವಿಭಾಗದಲ್ಲಿ ಅಮೃತಧಾರೆ ಪ್ರಾರಂಭವಾಗಲಿದೆ. ಜನಿಸುವ ಶೇ.68ರಷ್ಟು ನವಜಾತ ಶಿಶುಗಳಿಗೆ ಮಿಲ್ಕ್ ಬ್ಯಾಂಕ್ ಅವಶ್ಯಕವಿದ್ದು, ಹಾಲಿನ ಕೊರತೆಯಿಂದ ಶೇ.48ರಷ್ಟು ನವಜಾತ ಶಿಶುಗಳು ಮರಣ ಹೊಂದುತ್ತಿವೆ. ಇದರಿಂದ ಬಡ ಕುಟುಂಬಗಳಲ್ಲಿಗೆ ಸಾವಿರಾರೂ ರೂಪಾಯಿ ವ್ಯಯಿಸಿ ಎದೆ ಹಾಲು ನೀಡುವುದು ತಪ್ಪಿದಂತಾಗಿದೆ.

ಸುರಕ್ಷತೆಗೆ ಆದ್ಯತೆ: ಮಿಲ್ಕ್ ಬ್ಯಾಂಕ್‌ನಲ್ಲಿ 2 ವಿಭಾಗದಲ್ಲಿ ಎದೆ ಹಾಲು ಸಂಗ್ರಹಿಸಲಾಗುತ್ತದೆ. ಸ್ವತಃ ತಾಯಿಂದ ಮಗುವಿಗೆ, ದಾನಿ ತಾಯಿ ಹಾಲು ಇತರೆ ಮಕ್ಕಳಿಗೆ ನೀಡಲಾಗುತ್ತದೆ. ದಾನಿ ತಾಯಿಯಿಂದ ಸಂಗ್ರಹಿಸುವ ಎದೆ ಹಾಲನ್ನು ಮಕ್ಕಳ ಆರೋಗ್ಯ, ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಲನ್ನು ಹಲವು ಪ್ರಾರಂಭಿಕ ಹಂತದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ. ಬಳಿಕ ಪಾಶ್ಚರೀಕರಿಸಿ ರೋಗಾಣುಗಳನ್ನು ನಾಶ ಮಾಡಿ, ಉಳಿದ ಅಪೌಷ್ಠಿಕಾಂಶ ಭರಿತ ಹಾಲನ್ನು ಬಾಟಲಿಗೆ ಹಾಕಿ ಭದ್ರಗೊಳಿಸಲಾಗುತ್ತದೆ.

Vani Vilas Hospital
ವಾಣಿ ವಿಲಾಸ ಆಸ್ಪತ್ರೆಗೆ ಸುಧಾಕರ್​ ಭೇಟಿ

ತೂಕಕ್ಕೆ ತಕ್ಕಂತೆ ಹಾಲು: ಮಗುವಿಗೆ ತೂಕದ ಆಧಾರದ ಮೇಲೆ ಹಾಲು ನೀಡಲಾಗುತ್ತದೆ. ಒಂದು ಕೆ.ಜಿ. ತೂಕ ಹೊಂದಿರುವ ಮಗುವಿಗೆ ಮೊದಲ ದಿನ 15ರಿಂದ 20 ಎಂ.ಎಲ್, ಎರಡನೇ ದಿನ 30 ರಿಂದ 40 ಎಂಎಲ್ ಹಾಗೂ 5 ನೇಯ ದಿನ 150 ಎಂಎಲ್ ಹಾಲನ್ನು ಪ್ರತಿ ಬಾರಿ ಶಿಶುಗೆ ಹಾಲುಣಿಸುವಾಗ ನೀಡಲಾಗುತ್ತದೆ. ಸಾಮ್ಯಾನವಾಗಿ ಮಗುವಿಗೆ ದಿನವೊಂದಕ್ಕೆ 8 ರಿಂದ 12 ಬಾರಿ ಹಾಲು ನೀಡಬೇಕಾಗುತ್ತದೆ.

ಆಸ್ಪತ್ರೆಯಲ್ಲಿ ಅಗತ್ಯವಿರುವ ಶಿಶುಗಳಿಗೆ ಎದೆ ಹಾಲು: ವಾಣಿ ವಿಲಾಸ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ದಾಖಲಾಗುವ ಅಗತ್ಯವಿರುವ ಎಲ್ಲ ಶಿಶುಗಳಿಗೆ ತಾಯಿ ಎದೆ ಹಾಲು ನೀಡಲಾಗುತ್ತದೆ. ಸ್ವಯಂಪ್ರೇರಿತ ದಾನ ಮಾಡಲು ಒಪ್ಪವ ತಾಯಂದಿರ ಹಾಲನ್ನು ವಂಚಿತ ಮಕ್ಕಳಿಗೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಉಪನಿರ್ದೇಶಕ ಡಾ. ಬಸವರಾಜ್ ದಾಬಾಡಿ ಹೇಳಿದ್ದಾರೆ.

ಹಾಲು ಸಂಗ್ರಹ ಹೇಗೆ?: ಆಸ್ಪತ್ರೆಯಲ್ಲಿ ಹೆರಿಗೆಯಾಗುವ ತಾಯಂದಿರಿಂದ ಹಾಲು ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಹಾಲನ್ನು ಬ್ಯಾಕ್ಟೀರಿಯಾ ಪರೀಕ್ಷೆಗೆ ಒಳಪಡಿಸಿದ ನಂತರ -18 ಡಿಗ್ರಿ ಸೆಲ್ಸಿಯಸ್‌ ಉಧಿಷ್ಣಾಂಶದಲ್ಲಿ ಶೇಖರಿಸಿಡಲಾಗುತ್ತಿದೆ. ಇಂತಹ ಹಾಲನ್ನು ಗರಿಷ್ಠ 6 ತಿಂಗಳ ಕಾಲ ಸಂಗ್ರಹಿಸಿ ನೀಡಬಹುದು ಎನ್ನುತ್ತಾರೆ ವೈದ್ಯರು.

ಯಾರು ಅರ್ಹರು?: ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಹೊಂದಿರುವ ತಾಯಂದಿರೆಲ್ಲ ಹಾಲನ್ನು ದಾನ ಮಾಡಲು ಸಾಧ್ಯವಾಗುವುದಿಲ್ಲ. ಎಚ್‌ಐವಿ ಸೋಂಕು, ಜ್ವರ ಅಥವಾ ಇನ್ನಿತರ ಗಂಭೀರ ಸಮಸ್ಯೆಗೆ ಒಳಗಾಗಿದ್ದರೆ ಹಾಲನ್ನು ದಾನವಾಗಿ ಕೊಡುವಂತಿಲ್ಲ. ತಜ್ಞರಿಂದ ಪರೀಕ್ಷೆಗೆ ಒಳಗಾದ ಬಳಿಕವಷ್ಟೇ ಇನ್ನೊಂದು ಶಿಶುವಿಗೆ ಹಾಲನ್ನು ನೀಡಬಹುದು.

ಮಕ್ಕಳಿಗೆ ಎದೆಹಾಲು ಮುಖ್ಯ: ಮಕ್ಕಳಿಗೆ ಎದೆಹಾಲು ಉಣಿಸುವುದು ಮುಖ್ಯ. ವಿಶೇಷ ಪ್ರಕರಣಗಳಲ್ಲಿ ಹಾಲು ಉಣಿಸುವ ಶಕ್ತಿ ಕೆಲವರಿಗೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಮಿಲ್ಕ ಬ್ಯಾಂಕ್ ಮೂಲಕ ಸಂಗ್ರಹಣೆಯಾಗುವ ಹಾಲು ಮಕ್ಕಳಿಗೆ ನೆರವಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ವಾಣಿವಿಲಾಸ ಆಸ್ಪತ್ರೆಯ ಮದರ್ಸ್ ಮಿಲ್ಕ್ ಬ್ಯಾಂಕ್​ಗೆ ಕೂಡಿ ಬಂತು ಉದ್ಘಾಟನೆ ಭಾಗ್ಯ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.