ETV Bharat / city

ಕುದುರೆಗಳನ್ನು ಸರಿಯಾಗಿ ನೋಡಿಕೊಳ್ಳಲಾಗದಿದ್ದರೆ ಸ್ಥಳಾಂತರಿಸಿ: ಬಿಟಿಸಿಗೆ ಹೈಕೋರ್ಟ್ ಸೂಚನೆ

author img

By

Published : Mar 23, 2021, 7:27 PM IST

ನಿಮಗೆ ಕುದುರೆಗಳನ್ನು ಘನತೆಯಿಂದ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ರೇಸ್ ಚಟುವಟಿಕೆಗಳನ್ನು ನಿಲ್ಲಿಸಿ, ಸೂಕ್ತ ಜಾಗಕ್ಕೆ ಸ್ಥಳಾಂತರಿಸಿ. ಇಲ್ಲದಿದ್ದರೆ ಬಿಟಿಎಫ್ ಪದಾಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ಬೆಂಗಳೂರು ಟರ್ಫ್ ಕ್ಲಬ್​ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

High Court upset over Bengaluru Turf Club
ಕುದುರೆಗಳನ್ನು ಸರಿಯಾಗಿ ನೋಡಿಕೊಳ್ಳಲಾಗದಿದ್ದರೆ ಸ್ಥಳಾಂತರಿಸಿ: ಬಿಟಿಸಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕುದುರೆಗಳನ್ನು ಘನತೆಯಿಂದ ನೋಡಿಕೊಳ್ಳಲಾಗದಿದ್ದರೆ ನಿಮ್ಮ ರೇಸ್ ಚಟುವಟಿಕೆಗಳನ್ನು ನಿಲ್ಲಿಸಿ, ಅವುಗಳನ್ನು ಸೂಕ್ತ ವ್ಯವಸ್ಥೆ ಇರುವ ಕಡೆಗೆ ಸ್ಥಳಾಂತರಿಸಿ ಎಂದು ಬೆಂಗಳೂರು ಟರ್ಫ್ ಕ್ಲಬ್​ಗೆ (ಬಿಟಿಸಿ) ಹೈಕೋರ್ಟ್ ಸೂಚಿಸಿದೆ.

ಬಿಟಿಸಿಯಲ್ಲಿ ಸೂಕ್ತ ಸೌಲಭ್ಯಗಳನ್ನು ಕಲ್ಪಿಸದೆ ರೇಸ್ ಕುದುರೆಗಳನ್ನು ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ಕಂಪ್ಯಾಷನ್ ಅನ್​ ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯೂಪಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್​.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕುದುರೆಗಳ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಡಾ. ಕ್ಯಾಪ್ಟನ್ ರವಿ ರಾಯದುರ್ಗ ಅವರ ಶಿಫಾರಸುಗಳನ್ನು ಪಾಲಿಸಲು ಕಷ್ಟಸಾಧ್ಯ ಎಂಬರ್ಥದಲ್ಲಿ ಬಿಟಿಎಫ್ ಜಂಟಿ ಕಾರ್ಯದರ್ಶಿ ನಾಗೇಶ್ ಬಾಬು ಸಲ್ಲಿಸಿದ್ದ ಅಫಿಡವಿಟ್ ಗಮನಿಸಿದ ಪೀಠ, ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಬಿಟಿಸಿ ತನ್ನ ಅಫಿಡವಿಟ್​​ನಲ್ಲಿ ಕುದುರೆಗಳ ಲಾಯ ನವೀಕರಿಸಲು ಅಥವಾ ಹೊಸದಾಗಿ ನಿರ್ಮಿಸಲು ಸದ್ಯಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಸರ್ಕಾರದಿಂದ ಅನುಮತಿ ಪಡೆಯಬೇಕಿದೆ. ಹೊಸ ಲಾಯ ನಿರ್ಮಿಸಬೇಕಿದ್ದರೆ ಒಂದು ವರ್ಷ ಸಮಯ ಬೇಕಾಗುತ್ತದೆ. ಅದಕ್ಕೆ ಹಣಕಾಸಿನ ಕೊರತೆಯೂ ಇದೆ ಎಂದು ಬರೀ ನೆಪಗಳನ್ನೇ ಹೇಳಿದೆ. ಪರೋಕ್ಷವಾಗಿ ವೈದ್ಯಾಧಿಕಾರಿ ಶಿಫಾರಸುಗಳನ್ನು ಪಾಲಿಸಲು ಅಸಾಧ್ಯ ಎಂಬಂತೆ ಬಿಟಿಸಿ ತಿಳಿಸಿದೆ. ಬಿಟಿಸಿ ಕುದುರೆಗಳಿಂದಲೇ ಹಣ ಸಂಪಾದಿಸುತ್ತಿದ್ದರೂ ಅವುಗಳನ್ನು ಹೀನಾಯವಾಗಿ ನಡೆಸಿಕೊಳ್ಳುವುದು ಕ್ರೌರ್ಯವಲ್ಲದೆ ಮತ್ತೇನೂ ಅಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಅಲ್ಲದೇ, ಶಿಫಾರಸಿನಲ್ಲಿ ಶೇ. 80ರಷ್ಟು ಕುದುರೆಗಳ ಲಾಯ ಸುರಕ್ಷಿತವಲ್ಲ ಎಂದು ಹೇಳಲಾಗಿದೆ. ನಿಮಗೆ ಕುದುರೆಗಳನ್ನು ಘನತೆಯಿಂದ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ರೇಸ್ ಚಟುವಟಿಕೆಗಳನ್ನು ನಿಲ್ಲಿಸಿ, ಸೂಕ್ತ ಜಾಗಕ್ಕೆ ಸ್ಥಳಾಂತರಿಸಿ. ಇಲ್ಲದಿದ್ದರೆ ಬಿಟಿಎಫ್ ಪದಾಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ಬಿಟಿಸಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನಮ್ಮ ಉದ್ದೇಶ ಪ್ರಾಣಿಗಳ ಕ್ಷೇಮವಷ್ಟೇ. ಹೀಗಾಗಿ, ಸೂಕ್ತ ಸೌಲಭ್ಯಗಳಿರುವ ಜಾಗಕ್ಕೆ ಕುದುರೆಗಳನ್ನು ಸ್ಥಳಾಂತರಿಸುವ ಕುರಿತು ಬಿಟಿಸಿ ತನ್ನ ನಿಲುವು ತಿಳಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿತು.

ಓದಿ: ರಾಜ್ಯದಲ್ಲಿಂದು 2010 ಜನರಿಗೆ ವಕ್ಕರಿಸಿದ ಕೊರೊನಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.