ETV Bharat / city

ಉಕ್ರೇನ್‌ನಿಂದ ಹಿಂತಿರುಗಿದ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯವೇನು?: ಹೆಚ್​ಡಿಕೆ ಪ್ರಶ್ನೆ

author img

By

Published : Mar 7, 2022, 11:56 AM IST

Updated : Mar 7, 2022, 12:21 PM IST

ಆಪರೇಷನ್​ ಗಂಗಾ ಮೂಲಕ ಭಾರತಕ್ಕೆ ಹಿಂದಿರುಗಿದ ಉಕ್ರೇನ್​ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಟ್ವಿಟರ್​ನಲ್ಲಿ ಪ್ರಶ್ನಿಸಿದ್ದಾರೆ. ಉಕ್ರೇನ್​ ಶಿಕ್ಷಣ ಸಂಸ್ಥೆಗಳನ್ನು ಅದಾಗಲೇ ರಷ್ಯಾ ಕೆಡವಿದೆ. ಮತ್ತೆ ಅಲ್ಲಿ ಹೋಗಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರ್ಕಾರಗಳ ನಿಲುವು ಏನು ಎಂದು ಆಗ್ರಹಿಸಿದ್ದಾರೆ.

Former CM H.D. Kumaraswamy
ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಆಪರೇಷನ್‌ ಗಂಗಾ ಹೆಸರಿನಲ್ಲಿ ಕೇಂದ್ರ ಸರ್ಕಾರ ಉಕ್ರೇನ್‌ನಿಂದ ಭಾರತದ ವಿದ್ಯಾರ್ಥಿಗಳನ್ನು ಏರ್‌ಲಿಫ್ಟ್‌ ಮಾಡಿದೆ ಎಂಬುದೇನೋ ಸರಿ. ಆದರೆ, ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಬಂದಿರುವ ಆ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯವೇನು? ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಿದ್ಯಾರ್ಥಿಗಳು ಮತ್ತೆ ಆ ದೇಶಕ್ಕೆ ಹೋಗಲು ಸಾಧ್ಯವಿಲ್ಲ. ಅಲ್ಲಿನ ಶಿಕ್ಷಣ ಸಂಸ್ಥೆ, ವಿವಿಗಳನ್ನೂ ರಷ್ಯಾ ಸೇನೆ ಧ್ವಂಸ ಮಾಡಿದೆ ಎಂದು ಮಾಧ್ಯಮಗಳೇ ತೋರಿಸುತ್ತಿವೆ. ಕರ್ನಾಟಕದ 800 -1000 ಮಕ್ಕಳು ಸೇರಿ ಭಾರತದ 20,000ಕ್ಕೂ ಹೆಚ್ಚು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದಾರೆ. ಇನ್ನೂ ಕೆಲವರು ಬರುವವರಿದ್ದಾರೆ. ಅವರೆಲ್ಲರ ಶೈಕ್ಷಣಿಕ ಭವಿಷ್ಯದ ಪ್ರಶ್ನೆ ಏನು? ಪೋಷಕರು ಸಾಲ ಮಾಡಿ ಮಕ್ಕಳನ್ನು ಉಕ್ರೇನ್‌ಗೆ ಕಳುಹಿಸಿದ್ದರು.

ಯುದ್ಧದಿಂದ ಅವರ ಶಿಕ್ಷಣ ಅತಂತ್ರವಾಗಿದೆ. ಯುದ್ಧಭೂಮಿಯಿಂದ ಜೀವ ಉಳಿಸಿಕೊಂಡು ಬಂದ ವಿದ್ಯಾರ್ಥಿಗಳ ಭವಿಷ್ಯವನ್ನು ಮತ್ತೆ ಕಟ್ಟಿಕೊಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಕರ್ನಾಟಕದಲ್ಲಿ 50-60 ವೈದ್ಯಕೀಯ ಶಿಕ್ಷಣ ಕಾಲೇಜುಗಳಿವೆ. ಅಗತ್ಯಬಿದ್ದರೆ ಒಂದು ಪ್ರವೇಶ ಪರೀಕ್ಷೆ ನಡೆಸಿ ಇಷ್ಟೂ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಿ. ಪ್ರತಿ ಕಾಲೇಜೂ ತಲಾ 10 ಮಕ್ಕಳಿಗಾದರೂ ಉಚಿತ ಶಿಕ್ಷಣ ನೀಡಲಿ ಎಂದು ಆಗ್ರಹಿಸಿದ್ದಾರೆ.

2,65,720 ಕೋಟಿ ರೂ.ಗಳಷ್ಟು ಗಾತ್ರದ ಬಜೆಟ್​ನಲ್ಲಿ ರಾಜ್ಯಕ್ಕೆ 50ರಿಂದ 100 ಕೋಟಿ ರೂ. ಖರ್ಚು ಮಾಡುವುದು ಕಷ್ಟವೇ? ಈ ಮೊತ್ತದಲ್ಲಿ ಅರ್ಧಪಾಲನ್ನು ಕೇಂದ್ರ ಸರ್ಕಾರವೇ ನೀಡಬೇಕು. ನೀಟ್‌ ಮೂಲಕ ಶೇ 50 ಸೀಟುಗಳನ್ನು ಕೇಂದ್ರ ಇಟ್ಟುಕೊಳ್ಳುವುದಿಲ್ಲವೇ? ಎರಡೂ ಸರ್ಕಾರಗಳು ಅಂತಃಕರಣದಿಂದ ಆಲೋಚಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೈದ್ಯೋ ನಾರಾಯಣೋ ಹರಿಃ ಎಂದು ಹೇಳುತ್ತೇವೆ. ಇಷ್ಟು ವಿದ್ಯಾರ್ಥಿಗಳು ವೈದ್ಯರಾದರೆ ಹಲವಾರು ಜನರ ಜೀವ ಉಳಿಸಬಲ್ಲರು. ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸಬಹುದು. ಹಣದ ಮೂಲಕ ಶಿಕ್ಷಣಕ್ಕೆ ಬೆಲೆಕಟ್ಟಿ ಮಕ್ಕಳ ಕನಸುಗಳ ಜತೆ ವ್ಯಾಪಾರೀಕರಣ ಮಾಡುವುದು ಬೇಡ. ಕೇಂದ್ರ - ರಾಜ್ಯ ಸರ್ಕಾರಗಳು ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ:ನಮಾಮಿ ಗಂಗೆ'ಗೆ ಇದುವರೆಗೆ ಎಷ್ಟು ಕೋಟಿ ಖರ್ಚು ಮಾಡಲಾಗಿದೆ ಗೊತ್ತಾ?

Last Updated : Mar 7, 2022, 12:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.