ETV Bharat / city

ಗಲಭೆ ಪ್ರಕರಣ: ನಿಜವಾದ ತಪ್ಪಿತಸ್ಥರನ್ನು ಗುರುತಿಸಿ ಕಠಿಣ ಶಿಕ್ಷೆಗೊಳಪಡಿಸಲು ದೇವೇಗೌಡ ಆಗ್ರಹ

author img

By

Published : Aug 13, 2020, 4:41 PM IST

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಶಾಸಕನ ಮನೆಗೆ ಬೆಂಕಿ ಹಾಕಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಬಂಧಿಸಲಾಗಿರುವ ಎಲ್ಲಾ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಆಗ್ರಹಿಸಿದ್ದಾರೆ.

HD Devegowda reaction on  dj halli violence
ಹೆಚ್​​ಡಿ ದೇವೇಗೌಡ

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆ ಮೇಲಿನ ದಾಳಿ ಪ್ರಕರಣ ದುರದೃಷ್ಟಕರ. ದೇಶದ ಯಾವ ಭಾಗದಲ್ಲೂ ಇಂಥ ಪ್ರಕರಣ ನಡೆಯಬಾರದು ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡರು ದಾಳಿಯನ್ನು ಖಂಡಿಸಿದ್ದಾರೆ.

ಪಕ್ಷದ ಕಚೇರಿ ಜೆ ಪಿ ಭವನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ಸಂಬಂಧ 150 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ‌. ಇವರಲ್ಲಿ ನಿಜವಾದ ಅಪರಾಧಿಗಳು ಎಷ್ಟು? ಎಂಬುದನ್ನು ಪತ್ತೆ ಮಾಡಬೇಕು. ತಪ್ಪಿತಸ್ಥರನ್ನು ಮಾತ್ರ ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಅಂತವರ ವಿರುದ್ಧ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಳ್ಳಿ‌ ಎಂದು ಪೊಲೀಸರಿಗೆ ಮನವಿ ಮಾಡಿದರು.

ಡಿಜೆ ಹಳ್ಳಿ ಗಲಭೆ ಪ್ರಕರಣ ಕುರಿತು ಹೆಚ್. ಡಿ. ದೇವೇಗೌಡ ಪ್ರತಿಕ್ರಿಯೆ

ಪ್ರಕರಣವನ್ನು ಸಿಬಿಐಗೆ ವಹಿಸಿ ಅಂತ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ. ಈಗಿರುವ ಪೊಲೀಸ್ ಆಯುಕ್ತ ಕಮಲ್ ಪಂತ್ ಸಿಬಿಐನಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ತಾರತಮ್ಯ ಮಾಡುವುದಿಲ್ಲ ಎಂಬುದು ನನ್ನ ಭಾವನೆ. ಅಂತಿಮ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿ. ನಿಜವಾದ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಶಾಸಕರ ಮನೆ ಸುಟ್ಟಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು‌‌. ಆಗಿರುವ ಆಸ್ತಿಪಾಸ್ತಿ ನಷ್ಟದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು‌. ಶಾಸಕರಿಗೆ ಧೈರ್ಯ ತುಂಬುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು ಎಂದು ಹೆಚ್​ಡಿಡಿ ಸಲಹೆ ನೀಡಿದರು.

ಶಾಸಕರು ಹಾಗೂ ಅವರ ಕುಟುಂಬ ಕಣ್ಣೀರು ಹಾಕಿರೋದನ್ನು ನಿನ್ನೆ ಟಿವಿಯಲ್ಲಿ ನೋಡಿದ್ದೇನೆ.‌ ಅವರಿಗಾಗಿರುವ ಅನ್ಯಾಯ ಸರಿಪಡಿಸಲು, ಪರಿಹಾರ ಕೊಡಲು ಸರ್ಕಾರ ಕ್ರಮಕೈಗೊಳ್ಳಬೇಕು. ಅಖಂಡ ಶ್ರೀನಿವಾಸ್ ಮೂರ್ತಿ ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಪಕ್ಷದಲ್ಲಿ ಇದ್ದರು ಎಂಬುದು ಬೇರೆ ವಿಷಯ.‌ ಸದ್ಯ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ರಾಜಕೀಯ ಚೆಲ್ಲಾಟ ಬೇಡ

ಗಲಭೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೆಸರೆರಚಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ರಾಜಕೀಯ ಚೆಲ್ಲಾಟ ಬೇಡ. ಯಾರೂ ಮನಸ್ಸಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ‌‌‌. ಬಿಜೆಪಿ ಸಚಿವರ, ಕಾಂಗ್ರೆಸ್ ಅಧ್ಯಕ್ಷರು ಮತ್ತು ಸಿಎಲ್​ಪಿ ನಾಯಕರ ಮಾತುಗಳನ್ನು ಗಮನಿಸಿದ್ದೇನೆ. ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಣೆ ಮಾಡುವಾಗ ರಾಜಕೀಯ ಪಕ್ಷಗಳು ಮಧ್ಯ ಪ್ರವೇಶ ಮಾಡಬಾರದು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಘಟನೆ ಕುರಿತು ಈಗಾಗಲೇ ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ. ಇದಾದ ಮೇಲೂ ಕೆಲವು ಸಚಿವರು ಮಾತನಾಡುತ್ತಿದ್ದಾರೆ. ಹೀಗಾದರೆ ಸಿಎಂ ಮಾತಿಗೆ ಅರ್ಥವೇ ಇಲ್ಲವೇ ಎಂದು ಜೆಡಿಎಸ್​ ವರಿಷ್ಠರು ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.