ETV Bharat / city

ಘನತ್ಯಾಜ್ಯ ಘಟಕದಿಂದ ನದಿ ನೀರು ವಿಷ: ಪರೀಕ್ಷೆ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆಗೆ ಹೈಕೋರ್ಟ್ ಆದೇಶ

author img

By

Published : Oct 29, 2021, 3:59 AM IST

ಮಂಗಳೂರು ಘನತ್ಯಾಜ್ಯ ವಿಲೇವಾರಿ ಘಟಕದ ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಜಲಾಶಯ ಸೇರುತ್ತಿದ್ದು, ನೀರಿನಲ್ಲಿ ವಿಷಕಾರಿ ಅಂಶಗಳಿರುವುದು ಪ್ರಯೋಗಾಲಯದ ಪರೀಕ್ಷೆಯಿಂದ ತಿಳಿದು ಬಂದಿದೆ.

Karnataka highcourt
Karnataka highcourt

ಬೆಂಗಳೂರು: ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಹೊರ ಬರುವ ಕಲ್ಮಶದಿಂದ ಮಲಿನಗೊಂಡಿರುವ ಫಲ್ಗುಣಿ ನದಿ ಹಾಗೂ ಮರವೂರು ಜಲಾಶಯದ ನೀರಿನಲ್ಲಿ ವಿಷಕಾರಿ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ನೀರಿನ ಸಮಗ್ರ ಪರೀಕ್ಷೆ ನಡೆಸುವಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಗೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಕೆಎಸ್ಎಲ್ಎಸ್ಎ ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ನದಿ ಹಾಗೂ ಜಲಾಶಯದ ನೀರನ್ನು ಪರೀಕ್ಷಿಸಲು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ತಂಡ ರಚಿಸಬೇಕು. ತಂಡ 15 ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ನದಿ ಮತ್ತು ಜಲಾಶಯದ ನೀರನ್ನು ವಿವಿಧ ಹಂತಗಳಲ್ಲಿ ಪರೀಕ್ಷೆ ನಡೆಸಬೇಕು. ಪರೀಕ್ಷಾ ವರದಿಯನ್ನು 4 ವಾರಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿತು.

ಇದನ್ನೂ ಓದಿರಿ: ಘನತ್ಯಾಜ್ಯ ಘಟಕದಿಂದ ವಿಷವಾದ ನದಿ ನೀರು: ಹೈಕೋರ್ಟ್​ಗೆ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ

ಹಾಗೆಯೇ, ಐಐಎಸ್ಸಿ ತಂಡಕ್ಕೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಗತ್ಯ ಸಹಕಾರ ನೀಡಬೇಕೆಂದು ನಿರ್ದೇಶಿಸಿತು. ಇದೇ ವೇಳೆ ಪಾಲಿಕೆ ಪರ ವಾದಿಸಿದ ವಕೀಲ ಧ್ಯಾನ್ ಚಿನ್ನಪ್ಪ, ಭೂಭರ್ತಿ ಘಟಕದಲ್ಲಿ ಬಹಳ ವರ್ಷಗಳಿಂದ ಶೇಖರಣೆಯಾಗಿರುವ ತ್ಯಾಜ್ಯ ವಿಲೇವಾರಿಗೆ ಸರ್ಕಾರ 72 ಕೋಟಿ ರೂ. ಮಂಜೂರು ಮಾಡಿದೆ. ತ್ಯಾಜ್ಯ ತೆರವಿಗೆ ಟೆಂಡರ್ ಕರೆಯಲಾಗಿದ್ದು ಕೆಲಸ ಮುಗಿಯಲು ಕನಿಷ್ಠ 3 ವರ್ಷ ಬೇಕಾಗಬಹುದು ಎಂದು ತಿಳಿಸಿದರು.

ವಾದ ಆಲಿಸಿದ ಪೀಠ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ತ್ಯಾಜ್ಯ ತೆರವು ಕಾರ್ಯ ಆದಷ್ಟು ಬೇಗ ಪ್ರಾರಂಭಿಸಿ, ಮುಂದಿನ ವಿಚಾರಣೆ ವೇಳೆಗೆ ವಸ್ತುಸ್ಥಿತಿ ವರದಿ ಸಲ್ಲಿಸಿ ಎಂದು ಪಾಲಿಕೆಗೆ ನಿರ್ದೇಶಿಸಿ ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.