ETV Bharat / city

ಕಾಲೇಜುಗಳಲ್ಲಿ ಕನಿಷ್ಠ 1,500 ವಿದ್ಯಾರ್ಥಿಗಳ ದಾಖಲಾತಿ ಇರಬೇಕು: ಪ್ರಾಂಶುಪಾಲರಿಗೆ ಸಚಿವ ಅಶ್ವತ್ಥ ನಾರಾಯಣ ತಾಕೀತು

author img

By

Published : Jul 16, 2022, 7:17 AM IST

ಕೇವಲ 84 ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಶೇ.100ರಷ್ಟು ವಿದ್ಯಾರ್ಥಿಗಳು ಇದ್ದಾರೆ. 105 ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು ಸಾಮರ್ಥ್ಯದ ಶೇ.40ರಷ್ಟು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಈ ದುರವಸ್ಥೆ ತಪ್ಪಿಸಿ, ಸರ್ಕಾರಿ ಕಾಲೇಜುಗಳು ಕಲಿಕೆಗೆ ಆಕರ್ಷಕ ತಾಣಗಳಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.

Minister Ashwath Narayan
ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ

ಬೆಂಗಳೂರು: ಸರ್ಕಾರಿ ಕಾಲೇಜುಗಳು ಎಲ್ಲ ಅಗತ್ಯ ಮೂಲ ಸೌಲಭ್ಯಗಳಿಂದ ಕೂಡಿದ್ದು, ಸುಸಜ್ಜಿತವಾಗಿವೆ. ಪ್ರತಿಯೊಂದು ಕಾಲೇಜಿನಲ್ಲೂ ಕನಿಷ್ಠ ಪಕ್ಷ 1,500 ರಿಂದ 2,000 ವಿದ್ಯಾರ್ಥಿಗಳ ದಾಖಲಾತಿ ಇರುವಂತೆ ನೋಡಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ತಾಕೀತು ಮಾಡಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಇದೇ ಪ್ರಥಮ ಸಲ ಏರ್ಪಡಿಸಿದ್ದ, ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ, ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರುಗಳ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಶುಕ್ರವಾರ ಮಾತನಾಡಿದರು. ಸದ್ಯ ಕೇವಲ 84 ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಶೇ.100ರಷ್ಟು ವಿದ್ಯಾರ್ಥಿಗಳು ಇದ್ದಾರೆ. 105 ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು ಸಾಮರ್ಥ್ಯದ ಶೇ.40ರಷ್ಟು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಈ ದುರವಸ್ಥೆ ತಪ್ಪಿ, ಸರ್ಕಾರಿ ಕಾಲೇಜುಗಳು ಕಲಿಕೆಗೆ ಆಕರ್ಷಕ ತಾಣಗಳಾಗಬೇಕು ಎಂದು ಅವರು ಹೇಳಿದರು.

ಸೂಕ್ತ ಪಠ್ಯ ಅಳವಡಿಕೆ: ಕಾಲೇಜುಗಳಲ್ಲಿ ಶುಲ್ಕದ ರೂಪದಲ್ಲಿ ಸಂಗ್ರಹವಾಗುತ್ತಿರುವ ಹಣವನ್ನು ಈಗ ಆಯಾ ಕಾಲೇಜುಗಳ ಅಭಿವೃದ್ಧಿಗೆ ಕೊಡಲಾಗುತ್ತಿದೆ. ಈ ಮೂಲಕ ಸ್ವಾವಲಂಬನೆ ಮತ್ತು ಸ್ವಾಯತ್ತೆ ಒದಗಿಸಲಾಗುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಕಲಿಯಲು ಬರುವವರು ಆರ್ಥಿಕ ದುರ್ಬಲ ಕುಟುಂಬಗಳ ಮಕ್ಕಳಾಗಿರುತ್ತಾರೆ. ಇವರಿಗೆಲ್ಲ ಉದ್ಯೋಗ ಸಿಗುವಂತೆ ಮಾಡಬೇಕು. ಇದಕ್ಕಾಗಿ ಅಗತ್ಯ ಕೌಶಲ್ಯ ಕಲಿಕೆ ಮತ್ತು ಸೂಕ್ತ ಪಠ್ಯ ಅಳವಡಿಸಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಪ್ರತಿಯೊಂದು ಸರ್ಕಾರಿ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು. ಹಬ್ಬದ ವಾತಾವರಣ ಪಸರಿಸಬೇಕು. ಇದಕ್ಕೆ ವ್ಯಾಪ್ತಿಯಲ್ಲೇ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಸೂಚಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಕಲಿಕೆ: ರಾಜ್ಯದ ಉನ್ನತ ಶಿಕ್ಷಣದಲ್ಲಿ ಈಗಾಗಲೇ ಎನ್ಇಪಿ ಜಾರಿಯಾಗಿದೆ. ಇದಕ್ಕೆ ತಕ್ಕಂತೆ ಗುಣಮಟ್ಟದ ಕಲಿಕೆ ಸರ್ಕಾರಿ ಕಾಲೇಜುಗಳಲ್ಲಿ ಸಾಧ್ಯವಾಗಬೇಕು. ಈಗಾಗಲೇ ಅಭಿವೃದ್ಧಿ ಪಡಿಸಿರುವ 2,500 ಸ್ಮಾರ್ಟ್ ಕ್ಲಾಸ್ - ರೂಂಗಳಲ್ಲಿ ಪಿಪಿಟಿ, ಆಡಿಯೋ ಮತ್ತು ವಿಡಿಯೋಗಳನ್ನು ಬೋಧನೆಯಲ್ಲಿ ಅಳವಡಿಸಿ‌ಕೊಳ್ಳಬೇಕು. ಉಳಿದಿರುವ 6,500 ತರಗತಿಗಳನ್ನು ಇನ್ನು ಆರು ತಿಂಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಂಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಸಚಿವರು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯು ಪರಿಣಾಮಕಾರಿ ಕಲಿಕೆ ಸಾಧ್ಯವಾಗಿಸಲು ಕಲಿಕಾ ನಿರ್ವಹಣಾ ವ್ಯವಸ್ಥೆಯನ್ನು (ಎಲ್ಎಂಎಸ್) ಅಭಿವೃದ್ಧಿಪಡಿಸಿದೆ. ಇದರಲ್ಲಿರುವ ಪಠ್ಯ ಮತ್ತು ವಿಚಾರಗಳನ್ನು ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಬಳಸಿಕೊಳ್ಳುವಂತೆ ಪ್ರಾಂಶುಪಾಲರು ಸೂಕ್ತ ಗಮನ ಹರಿಸಬೇಕು. ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆ ವ್ಯವಸ್ಥೆ ( ಯುಯುಸಿಎಂಎಸ್) ಜಾರಿಗೆ ಬಂದಿದ್ದು ಅದನ್ನು ಪರಿಣಾಮಕಾರಿಯಾಗಿ ಪ್ರತಿಯೊಂದು ಕಾಲೇಜು ಬಳಸಬೇಕು ಎಂದು ಸಚಿವ ಅಶ್ವತ್ಥ ನಾರಾಯಣ ಸೂಚಿಸಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಅವರು‌ ಉಪಸ್ಥಿತರಿದ್ದರು.

ಇದನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ: ಎನ್ ಎಸ್ ಇ ಜೊತೆ ಶಿಕ್ಷಣ ಇಲಾಖೆ ಒಪ್ಪಂದ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.